More

    ಅವಳಿ ನಗರ ಸಂಪೂರ್ಣ ಸ್ತಬ್ಧ

    ಹುಬ್ಬಳ್ಳಿ/ಧಾರವಾಡ: ಹೆಚ್ಚುತ್ತಿರುವ ಕರೊನಾ ಸೋಂಕಿನ ನಿಯಂತ್ರಣಕ್ಕಾಗಿ ಜಿಲ್ಲಾದ್ಯಂತ ಜಾರಿಗೊಂಡಿರುವ ವಾರಾಂತ್ಯದ ಲಾಕ್​ಡೌನ್​ಗೆ ಅವಳಿ ನಗರದಲ್ಲಿ ಶನಿವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
    ಬೆಳಗ್ಗೆ 6 ರಿಂದ 8ರವರೆಗೆ ಮಾತ್ರ ಹಾಲು, ತರಕಾರಿ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿಯಲಿಲ್ಲ. 8 ಗಂಟೆಯ ನಂತರ ರಸ್ತೆಯಲ್ಲಿ ಕಂಡ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದರು.
    ಪ್ರಮುಖ ವೃತ್ತಗಳಲ್ಲಿ ಪೊಲೀಸರು ರಸ್ತೆಗೆ ಅಡ್ಡವಾಗಿ ಬ್ಯಾರಿಕೇಡ್ ಹಾಕಿದ್ದರು. ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ವಿಚಾರಿಸುತ್ತಿದ್ದರು. ಕೋವಿಡ್ ಕಾರ್ಯದ ಹೊರತಾಗಿ ರಸ್ತೆಗೆ ಇಳಿದ ವಾಹನ ಸವಾರರಿಗೆ ದಂಡ ವಿಧಿಸಿದರು. ಸೂಕ್ತ ಕಾರಣ ಇಲ್ಲದೆ ಸಂಚರಿಸುತ್ತಿದ್ದ ಬೈಕ್ ಹಾಗೂ ಕಾರುಗಳನ್ನು ವಶಪಡಿಸಿಕೊಂಡರು. ಅನಗತ್ಯವಾಗಿ ತಿರುಗುತ್ತಿದ್ದ ಕೆಲವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದರು.
    ಹುಬ್ಬಳ್ಳಿಯ ಗೋಕುಲ ರಸ್ತೆ, ವಿದ್ಯಾನಗರ, ಚೆನ್ನಮ್ಮ ವೃತ್ತ, ಸ್ಟೇಶನ್ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಸವೋದಯ ವೃತ್ತ, ಕುಸುಗಲ್ಲ ರಸ್ತೆ, ಹಳೇ ಹುಬ್ಬಳ್ಳಿ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಜನ ಹಾಗೂ ವಾಹನ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿದ್ದವು. ಒಳ ರಸ್ತೆಗಳಲ್ಲಿಯೂ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು.
    ಲಾಕ್​ಡೌನ್​ನಿಂದಾಗಿ ಸಾರಿಗೆ, ಖಾಸಗಿ ವಾಹನಗಳು, ಆಟೋ ಸಂಚಾರ ಸ್ತಬ್ದಗೊಂಡಿತ್ತು. ಕಿರಾಣಿ ಸೇರಿದಂತೆ ಯಾವುದೇ ಅಂಗಡಿಗಳು ಬಾಗಿಲು ತೆರೆಯಲಿಲ್ಲ. ಬಾರ್, ಮದ್ಯದ ಮಳಿಗೆಗಳು ಬಂದ್ ಆಗಿದ್ದವು. ಹೋಟೆಲ್​ಗಳಲ್ಲಿ ಪಾರ್ಸೆಲ್ ವ್ಯವಸ್ಥೆಯನ್ನೂ ನಿರ್ಬಂಧಿಸಲಾಗಿತ್ತು. ಕಟ್ಟಡ, ಇತರ ನಿರ್ಮಾಣ ಕಾಮಗಾರಿಗಳು ನಡೆಯಲಿಲ್ಲ. ಜಿಲ್ಲೆಯ ಬಹುತೇಕ ದೊಡ್ಡ ಗ್ರಾಮಗಳ ಕಾರ್ಯಪಡೆಗಳು ವಾರಾಂತ್ಯದ ಲಾಕ್​ಡೌನ್ ಬಗ್ಗೆ ಮೊದಲೇ ಸಭೆ ಜರುಗಿಸಿ ಜಾಗೃತಿ ಮೂಡಿಸಿದ್ದವು. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲೂ ಜನ ಮನೆಯಿಂದ ಹೊರಗೆ ಬಾರದೆ ಲಾಕ್​ಡೌನ್ ಬೆಂಬಲಿಸಿದರು. ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದು, ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಇರಲಿಲ್ಲ.
    ಕೈ ಮುಗಿದು ಮನವಿ ಮಾಡಿದ ಇನ್​ಸ್ಪೆಕ್ಟರ್: ಚನ್ನಮ್ಮ ವೃತ್ತದಲ್ಲಿ ಕಾರು ಚಾಲಕರೊಬ್ಬರು ಪೊಲೀಸರೊಂದಿಗೆ ವಾಗ್ವಾದ ಮಾಡಿದ್ದಕ್ಕೆ ಬೇಸರಗೊಂಡ ಉತ್ತರ ಸಂಚಾರಿ ಠಾಣೆ ಇನ್​ಸ್ಪೆಕ್ಟರ್ ಶ್ರೀಕಾಂತ ತೋಟಗಿ, ಚಾಲಕನಿಗೆ ಕೈ ಮುಗಿದು ಅನಗತ್ಯವಾಗಿ ತಿರುಗದಂತೆ ಮನವಿ ಮಾಡಿದರು. ಕಾರು ಚಾಲಕ ಸಹ ಮರಳಿ ಇನ್​ಸ್ಪೆಕ್ಟರ್​ಗೆ ಕೈ ಮುಗಿದು, ದಂಡ ಪಾವತಿಸಿ ಹೊರಟು ಹೋದರು.
    ನಾಳೆಯಿಂದ ಅಳ್ನಾವರ ತಾಲೂಕು ಲಾಕ್: ಅಳ್ನಾವರ: ಕರೊನಾ ಹತೋಟಿಗೆ ಜಿಲ್ಲಾಡಳಿತ ಕೈಗೊಂಡ ಎರಡು ದಿನಗಳ ಸಂಪೂರ್ಣ ಲಾಕ್​ಡೌನ್​ಗೆ ಮೊದಲ ದಿನ ಶನಿವಾರ ಉತ್ತಮ ಬೆಂಬಲ ದೊರೆತಿದೆ. ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಇತ್ತೀಚೆಗೆ ಸಭೆ ನಡೆಸಿ, ಪಟ್ಟಣವನ್ನು ಒಂದು ವಾರ ಲಾಕ್​ಡೌನ್ ಮಾಡಲು ನಿರ್ಧರಿಸಿತ್ತು. ಅದರಂತೆ ಜಿಲ್ಲಾಡಳಿತದಿಂದ ಅನುಮತಿ ಪಡೆದಿದ್ದೇವೆ. ಹೀಗಾಗಿ ಮೇ 24ರಿಂದ ಒಂದು ವಾರ ಅಳ್ನಾವರ ತಾಲೂಕನ್ನು ಲಾಕ್ ಮಾಡಲಾಗುವುದು ಎಂದು ತಹಸೀಲ್ದಾರ್ ಅಮರೇಶ ಪಮ್ಮಾರ ತಿಳಿಸಿದ್ದಾರೆ. ಕಿರಾಣಿ ವರ್ತಕರಿಗೆ ಫೋನ್ ಮೂಲಕ ದಿನಸಿ ವಸ್ತುಗಳನ್ನು ಮನೆ ಮನೆಗೆ ಪೂರೈಸಲು, ತರಕಾರಿ ವ್ಯಾಪಾರಸ್ಥರಿಗೆ ಬೆಳಗ್ಗೆಯಿಂದ ಸಂಜೆಯವರೆಗೆ ಬೀದಿಗಳಲ್ಲಿ ತಿರುಗಾಡಿ ಮಾರಾಟ ಮಾಡಲು ಪಟ್ಟಣ ಪಂಚಾಯಿತಿಯಿಂದ ಪಾಸ್ ನೀಡಲಾಗಿದೆ. ಹಾಲು ಮಾರಾಟಕ್ಕೆ ಬೆಳಗ್ಗೆ ಎರಡು ತಾಸು ಮಾತ್ರ ಸಮಯ ನೀಡಲಾಗಿದೆ ಎಂದು ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ ತಿಳಿಸಿದ್ದಾರೆ.
    *

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts