More

    ಲಾಕ್​ಡೌನ್​ಗೆ ಅವಳಿನಗರಿ ಜನತೆ ಸಾಥ್

    ಹುಬ್ಬಳ್ಳಿ: ಲಾಕ್​ಡೌನ್ ಜಾರಿ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಸೋಮವಾರ ಜನ ಹಾಗೂ ವಾಹನ ಸಂಚಾರ ಅಷ್ಟೊಂದು ಕಂಡುಬರಲಿಲ್ಲ. ದುರ್ಗದಬೈಲ್, ದಾಜಿಬಾನ ಪೇಟೆ, ಕೇಶ್ವಾಪುರ, ಸ್ಟೇಷನ್ ರಸ್ತೆ, ದೇಶಪಾಂಡೆ ನಗರ, ಕಮರಿಪೇಟೆ, ವಿದ್ಯಾನಗರ, ಗೋಕುಲ ರಸ್ತೆ ಇತರೆಡೆ ಅಂಗಡಿ-ಮುಂಗಟ್ಟು ಬಂದ್ ಆಗಿದ್ದವು. ಸರ್ಕಾರಿ ಕಚೇರಿಗಳು ಎಂದಿನಂತೆ ಬಾಗಿಲು ತೆರೆದಿದ್ದವು.

    ಸರ್ಕಾರಿ ಕಚೇರಿಗೆ ತೆರಳುವವರು ವಾಹನಗಳಲ್ಲಿ ತೆರಳುತ್ತಿದ್ದರು. ಅಲ್ಲಲ್ಲಿ ಬ್ಯಾರಿಕೇಡ್ ಹಾಕಿದ್ದ ಪೊಲೀಸರು, ವಾಹನಗಳ ಓಡಾಟ ನಿಯಂತ್ರಿಸುತ್ತಿದ್ದರು. ವಾಹನ ಸವಾರರ ಅಗತ್ಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಕೆಲವರಿಗೆ ದಂಡ ವಿಧಿಸಿದರೆ, ಹಲವರ ಬೈಕ್ ವಶಕ್ಕೆ ಪಡೆದರು. ಅನಗತ್ಯ ಓಡಾಡುವವರಿಗೆ ಪೊಲೀಸರು ಬುದ್ಧಿವಾದ ಹೇಳಿದರು.

    ಖರೀದಿ ಭರಾಟೆ: ಬೆಳಗ್ಗೆ 6 ಗಂಟೆಯಿಂದ ಅಗತ್ಯ ವಸ್ತುಗಳ ಖರೀದಿಗೆ ಅನುಮತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜನರು ಕಿರಾಣಿ, ಔಷಧ, ಹಾಲು, ತರಕಾರಿಗಳ ಖರೀದಿ ಭರಾಟೆಯಲ್ಲಿ ತೊಡಗಿದ್ದರು. ಅಲ್ಲಿ ಪರಸ್ಪರ ಅಂತರ ಕಾಯ್ದುಕೊಂಡಿರಲಿಲ್ಲ. ಮಾಸ್ಕ್ ಧರಿಸಿರಲಿಲ್ಲ. ಅಂಗಡಿಕಾರರು ಎಷ್ಟೇ ತಿಳಿವಳಿಕೆ ನೀಡಿದರೂ ಜನರು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ.

    ಜನಸಂದಣಿ: ನಗರದ ಕೆಲವೆಡೆ ಹೋಟೆಲ್​ಗಳ ಬಾಗಿಲುಗಳನ್ನು ಬೆಳಗ್ಗೆ ತೆರೆಯಲಾಗಿತ್ತು. ಜನರು ಆಹಾರ ಪಾರ್ಸೆಲ್ ಪಡೆಯಲು ಆಗಮಿಸಿದ್ದರು. ಇದರಿಂದ ಹೋಟೆಲ್​ಗಳ ಮುಂದೆ ಜನಸಂದಣಿ ಕಂಡುಬಂತು. ಜಿಲ್ಲಾಡಳಿತ ನೀಡಿದ ಸಮಯ ಮುಗಿಯುತ್ತಿದ್ದಂತೆ ಜನಸಂದಣಿ ಕಡಿಮೆಯಾಯಿತು.

    ಸೆಮಿ ಲಾಕ್​ಡೌನ್​ಗೆ ಉತ್ತಮ ಬೆಂಬಲ

    ಧಾರವಾಡ ನಗರದಲ್ಲಿ ಸೆಮಿ ಲಾಕ್​ಡೌನ್ ಮೊದಲ ದಿನವಾದ ಸೋಮವಾರ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿತು. ಜನತಾ ಕರ್ಫ್ಯೂ ಪ್ರಯೋಜನವಾಗದ ಕಾರಣ ಕೆಲ ಬದಲಾವಣೆಯೊಂದಿಗೆ ಸೆಮಿ ಲಾಕ್​ಡೌನ್ ಘೊಷಿಸಲಾಗಿದೆ. ಜನತಾ ಕರ್ಫ್ಯೂ ಇದ್ದರೂ ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಬೆಳಗ್ಗೆ 10ರವರೆಗೂ ಮಾರುಕಟ್ಟೆಗಳಲ್ಲಿ ಸಾವಿರಾರು ಜನ ಸೇರುತ್ತಿದ್ದರು. ಆದರೆ ಸೋಮವಾರ ಮಾತ್ರ ಕೆಲ ಜನರು ಮಾತ್ರ ಕಾಣುವಂತಾಗಿತ್ತು.

    ಅಗತ್ಯ ವಸ್ತುಗಳ ಖರೀದಿಗೆ ನಡೆದುಕೊಂಡೇ ಹೋಗುವ ನಿಯಮ ಮಾಡಿದ್ದರಿಂದ ಬಹುತೇಕರು ಮಾರುಕಟ್ಟೆಗೆ ಆಗಮಿಸದೆ ಮನೆಗಳ ಬಳಿಯೇ ಅಗತ್ಯ ವಸ್ತುಗಳ ಖರೀದಿ ನಡೆಸಿದರು. ಇನ್ನು ಭಂಡ ಧೈರ್ಯದಲ್ಲಿ ಬೈಕ್​ಗಳ ಮೇಲೆ ಆಗಮಿಸಿದ್ದ ಕೆಲವರಿಗೆ ಪೊಲೀಸರು ತಕ್ಕ ಪಾಠ ಕಲಿಸಿದರು.

    ಕುಂಟು ನೆಪ ಹೇಳಿ ಮಾರುಕಟ್ಟೆಗೆ ಆಗಮಿಸಿದವರೇ ಹೆಚ್ಚಾಗಿದ್ದರು. ಆದರೆ ಪೊಲೀಸರು ಮಾತ್ರ ಜನರ ಕಾರಣ ಒಪ್ಪದೆ ಕಟ್ಟುನಿಟ್ಟಾಗಿ ತಪಾಸಣೆ ನಡೆಸಿದರು. ಕೆಲವರು ಪೊಲೀಸರ ಪ್ರಶ್ನೆಗಳಿಗೆ ತಡಬಡಿಸಿದ ಪರಿಣಾಮ ಬೈಕ್​ಗಳನ್ನು ಸೀಜ್ ಮಾಡಿದರು. ಬೈಕ್​ಗಳು ಮಾತ್ರವಲ್ಲದೆ, ಕಾರುಗಳನ್ನೂ ಸೀಜ್ ಮಾಡಿ ಬಿಸಿ ಮುಟ್ಟಿಸಿದರು. ಹೀಗಾಗಿ ವಾಹನಗಳಲ್ಲಿ ಆಗಮಿಸಿದ್ದ ಬಹುತೇಕರು ಪಾದಯಾತ್ರೆ ಮೂಲಕ ಮನೆಗಳಿಗೆ ತೆರಳುವ ಸ್ಥಿತಿ ಎದುರಾಗಿತ್ತು.

    ಸಮಯ ಮುಗಿದರೂ ಅಂಗಡಿ ಬಂದ್ ಮಾಡದ ಹೂವಿನ ಅಂಗಡಿ ಯುವಕನಿಗೆ ಲಾಠಿ ರುಚಿ ಸಹ ತೋರಿಸಿದರು. ಇನ್ನು ನಗರದೆಲ್ಲೆಡೆ ಬ್ಯಾರಿಕೇಡ್​ಗಳನ್ನು ಅಳವಡಿಸಿ ಎಲ್ಲ ವಾಹನಗಳನ್ನು ತಪಾಸಣೆ ನಡೆಸಿದರು. ಇಷ್ಟು ದಿನಗಳ ಕಾಲ ಕೇವಲ ಬೈಕ್​ಗಳನ್ನು ಸೀಜ್ ಮಾಡುತ್ತಿದ್ದ ಪೊಲೀಸರು, ಇಂದು ಕಾರುಗಳನ್ನೂ ಸೀಜ್ ಮಾಡಿ ಜನರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಮಿಂಚಿನ ವೇಗದಲ್ಲಿ ಮಹಿಳೆ ಎಸ್ಕೇಪ್

    ಮಾರುಕಟ್ಟೆಗೆ ಅನಗತ್ಯವಾಗಿ ವಾಹನಗಳನ್ನು ತಂದವರ ತಪಾಸಣೆಯನ್ನು ಪೊಲೀಸರು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅನವಶ್ಯಕವಾಗಿ ಆಗಮಿಸಿದ್ದ ಮಹಿಳೆಯನ್ನು ತಡೆದು ಸೈಡ್ ನಿಲ್ಲಿಸುವಂತೆ ಸೂಚಿಸಿದ್ದಾರೆ. ಪೊಲೀಸರಿಗೆ ದಂಡ ಬೇಕಾಗುತ್ತದೆ ಎಂದು ಯೋಚಿಸಿದ ಮಹಿಳೆ, ಗಾಡಿ ಸೈಡ್ ನಿಲ್ಲಿಸುವ ನೆಪದಲ್ಲಿ ಪೊಲೀಸರಿಂದ ಎಸ್ಕೇಪ್ ಆದ ಘಟನೆ ನಡೆದಿದೆ. ಮಹಿಳೆ ತೆರಳಿದ ಸ್ಪೀಡ್ ನೋಡಿ ಪೊಲೀಸರು ಕೆಲಕಾಲ ದಂಗಾಗಿದ್ದರು.

    ಜನರಿಗೆ ಕರೊನಾ ಪಾಠ

    ಲಾಕ್​ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ ನಗರ ಸಂಚಾರ ನಡೆಸಿದ ಎಸಿಪಿ ಅನುಷಾ ಜಿ. ಅವರು ಅನಗತ್ಯವಾಗಿ ಹೊರಗೆ ಓಡಾಡುತ್ತಿದ್ದ ಜನರಿಗೆ ಕರೊನಾ ಜಾಗೃತಿ ಪಾಠ ಮಾಡಿದರು. ಮಾರುಕಟ್ಟೆಯಲ್ಲಿ ಸಹ ಅಂಗಡಿಗಳನ್ನು ಬಂದ್ ಮಾಡುವಂತೆ ಧ್ವನಿ ವರ್ಧಕಗಳಲ್ಲಿ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts