More

    ಎರಡು ದಿನ ವಾಣಿಜ್ಯ ನಗರಿ ಸಂಪೂರ್ಣ ಬಂದ್

    ರಾಣೆಬೆನ್ನೂರ: ತಾಲೂಕಿನಲ್ಲಿ ಕರೊನಾ ಪಾಸಿಟಿವ್ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗಟ್ಟುವ ಉದ್ದೇಶದಿಂದ ಮೇ 15 ಹಾಗೂ 16ರಂದು ಸಂಪೂರ್ಣ ಲಾಕ್​ಡೌನ್ ಘೊಷಿಸಲಾಗಿದೆ.
    ಜಿಲ್ಲೆಯಲ್ಲಿಯೇ ರಾಣೆಬೆನ್ನೂರ ತಾಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಗ್ರಾಮೀಣ ಭಾಗದಲ್ಲೂ ಸೋಂಕು ಹರಡುತ್ತಿದೆ. ಹೀಗಾಗಿ ವಾರಾಂತ್ಯದ ಲಾಕ್​ಡೌನ್ ಮಾಡಲು ನಿರ್ಧರಿಸಲಾಗಿದೆ.
    ಲಾಕ್​ಡೌನ್ ಮಾಡುವ ಕುರಿತು ನಾಲ್ಕು ದಿನದ ಹಿಂದೆ ಹಿಂದೆ ಶಾಸಕ ಅರುಣಕುಮಾರ ಪೂಜಾರ ಹಾಗೂ ತಹಸೀಲ್ದಾರ್ ಶಂಕರ ಜಿ.ಎಸ್. ನೇತೃತ್ವದಲ್ಲಿ ಎಲ್ಲ ವ್ಯಾಪಾರಸ್ಥರ, ಸಂಘ-ಸಂಸ್ಥೆಗಳ ಕಾರ್ಯಕರ್ತರ ಸಭೆ ನಡೆಸಲಾಗಿತ್ತು. ಈ ವೇಳೆ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಬಂದ್ ಮಾಡಲು ಒಪ್ಪಿಗೆ ಸೂಚಿಸಿದ್ದರು.
    ಏನಿರುತ್ತೆ, ಏನಿರಲ್ಲ…?
    ಔಷಧ ಅಂಗಡಿ, ಆಸ್ಪತ್ರೆ, ಪತ್ರಿಕೆ ಮಾರಾಟ, ಹಾಲು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆಸ್ಪತ್ರೆ ಹಾಗೂ ಔಷಧ ಅಂಗಡಿಗಳಿಗೆ ಅವಶ್ಯಕತೆ ಇದ್ದವರು ಬೈಕ್ ಮೇಲೆ ಹೋಗಬಹುದು. ಕೃಷಿ ಕೆಲಸಕ್ಕೆ ರೈತರು ತೆರಳಬಹುದು.
    ತರಕಾರಿ, ದಿನಸಿ ಸೇರಿ ಯಾವುದೇ ರೀತಿಯ ಅಂಗಡಿ ಮುಂಗಟ್ಟುಗಳನ್ನು ತೆರೆಯುವಂತಿಲ್ಲ. ಬೈಕ್, ಆಟೋರಿಕ್ಷಾ, ಕಾರು ಸೇರಿ ಯಾವುದೇ ವಾಹನಗಳು ಅನವಶ್ಯಕವಾಗಿ ಓಡಾಡುವಂತಿಲ್ಲ. ಯಾರಾದರೂ ಹೊರಗೆ ಬಂದರೆ, ಅಂಥವರ ವಿರುದ್ಧ ಜನತಾ ಕರ್ಫ್ಯೂ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗುವುದು. ಕರೊನಾ ಹರುಡುವಿಕೆ ತಡೆಯುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಮಹತ್ವದ್ದಾಗಿದೆ. ಆದ್ದರಿಂದ ಎಲ್ಲರೂ ಸ್ವಯಂ ಪ್ರೇರಣೆಯಿಂದ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಶಂಕರ ಜಿ.ಎಸ್. ತಿಳಿಸಿದ್ದಾರೆ.
    ಡಂಗುರದ ಮೂಲಕ ಪ್ರಚಾರ: ರಾಣೆಬೆನ್ನೂರಿನಲ್ಲಿ ಲಾಕ್​ಡೌನ್ ಘೊಷಿಸಿದ ಕುರಿತು ನಗರ ಪ್ರದೇಶದಲ್ಲಿ ಆರೋಗ್ಯ ನಿರೀಕ್ಷರು ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಆಯಾ ಗ್ರಾಪಂ ವತಿಯಿಂದ ಟಂಟಂ, ಆಟೋ ರಿಕ್ಷಾ ಸೇರಿ ಇತರ ವಾಹನಗಳಲ್ಲಿ ಸಂಚರಿಸಿ ಡಂಗುರ ಸಾರಲಾಗಿದೆ.

    ರಾಣೆಬೆನ್ನೂರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಲಾಕ್​ಡೌನ್ ತುಂಬ ಅವಶ್ಯವಾಗಿದೆ. ಆದ್ದರಿಂದ ಎಲ್ಲ ವ್ಯಾಪಾರಸ್ಥರು, ಸಂಘ-ಸಂಸ್ಥೆಯವರನ್ನು ಕರೆದು ಸಭೆ ನಡೆಸಲಾಗಿದ್ದು, ಎಲ್ಲರೂ ಸಹಕಾರ ನೀಡುವುದಾಗಿ ಒಪ್ಪಿದ ಹಿನ್ನೆಲೆಯಲ್ಲಿ ಮೇ 15, 16ರಂದು ಲಾಕ್​ಡೌನ್ ಘೊಷಿಸಲಾಗಿದೆ. ಈ ಬಗ್ಗೆ ಗ್ರಾಮೀಣ ಭಾಗದಲ್ಲೂ ಡಂಗುರ ಸಾರಲಾಗಿದೆ. ಎಲ್ಲರೂ ಸಹಕಾರ ನೀಡಬೇಕು. | ಅರುಣಕುಮಾರ ಪೂಜಾರ, ಶಾಸಕ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts