More

    ಕರಾವಳಿಯಲ್ಲಿ ಎರಡು ದಿನ ಹೈ ಅಲರ್ಟ್; ಗುಜರಾತ್, ಪಾಕ್ ಕರಾವಳಿಯತ್ತ ಚಂಡಮಾರುತ

    ಮಂಗಳೂರು/ ಉಡುಪಿ: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಆಗ್ನೇಯ ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪ ಪ್ರದೇಶದಲ್ಲಿ ಗುರುವಾರ ಮುಂಜಾನೆ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದೆ. ಶುಕ್ರವಾರದ ವೇಳೆ ಇದು ಮತ್ತಷ್ಟು ಬಲಗೊಳ್ಳಲಿದ್ದು, ಶನಿವಾರ ತೀವ್ರ ಚಂಡಮಾರುತವಾಗಿ ಪರಿವರ್ತನೆಯಾಗಿ ಬಳಿಕ ಉತ್ತರಕ್ಕೆ ಸಾಗಿ ಗುಜರಾತ್ ಮತ್ತು ಪಾಕಿಸ್ತಾನ ಕರಾವಳಿಯತ್ತ ಚಲಿಸಲಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.

    ಚಂಡಮಾರುತ ಕರ್ನಾಟಕ ಕರಾವಳಿ ಮೇಲೆ ಪ್ರಭಾವ ಬೀರದಿದ್ದರೂ, ಭಾರಿ ಗಾಳಿ-ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿದೆ. ಪ್ರಸ್ತುತ ಮೋಡಗಳು ಕೇಂದ್ರೀಕರಣಗೊಳ್ಳುತ್ತಿದ್ದು, ಸಮುದ್ರದಲ್ಲೂ ಗಾಳಿಯ ಅಬ್ಬರ ಹೆಚ್ಚಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಜಿಲ್ಲಾಡಳಿತ ಮತ್ತು ಕೋಸ್ಟ್‌ಗಾರ್ಡ್ ಸಿಬ್ಬಂದಿ ಸೂಚಿಸಿದ್ದಾರೆ. ಮೀನುಗಾರಿಕೆಯಲ್ಲಿ ತೊಡಗಿರುವ ದೋಣಿಗಳು ತಕ್ಷಣ ದಡ ಸೇರುವಂತೆ ಕೋಸ್ಟ್‌ಗಾರ್ಡ್ ಎಚ್ಚರಿಸಿದ್ದು, ದಕ್ಕೆಯಲ್ಲಿರುವ ಬೋಟ್‌ಗಳನ್ನು ಸರಿಯಾಗಿ ಲಂಗರು ಹಾಕುವಂತೆ ಸೂಚಿಸಿದೆ.

    ಜಿಲ್ಲಾಡಳಿತ ಸಜ್ಜು: ಚಂಡಮಾರುತದಿಂದ ಜಿಲ್ಲೆಗೆ ಅಪಾಯ ಕಡಿಮೆಯಾದರೂ, ಸಂಭಾವ್ಯ ಅಪಾಯ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಈ ಕುರಿತು ಈಗಾಗಲೇ ಸಭೆ ನಡೆಸಿದ್ದು, ಕೋಸ್ಟ್‌ಗಾರ್ಡ್, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ಸಿಬ್ಬಂದಿ ಸಿದ್ಧವಾಗಿರುವಂತೆ ಸೂಚಿಸಲಾಗಿದೆ. ಜತೆಗೆ ಹೋಮ್‌ಗಾರ್ಡ್, ಪೌರರಕ್ಷಣಾ ಪಡೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಾಯವಾಣಿ ಕೇಂದ್ರದ ಸಿಬ್ಬಂದಿಯೂ ಸಿದ್ಧರಾಗಿರುವಂತೆ ಜಿಲ್ಲಾಡಳಿತ ತಿಳಿಸಿದೆ. ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳೂ ಕೇಂದ್ರ ಸ್ಥಾನದಲ್ಲಿದ್ದು ಸನ್ನದ್ಧರಾಗಿರುವಂತೆ ತಿಳಿಸಿದೆ. ತುರ್ತು ಸೇವೆಗೆ ಕಂಟ್ರೋಲ್ ರೂಂ ನಂಬರ್: 1077 ಹಾಗೂ 9483908000 ಸಂಪರ್ಕಿಸಬಹುದು.

    ನಾಳೆ-ನಾಡಿದ್ದು ರೆಡ್ ಅಲರ್ಟ್: ಚಂಡಮಾರುತ ಭೀತಿ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕರಾವಳಿಗೆ ಶನಿವಾರ ಮತ್ತು ಭಾನುವಾರ ರೆಡ್ ಅಲರ್ಟ್ ಘೋಷಿಸಿದೆ. ಈ ಎರಡು ದಿನ ಗುಡುಗು -ಮಿಂಚು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ. ಜತೆಗೆ ಗಂಟೆಗೆ 60-80 ಕಿ.ಮೀ. ವೇಗದಲ್ಲಿ ಬಲವಾದ ಗಾಳಿಯೂ ಬೀಸಲಿದೆ. ಶುಕ್ರವಾರಕ್ಕೆ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

    ಸಾರ್ವಜನಿಕರಿಗೂ ಎಚ್ಚರಿಕೆ: ಸಮುದ್ರದಿಂದ ಬಲವಾದ ಗಾಳಿ ಬೀಸುವುದರಿಂದ ಸಮುದ್ರ ಕೊರೆತ ಸಾಧ್ಯತೆಯಿದೆ. ಜತೆಗೆ 2.8ರಿಂದ 3.8 ಎತ್ತರದ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸಲಿದ್ದು, ಸಮುದ್ರ ತೀರದಲ್ಲಿ ವಾಸಿಸುತ್ತಿರುವ ಜನ ಎಚ್ಚರದಿಂದಿರುವಂತೆ ಹಾಗೂ ಅಪಾಯದ ಸಾಧ್ಯತೆ ಇದ್ದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಮಳೆಯಿಂದ ಪ್ರವಾಹದ ಸಾಧ್ಯತೆಯೂ ಇದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವವವರೂ ಎಚ್ಚರದಿಂದ ಇದ್ದು ನದಿ, ಸಮುದ್ರ ತೀರಗಳಿಗೆ ತೆರಳದಂತೆ ಸೂಚಿಸಲಾಗಿದೆ.

    ಮಂಗಳೂರಿನಲ್ಲಿ ಎನ್‌ಡಿಅರ್‌ಎಫ್ ತಂಡ ಸನ್ನದ್ಧ ಸ್ಥಿತಿಯಲ್ಲಿದ್ದು, ತುರ್ತು ಸಂದರ್ಭ ತಂಡವನ್ನು ಉಡುಪಿಗೂ ಕಳುಹಿಸುವ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿ ಜತೆಗೆ ಮಾತನಾಡಲಾಗಿದೆ. ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಕೋಪ ನಿಭಾಯಿಸಲು ತಯಾರಿ ಮಾಡಿಕೊಳ್ಳಬೇಕು. ಮಕ್ಕಳು, ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ ನಿಲ್ಲದೇ ಸುರಕ್ಷಿತ ಸ್ಥಳದಲ್ಲಿರಬೇಕು.
    ಜಿ.ಜಗದೀಶ್
    ಉಡುಪಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts