More

    ಎರಡು ಕೇಸ್ ರೀ-ಓಪನ್, ಇಬ್ಬರು ಮಾಜಿ ಸಚಿವರಿಗೆ ತಳಮಳ

    ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ‘ಬಿ’ ವರದಿ ತಿರಸ್ಕಾರ * ಅನುರಾಗ್ ತಿವಾರಿ ಕೇಸ್ ಮರು ತನಿಖೆಗೆ ಆದೇಶ

    ಬೆಂಗಳೂರು: ಕಾಂಗ್ರೆಸ್ ಸರ್ಕಾರದ (2013-18) ಅವಧಿಯಲ್ಲಿದ್ದ ಇಬ್ಬರು ಸಚಿವರಿಗೆ ಈಗ ಹಳೆಯ ಪ್ರಕರಣಗಳು ಸುತ್ತಿಕೊಳ್ಳುವ ಲಕ್ಷಣಗಳು ಕಾಣಿಸಿವೆ. ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಕೇಸ್​ನಲ್ಲಿ ಮಾಜಿ ಸಚಿವ ಕೆ.ಜೆ.ಜಾರ್ಜ್​ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೋಟಿಸ್ ನೀಡಿದ್ದರೆ, ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಮರು ತನಿಖೆಗೆ ಆದೇಶಿಸಿದೆ.

    ಅನುರಾಗ್ ತಿವಾರಿ ರಾಜ್ಯದ ಆಹಾರ ಇಲಾಖೆ ಆಯುಕ್ತರಾಗಿದ್ದ ಸಂದರ್ಭದಲ್ಲಿ 2017ರ ಮೇ 17ರಂದು ಲಕ್ನೋನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಈ ಪ್ರಕರಣವನ್ನು ಪೊಲೀಸ್ ವರಿಷ್ಠಾಧಿಕಾರಿ ಹಂತದ ಅಧಿಕಾರಿಯಿಂದ ಮರು ತನಿಖೆ ಮಾಡಬೇಕೆಂದು ನ್ಯಾಯಾಲಯ ಹೇಳಿದೆ. ಅಂದು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಆಹಾರ ಸಚಿವರೂ ಸೇರಿ ಅಂದು ಇಲಾಖೆ ಅಧಿಕಾರಿಗಳು ಸಹ ಈ ಪ್ರಕರಣದಲ್ಲಿ ವಿಚಾರಣೆಗೊಳಪಡುವ ಸಾಧ್ಯತೆ ಇದೆ.

    ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ ಅನುರಾಗ್ ತಿವಾರಿ ಸಹೋದರ ಮಾಯಾಂಕ್ ತಿವಾರಿ, ಈ ಪ್ರಕರಣದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ಈವರೆಗೂ ಅನುರಾಗ್ ಐಪಾಡ್ ಲಾಕ್ ಓಪನ್ ಮಾಡಲು ಸಾಧ್ಯವಾಗಿಲ್ಲ. ತನಿಖೆ ವೇಳೆ ಅನೇಕ ಅನುಮಾನಗಳು ಕಾಣಿಸಿವೆ. ಯಾವುದೋ ಬಲವಾದ ಕಾರಣ ಇದ್ದೇ ಇದೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಕೊಲ್ಲಲಾಗಿದೆ ಎಂದರು.

    ಒಟ್ಟಾರೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಮತ್ತು ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅನುಮಾನಾಸ್ಪದ ಸಾವು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದ್ದು, ಇದು ಆಡಳಿತ ಪಕ್ಷ ಬಿಜೆಪಿ ಪಾಲಿಗೆ ಟೀಕೆಯ ಸರಕಾದರೂ ಅಚ್ಚರಿ ಏನಿಲ್ಲ.

    ಜಾರ್ಜ್, ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಸಮನ್ಸ್

    ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಡಿವೈಎಸ್​ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ‘ಬಿ’ ವರದಿಯನ್ನು ಶುಕ್ರವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದು, ಮಾಜಿ ಸಚಿವ ಕೆ.ಜೆ. ಜಾರ್ಜ್ ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಎ.ಎಂ.ಪ್ರಸಾದ್​ಗೆ ಸಮನ್ಸ್ ಜಾರಿ ಮಾಡಲಾಗಿದೆ. ಸೆ.28ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಪ್ರಕರಣದ ತೀರ್ಪು ಕಾಯ್ದಿರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಸಿಬಿಐ ಬಿ ವರದಿ ಸಲ್ಲಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಇದೀಗ ಜಾರ್ಜ್ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆಗಳಿವೆ.

    ಸಿಬಿಐಗೆ ಸಾಕ್ಷ್ಯ ಸಿಕ್ಕಿಲ್ಲ?: ಗಣಪತಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಬಿಐ ತನಿಖೆ ವೇಳೆ ಅವರಿಗೆ ಕಿರುಕುಳ ನೀಡಿರುವುದಕ್ಕೆ ಸೂಕ್ತ ಸಾಕ್ಷ್ಯ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣ ವಜಾಗೊಳಿಸುವಂತೆ ಸಿಬಿಐ ಪರ ವಕೀಲ ಶಿವಾನಂದ್ ಪೆರ್ಲಾ ಈ ಹಿಂದೆ ವಾದಿಸಿದ್ದರು. ಸೂಕ್ತ ಸಾಕ್ಷ್ಯಗಳಿದ್ದರೂ ಸಿಬಿಐ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿಲ್ಲ. ಗಣಪತಿ ಸಾವಿಗೆ ಕಿರುಕುಳವೇ ಕಾರಣ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಗಣಪತಿ ಕುಟುಂಬಸ್ಥರ ಪರ ಹಿರಿಯ ವಕೀಲ ಎಚ್.ಪವನ್ ಚಂದ್ರಶೆಟ್ಟಿ ವಾದ ಮಂಡಿಸಿದ್ದರು.

    ಏನಿದು ಪ್ರಕರಣ?: ಮಂಗಳೂರಿನ ಐಜಿಪಿ ಕಚೇರಿಯಲ್ಲಿ ಡಿವೈಎಸ್​ಪಿ ಆಗಿದ್ದ ಎಂ.ಕೆ.ಗಣಪತಿ ಶವ 2016ರ ಜುಲೈ 7ರಂದು ಮಡಿಕೇರಿಯ ವಿನಾಯಕ ಲಾಡ್ಜ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದಕ್ಕೂ ಮುನ್ನ ಸ್ಥಳೀಯ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ, ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್, ಪ್ರಣವ್ ಮೊಹಂತಿ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು. ಈ ನಡುವೆ ವಿಪಕ್ಷಗಳು ಜಾರ್ಜ್ ರಾಜೀನಾಮೆಗೆ ಪಟ್ಟು ಹಿಡಿದಿದ್ದ ಹಿನ್ನೆಲೆಯಲ್ಲಿ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ನಂತರ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿತ್ತು. ಸಿಐಡಿ ತಂಡ ಕ್ಲೀನ್​ಚಿಟ್ ನೀಡಿತ್ತು. 2017ರಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಪ್ರಕರಣದ ತನಿಖೆ ನಡೆಸಿದ ಸಿಬಿಐ, ‘ಎಂ.ಕೆ.ಗಣಪತಿಗೆ ಯಾರೂ ಕಿರುಕುಳ ನೀಡಲಿಲ್ಲ’ ಎಂದು ನ್ಯಾಯಾಲಯಕ್ಕೆ ಬಿ-ವರದಿ ಸಲ್ಲಿಸಿತ್ತು. ಈ ವರದಿ ಪ್ರಶ್ನಿಸಿ ಎಂ.ಕೆ.ಗಣಪತಿ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು.

    ನನ್ ಕೂದ್ಲು ಯಾಕಿಷ್ಟೊಂದು ಉದುರ್ತಾ ಇದೆ?!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts