More

    ಉಡುಪಿಯಲ್ಲಿ ಕರೊನಾ ಸ್ಫೋಟ, 32 ಮಂದಿಗೆ ಪಾಸಿಟಿವ್

    ಉಡುಪಿ: ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 10 ಮಕ್ಕಳ ಸಹಿತ 32 ಮಂದಿಗೆ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಒಟ್ಟು ಪ್ರಕರಣಗಳ ಸಂಖ್ಯೆ ಶತಕ ಮೀರಿ 108ಕ್ಕೇರಿದೆ.

    ಮಹಾರಾಷ್ಟ್ರದಿಂದ ಬಂದಿದ್ದ 28 ಮಂದಿಗೆ ದುಬೈನಿಂದ ಬಂದಿದ್ದ ಇಬ್ಬರಿಗೆ ಮತ್ತು ಹೊರ ರಾಜ್ಯ ಟ್ರಾವೆಲ್ ಹಿಸ್ಟರಿ ಹೊಂದಿರದ ಸ್ಥಳೀಯ ಇಬ್ಬರಿಗೆ ಸೋಕು ತಗುಲಿದೆ. 32 ಮಂದಿಯಲ್ಲಿ 10 ಮಹಿಳೆಯರು, 12 ಪುರುಷರು ಸೇರಿದಂತೆ ಇವರೊಂದಿಗೆ ಮಹಾರಾಷ್ಟ್ರದಿಂದ ಆಗಮಿಸಿದ 10 ಮಕ್ಕಳಿಗೆ ಕರೊನಾ ದೃಢಪಟ್ಟಿದೆ. ಇದರಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಮತ್ತು ಜಿಲ್ಲಾ ಪಂಚಾಯಿತಿ ಸಿಬ್ಬಂದಿಗೆ ಸೋಂಕು ತಗುಲಿದೆ. ಸೋಂಕಿತರ ಪ್ರಾಥಮಿಕ, ದ್ವಿತಿಯ ಹಂತದ ಸಂಪರ್ಕ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಶೀತ, ಜ್ವರ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು ಪರೀಕ್ಷೆ ನಡೆಸಿದಾಗ ಕರೊನಾ ಪತ್ತೆಯಾಗಿದೆ. ಮೇ 19ಕ್ಕೆ ಕೊನೆಯದಾಗಿ ಕಚೇರಿಗೆ ಬಂದಿದ್ದ ಸಿಬ್ಬಂದಿ ಅನಾರೋಗ್ಯ ಕಾರಣ ನೀಡಿದ್ದರು. ಕೋವಿಡ್-19 ಪರೀಕ್ಷೆ ಮಾಡಿಸಲು ಸೂಚಿಸಲಾಗಿತ್ತು. ಜಿಪಂ ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ ಬಳಕೆ ಮಾಡಲಾಗುತ್ತದೆ. ಸೀಲ್‌ಡೌನ್ ಮಾಡುವುದಿಲ್ಲ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.

    ಪೊಲೀಸರಿಗೆ ಕರೊನಾಘಾತ ಮುಂದುವರಿದಿದ್ದು, ಸೋಮವಾರ ಹೆಡ್ ಕಾನ್‌ಸ್ಟೆಬಲ್ ಓರ್ವರಿಗೆ ಪಾಸಿಟಿವ್ ವರದಿಯಾಗಿದೆ. ಆದರೆ ಯಾವ ಪೊಲೀಸ್ ಠಾಣೆ ಸಿಬ್ಬಂದಿ ಎಂದು ತಿಳಿಸಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ನಿರಾಕರಿಸಿದೆ. ಬೆಳಗ್ಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಎಸ್‌ಪಿ ಕಚೇರಿ ಸೀಲ್‌ಡೌನ್, ಸಿಬ್ಬಂದಿಗೆ ಸೋಂಕು ಎಂಬ ವಿಚಾರ ಹರಿದಾಡುತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‌ಪಿ ಎನ್.ವಿಷ್ಣುವರ್ಧನ್ ಎಸ್‌ಪಿ ಕಚೇರಿ ಸೀಲ್‌ಡೌನ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಹೆಬ್ರಿ ಠಾಣೆ ಸೀಲ್‌ಡೌನ್ : ಭಾನುವಾರ ಸೋಂಕು ದೃಢಪಟ್ಟಿದ್ದ ಕಾರ್ಕಳ ಪೊಲೀಸ್ ಠಾಣೆಯ ಸಿಬ್ಬಂದಿಗೆ ಹೆಬ್ರಿ ಠಾಣೆಯ ಸಿಬ್ಬಂದಿಯೊಬ್ಬರ ಸಂಪರ್ಕ ಇರುವ ಹಿನ್ನೆಲೆಯಲ್ಲಿ ಹೆಬ್ರಿ ಠಾಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಚೆಕ್‌ಪೋಸ್ಟ್‌ನಲ್ಲಿ ಇವರು ಒಟ್ಟಿಗೆ ಕಾರ್ಯ ನಿರ್ವಹಿಸಿದ್ದರು ಎಂದು ತಿಳಿದು ಬಂದಿದೆ. ಹೆಬ್ರಿ ಠಾಣೆ ಪಿಎಸ್‌ಐ ಸಹಿತ 20ಕ್ಕೂ ಅಧಿಕ ಸಿಬ್ಬಂದಿ ಕ್ವಾರಂಟೈನ್ ವಿಧಿಸಲಾಗಿದೆ. ಠಾಣೆಯ ಕಾರ್ಯ ನಿರ್ವಹಣೆ ಕಚೇರಿಯನ್ನು ಸಮೀಪದ ಭಜನಾ ಮಂದಿರಕ್ಕೆ ಸ್ಥಳಾಂತರಿಸಲಾಗಿದೆ. ಉಡುಪಿಯ ಪೊಲೀಸ್ ಅಧಿಕಾರಿಗಳನ್ನು ಹೆಬ್ರಿಯಲ್ಲಿ ಹೆಚ್ಚುವರಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 108ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 30ಕ್ಕೂ ಅಧಿಕ ಮಕ್ಕಳು ಸೋಂಕಿತರಾಗಿದ್ದಾರೆ.

    ಜಿಲ್ಲಾ ಪಂಚಾಯಿತಿ ಕಚೇರಿಯ ಸಿಬ್ಬಂದಿಗೆ ಕರೊನಾ ಪಾಸಿಟಿವ್ ಬಂದಿರುವುದರಿಂದ ಸಿಬ್ಬಂದಿಯ ನಿಕಟ ಸಂಪರ್ಕದಲ್ಲಿದ್ದ ನಾಲ್ವರನ್ನು ಗುರುತಿಸಲಾಗಿದ್ದು, ಕ್ವಾರಂಟೈನ್ ಒಳಪಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಾನು ಸೇರಿದಂತೆ ಜಿಲ್ಲಾ ಪಂಚಾಯಿತಿ ಅಧೀನ ಕಚೇರಿ ಅಧಿಕಾರಿಗಳು, ಸಿಬ್ಬಂದಿ ಕೋವಿಡ್-19 ಪರೀಕ್ಷೆಗೆ ಒಳಗಾಗುತ್ತೇವೆ.
    -ಪ್ರೀತಿ ಗೆಹ್ಲೋಟ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ

    ಉಡುಪಿ ಜಿಲ್ಲೆಯಲ್ಲಿ ಸೋಮವಾರ 392 ಮಂದಿಯ ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 4, ಇಲ್‌ನೆಸ್‌ಗೆ ಸಂಬಂಧಿಸಿ 3, ಕೊವಿಡ್-19 ಸಂಪರ್ಕ 41, ಹಾಟ್‌ಸ್ಪಾಟ್‌ನಿಂದ ಬಂದವರು 1154 ಮಂದಿ ಸೇರಿದಂತೆ ಒಟ್ಟು 1202 ಮಂದಿಯ ಮಾದರಿಯನ್ನು ಸೋಮವಾರ ಸಂಗ್ರಹಿಸಲಾಗಿದೆ. ಇನ್ನೂ 4540 ಮಂದಿಯ ವರದಿ ಬರಲು ಬಾಕಿ ಇದೆ. ಐಸೋಲೇಷನ್ ವಾರ್ಡ್‌ನಿಂದ 8 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
    -ಜಿ.ಜಗದೀಶ್, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts