ರಟ್ಟಿಹಳ್ಳಿ: ಜಾನುವಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದು, ಉಳಿದ ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸ್ ಇಲಾಖೆ ಜಾಲ ಬೀಸಿದೆ.
ಮಾಸೂರು ಗ್ರಾಮದ ರಾಜುಸಾಬ ಹುಸೇನಸಾಬ ಗದಗ ಮತ್ತು ಹೊಸವೀರಾಪುರ ಗ್ರಾಮದ ಅಬ್ದುಲ್‌ರಜಾಕ ರಾಜಾಸಾಬ ಮಾರವಳ್ಳಿ ಬಂಧಿತರು. ಇಬ್ಬರು ಆರೋಪಿಗಳ ಬಳಿಯಿದ್ದ ಜಾನುವಾರು ಮಾರಾಟದ ಹಣ 1.01 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.
ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಕವಳಿಕುಪ್ಪಿ, ಶಿರಗಂಬಿ, ಕಡೂರು, ಅಣಜಿ ಹಾಗೂ ಚಿಕ್ಕಕಬ್ಬಾರ ಒಟ್ಟು 5 ಗ್ರಾಮಗಳಲ್ಲಿ ಮತ್ತು ಹಿರೇಕೆರೂರ ಠಾಣೆ ವ್ಯಾಪ್ತಿಯ ಹಿರೇಮೊರಬ ಮತ್ತು ಹಿರೇಯಡಚಿ ಗ್ರಾಮಗಳಲ್ಲಿ ಎತ್ತುಗಳು, ಆಕಳು ಹಾಗೂ ಎಮ್ಮೆ ಕಳವಾದ ಕುರಿತು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ, 8 ಪ್ರಕರಣ ಭೇದಿಸಲಾಗಿದೆ. ಇನ್ನೂ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಬೇಕಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಎಎಸ್‌ಪಿ ಗೋಪಾಲ ಸಿ., ರಾಣೆಬೆನ್ನೂರ ಡಿವೈಎಸ್‌ಪಿ ಡಾ.ಗಿರೀಶ ಭೋಜಣ್ಣನವರ, ಸಿಪಿಐ ಬಸವರಾಜ ಪಿ.ಎಸ್. ಮಾರ್ಗದರ್ಶನದಲ್ಲಿ ಸ್ಥಳೀಯ ಪಿಎಸ್‌ಐ ಜಗದೀಶ ಜಿ. ನೇತೃತ್ವದಲ್ಲಿ ಸಿಬ್ಬಂದಿ ಮಾಲತೇಶ ನ್ಯಾಮತಿ, ರವಿ ಅಳಲಗೇರಿ, ಬಿ.ಆರ್. ಸಣ್ಣಪ್ಪನವರ, ರವಿ ಲಮಾಣಿ, ರಘು ಕದರಮಂಡಗಲಿ, ಹರೀಶ ಹಲಗೇರಿ, ಡಿ.ಬಿ. ಗುತ್ತಾಳರ, ಎಫ್.ಎನ್. ಕುಂದೂರು, ಮಾರುತಿ ಹಾಲಬಾವಿ ಒಳಗೊಂಡ ತಂಡ ರಚನೆ ಮಾಡಲಾಗಿತ್ತು. ಈ ತಂಡ ಜ. 21ರಂದು ಪ್ರಕರಣ ಯಶಸ್ವಿಯಾಗಿ ಭೇದಿಸಿದ್ದು, ಸಿಬ್ಬಂದಿ ಕಾರ್ಯಕ್ಕೆ ಮೇಲಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.