More

    ಕಬ್ಬಿಗೆ ಉತ್ತಮ ದರ ಕೊಡಲು ಸಿದ್ಧ

    ಇಂಡಿ: ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಆಗುತ್ತಿರುವ ಸೋರಿಕೆ ತಡೆಗಟ್ಟಲು ಮತ್ತು ರೈತರ ಕಬ್ಬಿಗೆ ಉತ್ತಮ ದರ ಸಿಗಲು ನಮಗೆ ಈ ಬಾರಿ ಕಾರ್ಖಾನೆಯ ಶೇರುದಾರರು ಮತ ನೀಡಿ ಆಯ್ಕೆ ಮಾಡಬೇಕು ಎಂದು ಮಾಜಿ ಶಾಸಕ, ಕಾರ್ಖಾನೆಯ ನಿರ್ದೇಶಕ ಸ್ಥಾನದ ಅಭ್ಯರ್ಥಿ ಡಾ. ಸಾರ್ವಭೌಮ ಬಗಲಿ ಮನವಿ ಮಾಡಿದರು.

    ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆ ಆರಂಭವಾಗಿ ಐದು ವರ್ಷ ಕಳೆದರೂ ಕಾರ್ಖಾನೆಯ ಮೇಲಿನ ಸಾಲ ಮುಟ್ಟಿಲ್ಲ. ಪ್ರತಿವರ್ಷ 28ಕೋಟಿ ರೂ. ಹಾನಿಯಾಗುತ್ತಿದೆ. ಯಾವುದೇ ಒಂದು ಕಾರ್ಖಾನೆ ಕಟ್ಟಿದ ಐದು ವರ್ಷದಲ್ಲಿ ಸಾಲಮುಕ್ತವಾಗಬೇಕು. ಆದರೆ ಭೀಮಾಶಂಕರ ಕಾರ್ಖಾನೆಯಲ್ಲಿ ಸಾಲ ಹೆಚ್ಚಾಗಿದೆ. ಈ ಸಾಲ ಪ್ರತಿಯೊಬ್ಬ ಶೇರುದಾರರ ಮೇಲಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

    ನಮ್ಮನ್ನು ಆಯ್ಕೆ ಮಾಡಿದರೆ ಕಾರ್ಖಾನೆಯ ಶೇರುದಾರರಿಗೆ ಶೇ. 50ರ ಸಬ್ಸಿಡಿ ದರದಲ್ಲಿ ಪ್ರತಿವರ್ಷ 50ಕೆಜಿ ಸಕ್ಕರೆ ವಿತರಿಸಲಾಗುವುದು. ಕಾರ್ಖಾನೆಗಳಲ್ಲಿ ರೈತರಿಗೆ ಕಬ್ಬಿನ ತೂಕದಲ್ಲಿ ಮೋಸವಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರದಿಂದ ಎಲೆಕ್ಟ್ರಾನಿಕ್ ತೂಕದ ಮಶೀನ್ ಅಳವಡಿಸಿ ತೂಕದಲ್ಲಾಗುವ ಮೋಸ ತಡೆಯಲಾಗುವುದು. ಮುಂದಿನ ಐದು ವರ್ಷಗಳಲ್ಲಿ ಕಾರ್ಖಾನೆಯ ಮೇಲಿನ ಸಾಲ ತೀರಿಸಲಾಗುವುದು. ಕಬ್ಬು ಕಟಾವು ಮಾಡುವಾಗ ಕಬ್ಬು ಸಾಗಿಸುವ ಅಥವಾ ಕಾರ್ಖಾನೆಯಲ್ಲಿ ಕಬ್ಬು ನುರಿಸುವಾಗ ಅಪಘಾತ ಸಂಭವಿಸಿ ರೈತರು ಕಾರ್ಮಿಕರು ಮೃತಪಟ್ಟರೆ ಅವರಿಗೆ 5ಲಕ್ಷ ರೂ. ಪರಿಹಾರ ನೀಡಲಾಗುವುದು. ಅಪಘಾತಗೊಂಡು ಆಸ್ಪತ್ರೆಗೆ ದಾಖಲಾದರೆ ಅವರ ವೈದ್ಯಕೀಯ ವೆಚ್ಚವನ್ನು ಕಾರ್ಖಾನೆಯಿಂದ ಭರಿಸಲಾಗುವುದು. ಜಮೀನಿನಲ್ಲಿ ಬೆಳೆದಿರುವ ಕಬ್ಬು ವಿದ್ಯುತ್ ಅವಘಡ ಹಾಗೂ ಬೆಂಕಿಯಿಂದ ಸುಟ್ಟರೆ ಅಂತಹ ಕಬ್ಬನ್ನು ಕೂಡಲೇ ಕಾರ್ಖಾನೆಗೆ ಸಾಗಿಸಲಾಗುವುದು ಎಂದರು.
    ಕಾಸುಗೌಡ ಬಿರಾದಾರ, ಬಿ.ಡಿ. ಪಾಟೀಲ ಮಾತನಾಡಿ, ಕಾರ್ಖಾನೆ ಏಳಿಗೆಯಾಗಬೇಕಾದರೆ ಡಾ. ಸಾರ್ವಭೌಮ ಬಗಲಿ, ನಾಗನಾಥ ಬಿರಾದಾರ, ಮುತ್ತಪ್ಪ ಪೋತೆ ಅವರಿಗೆ ಮತದಾನ ಮಾಡುವಂತೆ ವಿನಂತಿಸಿದರು.

    ಅಭ್ಯರ್ಥಿ ನಾಗನಾಥ ಬಿರಾದಾರ ಮಾತನಾಡಿ, ಕಾರ್ಖಾನೆಗೆ ಪೂರೈಸಿದ ಕಬ್ಬಿಗೆ ಉತ್ತಮ ದರದ ಜತೆಗೆ ಶೇರುದಾರರಿಗೆ ಗೌರವ ತರುವ ಕಾರ್ಯ ಮಾಡಲು ನಾವು ಬಯಸಿದ್ದು ನಮ್ಮ ಮೂವರಿಗೂ ಮತದಾನ ಮಾಡಿ ಆರಿಸಿ ತರಬೇಕು ಎಂದು ಮನವಿ ಮಾಡಿದರು.

    ಅಯೂಬ ನಾಟೀಕಾರ, ಶಿವು ದೇವರ, ಮುಕುಂದ ಕಾಂಬಳೆ, ಮುತ್ತಪ್ಪ ಪೋತೆ, ಶ್ರೀಶೈಲಗೌಡ ಬಿರಾದಾರ, ಸಂಕೇತ ಬಗಲಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts