More

    ದ.ಕ. ಮತ್ತೆ ಎರಡು ಕರೊನಾ ಪಾಸಿಟಿವ್

    ಮಂಗಳೂರು/ಬಂಟ್ವಾಳ: ಬಂಟ್ವಾಳದ ಸಜಿಪನಡು ಗ್ರಾಮದ ಲಕ್ಷ್ಮಣ ಕಟ್ಟೆ ಎಂಬಲ್ಲಿನ 10 ತಿಂಗಳ ಮಗು ಹಾಗೂ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ 21 ವರ್ಷದ ಯುವಕನಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.

    ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಲ್ಲಿ ಕರೊನಾ ವೈರಸ್ ಪತ್ತೆಯಾಗಿರಲಿಲ್ಲ. ಮಾರ್ಚ್ 22ರಂದು ಭಟ್ಕಳದ ಯುವಕ ಹಾಗೂ 24ರಂದು ಕಾಸರಗೋಡಿನ ನಾಲ್ವರಲ್ಲಿ ಕರೊನಾ ದೃಢಪಟ್ಟಿತ್ತು. ಇವರೆಲ್ಲರೂ ವೆನ್ಲಾಕ್ ಕರೊನಾ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಜಿಲ್ಲೆಯ ಇಬ್ಬರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
    ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಚ್ 23ರಂದು ಮಗುವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಮಗುವಿನಲ್ಲಿ ಶಂಕಿತ ಕರೊನಾ ಸೋಂಕು ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಲ್ಯಾಬ್ ಟೆಸ್ಟಿಂಗ್ ಶಿಷ್ಟಾಚಾರದ ಪ್ರಕಾರ ರಾಜ್ಯ ತಂಡದಿಂದ ಅನುಮತಿ ಪಡೆದು ಮಗುವಿನ ಗಂಟಲು ಸ್ರಾವ ಮಾದರಿಯನ್ನು ಮಾರ್ಚ್ 25ರಂದು ಪರೀಕ್ಷೆಗೆ ರವಾನಿಸಲಾಗಿತ್ತು. 26ರಂದು ಬಂದ ವರದಿಯಲ್ಲಿ ಕರೊನಾ ಪಾಸಿಟಿವ್ ಬಂದಿದೆ.
    ಪ್ರಸ್ತುತ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಇವರಿಗಾಗಿ ಪ್ರತ್ಯೇಕ ವಾರ್ಡ್ ಮಾಡಲಾಗಿದೆ. ಅಲ್ಲಿಗೆ ಇತರರನ್ನು ಪ್ರವೇಶಿಸುವುದು ನಿಷೇಧಿಸಲಾಗಿದೆ.

    ತಾಯಿ, ಅಜ್ಜಿ ನಿಗಾದಲ್ಲಿ: ಮಗುವಿನ ಜತೆಗೆ ತಾಯಿ ಹಾಗೂ ಅಜ್ಜಿಯನ್ನೂ ವೈದ್ಯಕೀಯ ನಿಗಾದಲ್ಲಿ ಇಡಲಾಗಿದೆ. ಅವರ ಗಂಟಲಿನ ದ್ರವದ ಮಾದರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ನರಿಂಗಾನ ಗ್ರಾಮದ ಮೊಂಟೆಪದವಿನಲ್ಲಿ ಮಗುವಿನ ಅಜ್ಜಿಯ ಮನೆ ಇದ್ದು, ವೈದ್ಯಾಧಿಕಾರಿಗಳು ಅಲ್ಲಿಗೆ ತೆರಳಿ ಮನೆಯವರನ್ನು ಪರೀಕ್ಷೆಗೊಳಪಡಿಸಿದ್ದಾರೆ. ಮನೆಯವರೆಲ್ಲರೂ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಮಗುವಿನಲ್ಲಿ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಸಂಪರ್ಕದಲ್ಲಿ ಇದ್ದ ಆರು ಮಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಹತ್ತಿರ ಸಂಬಂಧಿಗಳನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ. ಮಗುವಿನ ರಕ್ತದ ಮಾದರಿ ಮರು ಪರೀಕ್ಷೆಗೆ ರವಾನಿಸಲಾಗಿದೆ. ಪ್ರಸ್ತುತ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
    ಮಗುವಿನ ತಾಯಿ ತನ್ನ ತವರು ಮನೆ ಬಿ.ಮೂಡ ಗ್ರಾಮದ ಮೊಡಂಕಾಪುವಿಗೆ ಭೇಟಿ ನೀಡಿರುವುದಾಗಿ ತಿಳಿಸಿದ್ದು, ಆ ಮನೆಯನ್ನು ಬ್ಲಾಕ್ ಡೌನ್ ಮಾಡಿ ನಿಗಾ ಇರಿಸಲಾಗಿದೆ.

    ಕೇರಳಕ್ಕೆ ಹೋಗಿತ್ತು ಕುಟುಂಬ!: ಸೋಂಕು ಪೀಡಿತ ಮಗುವಿನ ಕುಟುಂಬ ಕರೊನಾ ಪೀಡಿತ ದೇಶಗಳಿಗೆ ಪ್ರಯಾಣ ಬೆಳೆಸಿರಲಿಲ್ಲ. ಆದರೆ ಮಗು ಸಮೇತ ಕುಟುಂಬ ಕೆಲವು ದಿನಗಳ ಹಿಂದೆ ಕೇರಳದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿ ಬಂದಿತ್ತು. ಈ ಸಂದರ್ಭ ಕರೊನಾ ವೈರಸ್ ತಗಲಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
    ಕ್ವಾರಂಟೈನ್‌ನಲ್ಲಿ ಸಜಿಪನಡು: ಮುನ್ನೆಚ್ಚರಿಕೆ ಕ್ರಮವಾಗಿ ಸಜಿಪನಡು ಗ್ರಾಮವನ್ನು ಕ್ವಾರಂಟೈನ್ ಮಾಡಲಾಗಿದೆ. ಯಾವುದೇ ವ್ಯಕ್ತಿಗಳು ಸಜಿಪನಡು ಗ್ರಾಮದಿಂದ ಹೊರಗೆ ಹಾಗೂ ಒಳಗೆ ಪ್ರವೇಶಿಸುವಂತಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
    ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಗ್ರಾಮದ ಮನೆಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಗ್ರಾಮಸ್ಥರು ಮನೆಬಿಟ್ಟು ಹೊರ ಹೋಗುವಂತಿಲ್ಲ, ಅಗತ್ಯ ವಸ್ತುಗಳು ಬೇಕಾಗಿದ್ದಲ್ಲಿ ಸ್ಥಳೀಯ ಗ್ರಾಪಂ ಮೂಲಕ ಒದಗಿಸಲಾಗುವುದು ಎಂದು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.  ಸಜೀಪನಡುವಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದು, ಸಜೀಪನಡು ಜಂಕ್ಷನ್‌ನಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಜೀಪಮೂಡ ಗ್ರಾಮದ ಬೇಂಕ್ಯ ಎಂಬಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಸಂಚರಿಸುವ ವಾಹನಗಳ ಮೇಲೂ ನಿಗಾ ಇಟ್ಟಿದ್ದಾರೆ.

    ಸಜೀಪನಡುವಿನಲ್ಲಿ ಮಗವಿಗೆ ಕೋವಿಡ್ 19 ಸೋಂಕು ಬಾಧಿಸಿರುವ ಸುದ್ದಿ ಗುರುವಾರ ಸಂಜೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನರಲ್ಲಿ ಆತಂಕ ಉಂಟಾಗಿತ್ತು. ಕಂಚಿನಡ್ಕ ಪದವು ರಸ್ತೆಗೆ ಕಲ್ಲುಗಳನ್ನು ಅಡ್ಡ ಇಟ್ಟು ಯಾರೂ ಸಜೀಪನಡುವಿಗೆ ಬಾರದಂತೆ ಎಚ್ಚರವಹಿಸಿ ಎನ್ನುವ ಸಂದೇಶ ಹರಿಯಬಿಡಲಾಗಿತ್ತು. ಈಗ ಖಚಿತಗೊಳ್ಳುವುದರೊಂದಿಗೆ ಪರಿಸರದ ಜನರಲ್ಲಿ ಆತಂಕ ಇನ್ನೂ ಹೆಚ್ಚಾಗಿದೆ. ಸ್ಥಳಕ್ಕೆ ಶಾಸಕ ಯು.ಟಿ.ಖಾದರ್ ಭೇಟಿ ನೀಡಿದ್ದಾರೆ.

    ಜನ ಮನೆಬಿಟ್ಟು ಹೊರ ಬರಲಾಗದ ಪರಿಸ್ಥಿತಿ ಇದೆ. ಇಲ್ಲಿ ಬಡವರು, ಕೂಲಿ ಕಾರ್ಮಿಕರು ಹೆಚ್ಚು ಇದ್ದು, ಗ್ರಾಮವನ್ನು ಕರೊನಾ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ ವಿಶೇಷ ಪ್ಯಾಕೇಜ್ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

    ದುಬೈಯಿಂದ ಬಂದಿದ್ದ ಕರಾಯ ಯುವಕ:
    ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ನಿವಾಸಿ 21 ವರ್ಷದ ವ್ಯಕ್ತಿಯಲ್ಲಿ ಕರೊನಾ ದೃಢಪಟ್ಟಿದೆ. ಮಾ.21ರಂದು ದುಬೈಯಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಬೆಂಗಳೂರಿನಿಂದ ಬೆಳ್ತಂಗಡಿಗೆ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಪ್ರಯಾಣಿಸಿದ್ದರು.

    ಈ ವ್ಯಕ್ತಿ ಜ್ವರ ಹಾಗೂ ಕೆಮ್ಮುನಿಂದ ಬಳಲುತ್ತಿದ್ದು, ಮಾ.24ರಂದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಲ್ಯಾಬ್ ಟೆಸ್ಟಿಂಗ್ ಶಿಷ್ಟಾಚಾರದ ಪ್ರಕಾರ ರಾಜ್ಯ ತಂಡದಿಂದ ಅನುಮತಿ ಪಡೆದು ಮಾ.24ರಂದು ವ್ಯಕ್ತಿಯ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಮಾ.27ರಂದು ವರದಿ ಬಂದಿದ್ದು ಪಾಸಿಟಿವ್ ಎಂದು ದೃಢಪಟ್ಟಿದೆ. ಯುವಕನನ್ನು ವೆನ್ಲಾಕ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
    ವ್ಯಕ್ತಿಯ ಹತ್ತಿರದ ಸಂಬಂಧಿಗಳನ್ನು ತೀವ್ರ ನಿಗಾವಣೆಯಲ್ಲಿಡಲಾಗಿದೆ. ಪ್ರಸ್ತುತ ವ್ಯಕ್ತಿಯ ಆರೋಗ್ಯ ಸ್ಥಿತಿ ಸ್ಥಿರವಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

    ಎಲ್ಲೆಡೆ ತಿರುಗಾಡಿದ್ದರಿಂದ ಆತಂಕ: ಯುವಕ ವಿದೇಶದಿಂದ ಬಂದಾಕ್ಷಣ ನೆರೆಹೊರೆಯವರೊಡನೆ ಬೆರೆತುಕೊಂಡಿದ್ದ. ಧಾರ್ಮಿಕ ಕೇಂದ್ರಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗಿದ್ದ, ಗೆಳೆಯರೊಡನೆ ಕ್ರಿಕೆಟ್ ಪಂದ್ಯಾಟವಾಡಿದ್ದ, ಕಲ್ಲೇರಿ ಪರಿಸರಕ್ಕೆ ವ್ಯಾಪಾರ ಕೇಂದ್ರವಾಗಿರುವ ಉಪ್ಪಿನಂಗಡಿಯ ಅಂಗಡಿಗಳಿಗೂ ಭೇಟಿ ನೀಡಿದ್ದ. ಹೊಟ್ಟೆನೋವು ಹಾಗೂ ಉಸಿರಾಟದ ತೊಂದರೆಗೆ ಸಿಲುಕಿದ್ದ ಯುವಕನ ಬಗ್ಗೆ ಸ್ಥಳೀಯರು ಪಂಚಾಯಿತಿ ಆಡಳಿತಕ್ಕೆ ದೂರು ಸಲ್ಲಿಸಿದ್ದರಿಂದ ಅಧಿಕಾರಿಗಳು ಯುವಕನಿಗೆ ಆಸ್ಪತ್ರೆಗೆ ದಾಖಲಾಗಲು ಸೂಚಿಸಿದ್ದರು. ಆಸ್ಪತ್ರೆಗೆ ದಾಖಲಾಗುವ ಮುನ್ನ ಯುವಕ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಆಗಮಿಸಿ ತಾನೇನು ಮಾಡಬೇಕೆಂದು ವಿಚಾರಿಸಿದ್ದ. ಪೊಲೀಸರು ಕೂಡಲೇ ಆತನನ್ನು ಬಂದ ವಾಹನದಲ್ಲೇ ಪುತ್ತೂರು ಆಸ್ಪತ್ರೆಗೆ ಹೋಗಿ ದಾಖಲಾಗಲು ತಿಳಿಸಿದ್ದರು.

    ಕಲ್ಲೇರಿಗೆ ದಿಗ್ಬಂಧನ: ಯುವಕನಿಗೆ ಕರೊನಾ ಸೋಂಕು ಇರುವುದು ದೃಢವಾಗಿದ್ದು, ಈ ಹಿನ್ನೆಲೆಯಲ್ಲಿ ತಣ್ಣೀರುಪಂಥ ಗ್ರಾಪಂ ವ್ಯಾಪ್ತಿಯ ಕಲ್ಲೇರಿ ಜನತಾ ಕಾಲನಿಯನ್ನು ಸಂಪೂರ್ಣ ದಿಗ್ಬಂಧನಕ್ಕೆ ಒಳಪಡಿಸಿ ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಆದೇಶ ನೀಡಿದ್ದಾರೆ.
    ಶುಕ್ರವಾರ ಸಂಜೆ ತಣ್ಣೀರುಪಂಥ ಗ್ರಾಪಂಗೆ ಆಗಮಿಸಿ ಸಭೆ ಕರೆದ ಅವರು, ಕಲ್ಲೇರಿ ಜನತಾ ಕಾಲನಿಯವರು ಬೇರೆ ಕಡೆ ಹಾಗೂ ಬೇರೆ ಕಡೆಯವರು ಇಲ್ಲಿಗೆ ಪ್ರವೇಶಿಸದಂತೆ ಎಲ್ಲ ರಸ್ತೆಗಳಲ್ಲಿ ದಿಗ್ಬಂಧನ ವಿಧಿಸಲು ಸೂಚನೆ ನೀಡಿದರು. ಇಲ್ಲಿ 150 ಮನೆಗಳು ನಿರ್ಬಂಧಗೊಳಗಾಗಿದ್ದು, ಇಲ್ಲಿನವರಿಗೆ ಬೇಕಾದ ಅಗತ್ಯ ವಸ್ತುಗಳ ಪೂರೈಕೆಗೆ ಗ್ರಾಮದ ಸ್ವಯಂಸೇವಕರ ತಂಡ ರಚಿಸಲಾಯಿತು. ಅಗತ್ಯ ವಸ್ತುಗಳ ಖರೀದಿಗೆ ಹಣದ ಸಮಸ್ಯೆಯಾದಲ್ಲಿ ಮುಂದೆ ಅವರಿಗೆ ಆಹಾರವನ್ನು ತಲುಪಿಸುವ ವ್ಯವಸ್ಥೆ ಮಾಡಲು ಸಭೆಯಲ್ಲಿ ನಿರ್ಧಾರ ತಳೆಯಲಾಯಿತು. ಈ ದಿಗ್ಬಂಧನದಿಂದಾಗಿ ತಣ್ಣೀರುಪಂಥ ಮೂಲಕವಾಗಿ ಕಕ್ಕೆಪದವು ಹಾಗೂ ಮಡಂತ್ಯಾರು ಸಂಚಾರಕ್ಕೆ ತಡೆಯುಂಟಾಗಿದೆ.

    ದಕ್ಷಿಣ ಕನ್ನಡ 6 ಮಂದಿ ಆಸ್ಪತ್ರೆಗೆ: ಮಂಗಳೂರು: ಕರೊನಾ ವೈರಸ್ ಶಂಕೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 6 ಮಂದಿಯನ್ನು ಆಸ್ಪತ್ರೆಯ ನಿಗಾ ವಿಭಾಗಕ್ಕೆ ದಾಖಲು ಮಾಡಲಾಗಿದೆ. 5 ಮಂದಿಯ ವರದಿ ಬಂದಿದ್ದು, 10 ತಿಂಗಳ ಮಗುವಿನಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಉಳಿದ ನಾಲ್ವರ ವರದಿ ನೆಗೆಟಿವ್ ಬಂದಿದೆ.
    ಜಿಲ್ಲೆಯಲ್ಲಿ 64 ಮಂದಿಯನ್ನು ತಪಾಸಣೆ ನಡೆಸಲಾಗಿದೆ. ಇದುವರೆಗೆ 38,115 ಮಂದಿಯನ್ನು ತಪಾಸಣೆ ಮಾಡಲಾಗಿದೆ. 3032 ಮಂದಿ ಮನೆ ನಿಗಾದಲ್ಲಿದ್ದಾರೆ. 28 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. 15 ಮಂದಿಯ ಗಂಟಲಿನ ದ್ರವವನ್ನು ತಪಾಸಣೆಗೆ ಕಳುಹಿಸಲಾಗಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಇದುವರೆಗೆ 3,20,359 ಮನೆಗಳಿಗೆ ಭೇಟಿ ನೀಡಿ 13,17,439 ಮಂದಿಯನ್ನು ಸಂಪರ್ಕಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ವಿದೇಶದಿಂದ ಬಂದ ಪ್ರಯಾಣಿಕರನ್ನು ಮನೆಯಲ್ಲಿಯೇ ಇರುವಂತೆ ಮಾಹಿತಿ ನೀಡಿದ್ದಾರೆ. ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಸಿದ್ಧಗೊಳಿಸುವ ಅಗತ್ಯ ಕ್ರಮಗಳು ನಡೆಯುತ್ತಿವೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

    ಉಡುಪಿ 21 ಮಂದಿ ಆಸ್ಪತ್ರೆಗಳಿಗೆ ದಾಖಲು: ಉಡುಪಿ: ಕರೊನಾ ಶಂಕೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 21 ಮಂದಿ ದಾಖಲಾಗಿದ್ದಾರೆ ಎಂದು ಡಿಎಚ್‌ಒ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
    ಶುಕ್ರವಾರ ಯಾವುದೇ ವರದಿ ಬಂದಿಲ್ಲ. 21 ಮಂದಿಯಲ್ಲಿ 16 ಮಂದಿ ವಿದೇಶ ಪ್ರಯಾಣ ಮಾಡಿದವರು. ಇಲ್ಲಿವರೆಗೆ 124 ಶಂಕಿತರನ್ನು ಪರೀಕ್ಷೆಗೆ ಒಳಪಡಿಸಿದ್ದು, ಈಗಾಗಲೇ 92 ವರದಿ ಬಂದಿದೆ. ಅದರಲ್ಲಿ ಒಂದು ಪಾಸಿಟಿವ್ ಎಂದು ದೃಡಪಟ್ಟಿದೆ. 91 ಮಂದಿಯದು ನೆಗೆಟಿವ್. ಇನ್ನೂ 32 ಮಂದಿಯ ವರದಿ ಬರಲು ಬಾಕಿ ಇದೆ ಎಂದು ಡಿಎಚ್‌ಒ ತಿಳಿಸಿದ್ದಾರೆ. ಕರೊನಾ ಸೊಂಕಿತ ವ್ಯಕ್ತಿಗೆ ಚಿಕಿತ್ಸೆ ಮುಂದುವರಿದಿದ್ದು, ಆತನು ಸಂಪರ್ಕ ಹೊಂದಿದ್ದ ವಿವರಗಳ ಬಗ್ಗೆ ಇಲಾಖೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಜಿಲ್ಲೆಯಲ್ಲಿ ಒಟ್ಟು 1429 ಮಂದಿಯನ್ನು ತಪಾಸಣೆ ನಡೆಸಲಾಗಿದ್ದು, 99 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಆಸ್ಪತ್ರೆಗಳಲ್ಲಿ 30 ಮಂದಿ ಇದ್ದಾರೆ, 28 ದಿನಗಳ ಹೋಂ ಕ್ವಾರಂಟೈನ್ ಪೂರ್ಣಗೊಳಿಸಿದವರು 128 ಮಂದಿ, ಆಸ್ಪತ್ರೆ ದಾಖಲಾತಿ ನಿಗಾದಲ್ಲಿರುವರು 57 ಮಂದಿ ಎಂದು ಇಲಾಖೆ ತಿಳಿಸಿದೆ.

    ಕಾಸರಗೋಡಿನಲ್ಲಿ ಒಂದೇ ದಿನ 34 ಮಂದಿಯಲ್ಲಿ ಸೋಂಕು ಪತ್ತೆ:
    ಕಾಸರಗೋಡು:
    ಜಿಲ್ಲೆಯಲ್ಲಿ ಕರೊನಾ ವೈರಸ್ ಮತ್ತಷ್ಟು ವ್ಯಾಪಕವಾಗುತ್ತಿದೆ. ಶುಕ್ರವಾರ ಒಂದೇ ದಿನ ಜಿಲ್ಲೆಯ 34 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
    ಕೇರಳದಲ್ಲಿ ಶುಕ್ರವಾರ 39 ಕರೊನಾ ವೈರಸ್ ಪ್ರಕರಣ ಪತ್ತೆಯಾಗಿದ್ದು, ಇವರಲ್ಲಿ 34 ಮಂದಿ ಕಾಸರಗೋಡು ನಿವಾಸಿಗಳು. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 81ಕ್ಕೇರಿದೆ. ರಾಜ್ಯದಲ್ಲಿ 164ಕ್ಕೆ ಏರಿಕೆಯಾಗಿದೆ.
    ಕಾಸರಗೋಡಿನ ಜನತೆ ಆತಂಕಪಡಬೇಕಾಗಿಲ್ಲ. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಕೇರಳ- ಕರ್ನಾಟಕ ಗಡಿ ಪ್ರದೇಶಗಳಲ್ಲಿ ಕರ್ನಾಟಕ ಸರ್ಕಾರ ರಸ್ತೆಗೆ ಮಣ್ಣು ಸುರಿದು ಹಾಗೂ ಅಗೆದು ತಡೆ ನಿರ್ಮಾಣ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ.

    ಕಾಸರಗೋಡು ಜನರಲ್ ಆಸ್ಪತ್ರೆ, ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆ, ಉಕ್ಕಿನಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನೂ ಕೋವಿಡ್ ಆಸ್ಪತ್ರೆಯನ್ನಾಗಿ ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು. ಪೆರಿಯ ಕೇಂದ್ರೀಯ ವಿಶ್ವ ವಿದ್ಯಾಲಯವನ್ನು ಕೋವಿಡ್-19ರ ಪ್ರಾಥಮಿಕ ಕೇಂದ್ರವನ್ನಾಗಿ ಮಾರ್ಪಡಿಸಲಾಗುವುದು ಎಂದೂ ಸಿಎಂ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts