More

    ಶಾಸಕರ ಹೆಸರಿನ ಪಾಸ್ ಪ್ರಕರಣಕ್ಕೆ ಟ್ವಿಸ್ಟ್

    ಹಾವೇರಿ: ಬ್ಯಾಡಗಿ ಶಾಸಕರ ಹೆಸರಿನ ನಕಲಿ ಪಾಸ್ ಬಳಸಿ ಕಾರಿನಲ್ಲಿ ಪ್ರಯಾಣಿಸಿ ಸಿಕ್ಕಿಬಿದ್ದ ಪ್ರಕರಣ ಈಗ ಟ್ವಿಸ್ಟ್ ಪಡೆದುಕೊಂಡಿದೆ. ಪ್ರಕರಣದ ಎಫ್​ಐಆರ್​ನಲ್ಲಿ ನೈಜ ಆರೋಪಿಗಳನ್ನು ಪೊಲೀಸರು ಮರೆಮಾಚಿರುವ ಸಂಶಯ ಸ್ವತಃ ಜಿಲ್ಲಾಧಿಕಾರಿಗೆ ಮೂಡಿದ್ದು, ಇದರ ಬಗ್ಗೆ ಮೀಡಿಯಾ ವಾಟ್ಸ್​ಆಪ್ ಗ್ರುಪ್​ನಲ್ಲಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕರೊನಾ ಮಹಾಮಾರಿ ನಿಯಂತ್ರಿಸಲು ಪೊಲೀಸ್ ಇಲಾಖೆ ನಮ್ಮ ರಕ್ಷಣೆಗಿದೆ ಎಂಬ ಧೈರ್ಯದಲ್ಲಿದ್ದ ಜಿಲ್ಲೆಯ ಜನತೆಗೆ ಈಗ ಆತಂಕ ಉಂಟಾಗಿದೆ.

    ಏನಿದು ಘಟನೆ: ಏ. 16ರಂದು ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರ ಹೆಸರಿನ ನಕಲಿ ಪಾಸ್ ಬಳಸಿಕೊಂಡು ವ್ಯಕ್ತಿಯೊಬ್ಬರು ಕಾರಿನಲ್ಲಿ ಬರುತ್ತಿದ್ದಾಗ ಸವಣೂರು ತಾಲೂಕು ಯಲವಿಗಿ ಚೆಕ್​ಪೋಸ್ಟ್​ನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಅವರ ಕೈಗೆ ಸಿಕ್ಕಿಬಿದ್ದಿದ್ದರು. ಕೆಎ 27-ಎನ್ 4122 ನಂಬರ್​ನ ಕಾರು ಲಕ್ಷೆ್ಮೕಶ್ವರ ಕಡೆಯಿಂದ ಬರುತ್ತಿದ್ದ ವೇಳೆ ಚೆಕ್​ಪೋಸ್ಟ್​ನಲ್ಲಿ ಶಾಸಕರ ಪಾಸ್ ಗಮನಿಸಿದ ಎಡಿಸಿ ಅನುಮಾನಗೊಂಡು ವಿಚಾರಿಸಿದ್ದಾರೆ. ಸ್ಥಳದಲ್ಲಿಯೇ ಶಾಸಕರಿಗೆ ಕರೆ ಮಾಡಿದಾಗ ಶಾಸಕರು, ‘ನಾನು ಯಾರಿಗೂ ಪಾಸ್ ಕೊಟ್ಟಿಲ್ಲ’ ಎಂದು ತಿಳಿಸಿದ್ದಾರೆ. ಚೆಕ್​ಪೋಸ್ಟ್ ಸಿಬ್ಬಂದಿ ವಿಚಾರಿಸಿದಾಗ ಚಾಲಕ ದಿನೇಶ ಬಂಕಾಪುರ ಎಂಬಾತ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

    ಆದರೆ, ಅದೇ ದಿನ ಸವಣೂರ ಠಾಣೆಯಲ್ಲಿ ಸಿಪಿಐ ಶಶಿಧರ ಅವರ ಸ್ವಯಂ ದೂರಿನ್ವಯ ಎಫ್​ಐಆರ್ ದಾಖಲಾಗಿದ್ದು, ಅದರಲ್ಲಿ ಚಾಲಕನ ಹೆಸರು ಅಶೋಕ ಮಡಿವಾಳರ ಎಂದು, ವಾಹನವನ್ನು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ್ದಾರೆ ಎಂದು ನಮೂದಿಸಲಾಗಿತ್ತು. ಚೆಕ್​ಪೋಸ್ಟ್​ನಲ್ಲಿ ಸಿಕ್ಕಿಬಿದ್ದ ಆರೋಪಿಯ ಹೆಸರು ಎಫ್​ಐಆರ್​ನಲ್ಲಿ ಹೇಗೆ ಬೇರೆಯಾಯಿತು. ಅಲ್ಲದೆ, ನಕಲಿ ಪಾಸ್ ಸೃಷ್ಟಿಯ ಅಪರಾಧದ ಬಗ್ಗೆಯೂ ಯಾವುದೇ ಮಾಹಿತಿ ಎಫ್​ಐಆರ್​ನಲ್ಲಿ ಇರಲಿಲ್ಲ.

    ಜಿಲ್ಲಾಧಿಕಾರಿ ಗರಂ: ಶಾಸಕರ ಹೆಸರಿನ ಪಾಸ್ ದುರ್ಬಳಕೆ ಮಾಡಿಕೊಂಡಿರುವುದು ಖಚಿತವಿದ್ದರೂ ಆ ಕುರಿತು ಕೇಸ್ ದಾಖಲಿಸದೇ ನಿರ್ಲಕ್ಷ್ಯದ ಕಾರು ಚಾಲನೆ ಕೇಸ್ ದಾಖಲಿಸಿದ್ದಕ್ಕೆ ಪೊಲೀಸರ ಮೇಲೆ ಜಿಲ್ಲಾಧಿಕಾರಿ ಗರಂ ಆಗಿದ್ದಾರೆ. ಈ ರೀತಿ ಪೊಲೀಸರು ನಡೆದುಕೊಂಡರೆ ಚೆಕ್​ಪೋಸ್ಟ್​ಗಳಿರುವ ಔಚಿತ್ಯವೇನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಈ ವಿಷಯವನ್ನು ಮುಖ್ಯಕಾರ್ಯದರ್ಶಿ ಹಾಗೂ ಡಿಜಿಪಿಯವರ ಗಮನಕ್ಕೂ ತರುವುದಾಗಿ ತಿಳಿಸಿದ್ದಾರೆ.

    ಇದರಿಂದ ಎಚ್ಚೆತ್ತ ಪೊಲೀಸರು ದಿನೇಶ ಬಂಕಾಪುರ ಬದಲಾಗಿ ಕಾರಿನ ಮಾಲೀಕ ಗಣೇಶ ಬಂಕಾಪುರ ಹಾಗೂ ಚಾಲಕ ಅಶೋಕ ಮಡಿವಾಳರ ಮೇಲೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಅನುಮತಿ ಕೋರಿ ಶನಿವಾರ ಸವಣೂರು ಸಿಪಿಐ ಅವರು, ಸವಣೂರ ಸಿಜೆ ಮತ್ತು ಜೆಎಂಎಫ್​ಸಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ಮಾಹಿತಿಯನ್ನು ಗ್ರುಪ್​ನಲ್ಲಿಯೇ ಹಾಕಿದರು. ಇದರ ಬಗ್ಗೆಯೂ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಕಲಿ ಪಾಸ್ ಬಳಕೆ ಆರೋಪಕ್ಕೆ 420 ಕೇಸ್ ದಾಖಲಿಸಲು ಅವಕಾಶವಿದ್ದರೂ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ದಿನೇಶ ಬದಲಾಗಿ ಗಣೇಶ ಬಂಕಾಪುರ ಹೆಸರು ಬಂದಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

    ಮನವಿಯಲ್ಲೂ ಸಂಶಯ: ಸವಣೂರ ಸಿಪಿಐ ಶನಿವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ, ಶಾಸಕರ ಹೆಸರಿನ ನಕಲಿ ಪಾಸ್ ಬಳಕೆ ಎಂಬ ವಿಷಯವನ್ನು ನಮೂದಿಸುವ ಬದಲು ಶಾಸಕರಿಗೆ ನೀಡಿದ ಪಾಸ್​ನ್ನು ಪ್ರದರ್ಶಿಸಿ ದುರ್ಬಳಕೆ ಮಾಡಿಕೊಂಡು ಅಪರಾಧ ಎಸಗಿದ್ದಾರೆ ಎಂದು ನಮೂದಿಸಿದ್ದಾರೆ. ಇಲ್ಲಿಯೂ ಅಪರಾಧಿಯನ್ನು ರಕ್ಷಿಸುವ ತಂತ್ರಗಾರಿಕೆಯನ್ನು ಪೊಲೀಸರು ನಡೆಸಿರುವ ಸಂಶಯ ಮೂಡಿದೆ.

    ವಿಪತ್ತು ನಿರ್ವಹಣೆ ಕಾಯ್ದೆಯಡಿ ನ್ಯಾಯಾಲಯದಿಂದ ಅನುಮತಿ ಪಡೆದು ದೂರು ದಾಖಲಿಸಬೇಕಾಗುತ್ತದೆ. ನ್ಯಾಯಾಲಯದಿಂದ ಪರವಾನಗಿ ಪಡೆಯುವುದು ತಡವಾಗುತ್ತದೆ ಎಂಬ ಕಾರಣಕ್ಕೆ ಏ. 16ರಂದು ಕೇಸ್ ದಾಖಲಿಸಿ ವಾಹನ ವಶಕ್ಕೆ ಪಡೆಯಲಾಗಿತ್ತು. ಸವಣೂರ ಸಿಪಿಐ ಅವರ ವಿಚಾರಣೆ ವೇಳೆ ಚಾಲಕ ಅಶೋಕ ಮಡಿವಾಳರ, ಮಾಲೀಕ ಗಣೇಶ ಬಂಕಾಪುರ ಎಂದು ತಿಳಿದುಬಂದಿದೆ. ಅದರಂತೆ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುತ್ತೇವೆ.

    | ಮಲ್ಲಿಕಾರ್ಜುನ ಬಾಲದಂಡಿ, ಎಎಸ್​ಪಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts