More

    ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ನಡೆದ ಗುಂಡಿನ ದಾಳಿಗೆ ಇಬ್ಬರು ಬಲಿ: ಟಿಎಂಸಿಯದ್ದೇ ಕೈವಾಡವೆಂಬ ಆರೋಪ

    ಮುರ್ಷಿದಾಬಾದ್​: ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಕಿಡಿಗೇಡಿಗಳಿಂದ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ ಜಿಲ್ಲೆಯಲ್ಲಿ ನಡೆದಿದೆ. ದಾಳಿ ನಡೆಸಿರುವುದು ಟಿಎಂಸಿ ಪಕ್ಷದ ಕಾರ್ಯಕರ್ತರೇ ಎನ್ನುವ ದೂರುಗಳು ಕೇಳಿ ಬರುತ್ತಿದೆ.

    ಬಹುಜನ ಕ್ರಾಂತಿ ಮೋರ್ಚಾ ವತಿಯಿಂದ ಇಂದು ಆಲ್​ ಇಂಡಿಯಾ ಬಂದ್​ ಮಾಡಲಾಗಿದ್ದು, ಇದರ ಒಂದು ಭಾಗವಾಗಿ ಸಾಹೇಬ್​ನಗರ ಮಾರ್ಕೆಟ್​ನ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಾಂತಿಯುತವಾಗಿ ಸಾಗುತ್ತಿದ್ದ ಪ್ರತಿಭಟನೆಯಲ್ಲಿ ಕೆಲ ಕಿಡಿಗೇಳಿಗಳು ನುಗ್ಗಿದ್ದು, ಬಂದೂಕಿನಿಂದ ಗುಂಡು ಹಾರಿಸಿ, ಬಾಂಬ್​ಗಳನ್ನು ತೂರಿದ್ದಾರೆ. ದಾಳಿಯಿಂದಾಗಿ ಅನರುಲ್​ ಬಿಸ್ವಾಸ್​ (55) ಸ್ಥಳದಲ್ಲೇ ಮೃತ ಪಟ್ಟಿದ್ದು, ಸಲಾವುದ್ದೀನ್​ ಶೇಖ್​ (17) ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಅಸುನೀಗಿದ್ದಾರೆ. ಉಳಿದಂತೆ ಇನ್ನು ಮೂವರು ಪ್ರತಿಭಟನಾಕಾರರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಶಾಂತಿಯುತ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆಸಿರುವುದು ಆಡಳಿತ ಪ ಕ್ಷವಾಗಿರುವ ಟಿಎಂಸಿ ಪಕ್ಷದ ಕಾರ್ಯಕರ್ತರೇ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

    “ಇಂದು ಮುಂಜಾನೆ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಟಿಎಂಸಿ ಜಲಾಂಗಿ ಬ್ಲಾಕ್​ನ ಅಧ್ಯಕ್ಷರಾಗಿರುವ ತೊಹಿರುದ್ದೀನ್​ ಮೊಂಡಲ್ ​ತನ್ನ ಸಂಗಡಿಗರೊಡನೆ ಬಂದು ಗುಂಡಿನ ದಾಳಿ ನಡೆಸಿದ್ದಾರೆ. ಒಟ್ಟು ಐದು ಕಾರುಗಳಲ್ಲಿ ಅವರು ಬಂದಿದ್ದರು” ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಇಮ್ಡಾದುಲ್​ ಹ್ಯಾಕ್​ ದೂರಿದ್ದಾರೆ.

    ಮಮತಾ ಬ್ಯಾನರ್ಜಿ ಸಿಎಎ ಮತ್ತು ಎನ್​ಆರ್​ಸಿಯನ್ನು ವಿರೋಧಿಸುತ್ತಾರೆ. ಆದರೆ ಅವರದ್ದೇ ಪಕ್ಷದ ಕಾರ್ಯಕರ್ತರು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸುತ್ತಾರೆ. ಇದರ ಅರ್ಥ ಟಿಎಂಸಿ ಪಕ್ಷದ ಕಾರ್ಯಕತರು ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ ಎಂದಾಗುತ್ತದೆ ಎಂದು ಮುರ್ಷಿದಾಬಾದ್​ನ ಕಾಂಗ್ರೆಸ್​ ವಕ್ತಾರ ಜಯಂತ್​ ದಾಸ್​ ದೂರಿದ್ದಾರೆ. ಸಿಎಎ ಜಾರಿಗೆ ಬಂದಾಗಿನಿಂದಲೂ ಸಿಪಿಐಎಂನ ಜತೆಗೂಡಿ ಕಾಂಗ್ರೆಸ್​ ಸಿಎಎಗೆ ವಿರೋಧ ವ್ಯಕ್ತ ಪಡಿಸುತ್ತಿದ್ದು ಈ ದಾಳಿಯ ಹಿಂದೆ ಟಿಎಂಸಿಯ ಕೈವಾಡವಿದೆ ಎಂದು ಎರಡೂ ಪಕ್ಷಗಳು ಆರೋಪ ಮಾಡಿವೆ.

    ಆದರೆ ಟಿಎಂಸಿ ಪಕ್ಷ ತನ್ನ ವಿರುದ್ಧದ ಆರೋಪವನ್ನು ತಳ್ಳಿ ಹಾಕಿದೆ. ಸಿಎಎ ಮತ್ತು ಎನ್​ಆರ್​ಸಿ ವಿರುದ್ಧದ ಹೋರಾಟಗಳಿಗೆ ಅಡ್ಡಿಪಡಿಸುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ತಿಳಿಸಿಲ್ಲ ಎಂದು ಮುರ್ಷಿದಾಬಾದ್​ನ ಟಿಎಂಸಿ ಅಧ್ಯಕ್ಷ ಮತ್ತು ಸಂಸದ ಅಬು ತಹೇರ್​ ಖಾನ್​ ತಿಳಿಸಿದ್ದಾರೆ. ಯಾರೇ ಈ ದುಷ್ಕೃತ್ಯವನ್ನು ಮಾಡಿದ್ದರೂ ಅವರನ್ನು ಪೊಲೀಸರು ತಕ್ಷಣವೇ ಬಂಧಿಸಿ ಸೂಕ್ತ ಶಿಕ್ಷೆಯನ್ನು ನೀಡಬೇಕು ಎಂದು ತಿಳಿಸಿರುವುದಾಗಿ ಅವರು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts