More

    ಸುಳ್ಯಕ್ಕೆಂದು ಟಯರ್ ಫ್ಯಾಕ್ಟರಿ?

    ಗಣೇಶ್ ಮಾವಂಜಿ ಸುಳ್ಯ

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಟಯರ್ ಫ್ಯಾಕ್ಟರಿ ಪ್ರಾರಂಭಿಸುವ ಯೋಜನೆಯೊಂದು ಸುಳ್ಯದವರೇ ಆದ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಮೊಳಕೆಯೊಡೆದಿತ್ತು. ಉದ್ಯೋಗದ ನಿರೀಕ್ಷೆಯಿಂದ ಜಿಲ್ಲೆಯ, ಅದರಲ್ಲೂ ಸುಳ್ಯದ ಜನ ಇದರಿಂದ ಸಂತಸಗೊಂಡಿದ್ದರು. ಆದರೆ, ಪ್ರಸ್ತಾವನೆಗೆ ವರ್ಷ 10 ಸಂದರೂ ಅದು ಯೋಜನೆಯಾಗಿ ಪರಿವರ್ತನೆಗೊಂಡಿಲ್ಲ.

    ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಸುಳ್ಯದ ಮಂಡೆಕೋಲು ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭ, ಟಯರ್ ಫ್ಯಾಕ್ಟರಿ ಸ್ಥಾಪಿಸುವ ಭರವಸೆ ನೀಡಿದ್ದರು. ಇದಕ್ಕೆ 400ರಿಂದ 500 ಕೋಟಿ ರೂ. ಬಂಡವಾಳದ ಅವಶ್ಯಕತೆ ಇದ್ದು, ಅಜ್ಜಾವರದಲ್ಲಿ 60 ಎಕರೆ ಸರ್ಕಾರಿ ಭೂಮಿ ಲಭ್ಯವಿದೆ ಎಂದಿದ್ದರು. ಬಳಿಕ ತೊಡಿಕಾನ ಗ್ರಾಮದಲ್ಲಿರುವ ಸರ್ಕಾರಿ ಭೂಮಿಯನ್ನು ಈ ಯೋಜನೆಗೆ ಗೊತ್ತುಪಡಿಸಲಾಗಿತ್ತು.

    ಸಭೆ ನಡೆಸಿದ್ದ ಡಿವಿಎಸ್: ಈ ಯೋಜನೆ ಶೀಘ್ರದಲ್ಲಿ ತರಬೇಕೆಂಬ ಉದ್ದೇಶ ಹೊಂದಿದ್ದ ಸದಾನಂದ ಗೌಡರು, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾಗಿದ್ದ ಎಸ್.ಅಂಗಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಯೋಜನೆಗಾಗಿ ಹೆಚ್ಚಿನ ಭೂಮಿಯ ಅವಶ್ಯಕತೆ ಇದ್ದಲ್ಲಿ ಒದಗಿಸಿಕೊಡಲು ಸರ್ಕಾರ ಸಿದ್ಧವಿರುವುದಾಗಿಯೂ ತಿಳಿಸಿದ್ದರು. ಆದರೆ, ಈ ಸಭೆ ನಡೆದು ಕೆಲವೇ ತಿಂಗಳ ಅಂತರದಲ್ಲಿ ಗೌಡರು ಮುಖ್ಯಮಂತ್ರಿ ಪಟ್ಟ ಕಳೆದುಕೊಂಡರು.

    ಯೋಜನೆ ಸಾಕಾರಕ್ಕೆ ಸಕಾಲ: ಅಂದಿನ ಯೋಜನೆ ಕಾರ್ಯಗತಗೊಳಿಸಲು ಈಗ ಸಕಾಲ. ಅಂದಿನ ಸಭೆಯಲ್ಲಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಮೂರನೇ ಬಾರಿ ಸಂಸದರಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿದ್ದಾರೆ. ಶಾಸಕರಾಗಿದ್ದ ಅಂಗಾರ ಸಚಿವರಾಗಿದ್ದಾರೆ. ಕನಸು ಬಿತ್ತಿದ್ದ ಸದಾನಂದ ಗೌಡರು ಕೇಂದ್ರ ಸಚಿವರಾಗಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಆಡಳಿತವೇ ಇರುವುದು ಕನಸಿನ ಯೋಜನೆಗೆ ಮತ್ತಷ್ಟು ವರದಾನ ಎಂಬುದು ಜನರ ಅಭಿಪ್ರಾಯ.

    20,000 ಹೆಕ್ಟೇರ್‌ನಲ್ಲಿ ರಬ್ಬರ್ ಬೆಳೆ: ಒಂದು ಅಂದಾಜಿನ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 20,000 ಹೆಕ್ಟೇರ್‌ನಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ. ಇದರಲ್ಲಿ ಕೆಎಫ್‌ಡಿಸಿಯ ಅಧೀನದಲ್ಲೇ ಸುಮಾರು 4443.32 ಹೆಕ್ಟೇರ್‌ನಲ್ಲಿ ರಬ್ಬರ್ ತೋಟ ಇದ್ದು, ಜಿಲ್ಲೆಯಲ್ಲಿ ವಾರ್ಷಿಕವಾಗಿ 8000 ಟನ್‌ಗಳಷ್ಟು ರಬ್ಬರ್ ಉತ್ಪಾದನೆಯಾಗುತ್ತಿದೆ. ಹೀಗಿದ್ದಾಗ ಯೋಜಿತ ಟಯರ್ ಫ್ಯಾಕ್ಟರಿಗೆ ಬೇಕಾದ ಹೆಚ್ಚಿನ ಕಚ್ಚಾ ವಸ್ತು ಜಿಲ್ಲೆಯಲ್ಲೇ ದೊರಕಲಿದೆ.

    ರಬ್ಬರ್ ಬೆಳೆಗಾರರಿಗೆ ಸಹಾಯವಾಗುವ ನಿಟ್ಟಿನಲ್ಲಿ ಫ್ಯಾಕ್ಟರಿ ಪ್ರಾರಂಭಿಸಲು ಕೈಗಾರಿಕಾ ವಲಯದ ಅಧಿಕಾರಿಗಳಿಂದ ಕಾರ್ಯಸಾಧ್ಯತಾ ವರದಿ ತಯಾರಿಸಲಾಗಿತ್ತು. ಅಟೋಮೊಬೈಲ್ ವಲಯದ ವಿವಿಧ ಕಂಪನಿಗಳು ಯೋಜನೆಗೆ ಸಹಕಾರ ನೀಡುವ ಭರವಸೆ ನೀಡಿದ್ದವು. ಆದರೆ ನಂತರದ ಬೆಳವಣಿಗೆಯಲ್ಲಿ ಮುಂದುವರಿಯಲಿಲ್ಲ. ಪ್ರಸ್ತುತ ಸಚಿವರಾದ ಎಸ್.ಅಂಗಾರ ಮುತುವರ್ಜಿ ವಹಿಸಿ ಯೋಜನೆಗೆ ಮರುಜೀವ ನೀಡಿದರೆ ಕೇಂದ್ರದ ಸಹಾಯ ನೀಡಲು ನಾನು ಸಿದ್ಧ.
    -ಡಿ.ವಿ.ಸದಾನಂದ ಗೌಡ
    ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ

    ಟಯರ್ ಫ್ಯಾಕ್ಟರಿಯ ಯೋಜನೆಯ ಕನಸು ಹೊತ್ತ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಜತೆ ಮಾತನಾಡಿ, ಮುಂದಿನ ನಿರ್ಧಾರ ಕೈಗೊಳ್ಳುವೆ.
    -ಎಸ್.ಅಂಗಾರ
    ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts