More

    ಅಂಕಣ, ಟಿವಿ ಮನೆ ಕತೆ; ಮಾತೃಭಾಷೆ ಅನ್ನದ ಭಾಷೆಯಾದರೂ ಏಕೆ ನಿರಭಿಮಾನ? 

    ಅಂಕಣ, ಟಿವಿ ಮನೆ ಕತೆ; ಮಾತೃಭಾಷೆ ಅನ್ನದ ಭಾಷೆಯಾದರೂ ಏಕೆ ನಿರಭಿಮಾನ? ನಾನು ಧಾರಾವಾಹಿ ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳುವ ಮುನ್ನ ಕೆಲಸ ಮಾಡುತ್ತಿದ್ದ ಜಾಗದಲ್ಲಿ ನನ್ನ ಸಹೋದ್ಯೋಗಿಯೊಬ್ಬರು ಹೇಳುತ್ತಿದ್ದರು ‘‘ಐ ಯಾಮ್ ಬಾರ್ನ್ ಅಂಡ್ ಬ್ರಾಟ್ ಅಪ್ ಇನ್ ಬ್ಯಾಂಗಲೋರ್. ಬಟ್ ಫರ್​ಗೆಟ್ ಅಬೌಟ್ ರೀಡಿಂಗ್ ಅಂಡ್ ರೈಟಿಂಗ್, ಐ ಕಾಂಟ್ ಈವನ್ ಸ್ಪೀಕ್ ಕನ್ನಡ’’ (ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿಯೇ. ಆದರೆ ಓದಿ ಬರೆಯುವುದಿರಲಿ ನನಗೆ ಮಾತನಾಡಲೂ ಕನ್ನಡ ಬರುವುದಿಲ್ಲ) ಎಂದು! ಹಾಗೆ ಹೇಳುವಾಗ ಅವರಲ್ಲಿ ನಾಚಿಕೆ, ಸಂಕೋಚ ಅಥವಾ ಮುಜುಗರದಂಥ ಯಾವ ಭಾವವೂ ಇರುತ್ತಿರಲಿಲ್ಲ. ಬದಲಿಗೆ ಆ ಬಗ್ಗೆ ಹೆಮ್ಮೆಯೋ ಅಥವಾ ನಿರ್ಲಕ್ಷ್ಯವೋ ಕಾಣುತ್ತಿತ್ತು.

    ಇಂಥ ವ್ಯಕ್ತಿಗಳನ್ನು ನಾವು ನೀವೆಲ್ಲರೂ ಬೇಕಾದಷ್ಟು ಕಾಣುತ್ತಿರುತ್ತೇವೆ. ನಮ್ಮಲ್ಲಿ ಮಾತ್ರ ಕಾಣಸಿಗುವ ಈ ಉದಾಸೀನ ಪ್ರವೃತ್ತಿಗೆ ಕಾರಣವೇನಿರಬಹುದೆಂದು ನಾನು ಹಲವು ಬಾರಿ ಯೋಚಿಸಿ ಸೋತಿದ್ದೇನೆ. ನಮಗೇಕೆ ಹೆಮ್ಮೆಯಿಲ್ಲ ನಮಗೆ ಅಸ್ತಿತ್ವ ಕೊಟ್ಟ ಭಾಷೆಯ ಬಗ್ಗೆ? ನಮ್ಮ ಗುರುತಿನ ಬಗ್ಗೆ? ಈ ಬಗ್ಗೆ ಚರ್ಚೆ ಬಂದಾಗಲೆಲ್ಲಾ ಒಂದು ವಾದ ಮುಂದೆ ಬರುತ್ತದೆ. ಯಾವಾಗ ಭಾಷೆ ಅಭಿಮಾನದ ಹಂತದಿಂದ ಅಗತ್ಯದ ಹಂತಕ್ಕೆ ಬರುತ್ತದೋ ಆಗ ಅದರ ಬಳಕೆ, ನಮ್ಮ ಶಬ್ದಕೋಶದ ಅಭಿವೃದ್ಧಿ ಸಾಧ್ಯ.

    ಬೆಂಗಳೂರಿನಲ್ಲಿ ದಿನನಿತ್ಯದ ಜೀವನಕ್ಕೆ ಕನ್ನಡ ‘ಅಗತ್ಯ’ ಎಂಬ ವಾತಾವರಣ ಸೃಷ್ಟಿಯೇ ಆಗಿಲ್ಲ. ಆದ್ದರಿಂದಲೇ ಈ ನಿರಭಿಮಾನ ಎಂಬ ವಾದ. ಈ ವಾದ ಬಹಳಷ್ಟು ಮಟ್ಟಿಗೆ ಸರಿ ಎನಿಸುತ್ತದೆ. ಆದರೂ ಕೆಲವೊಮ್ಮೆ ನಿರಭಿಮಾನ ನಮ್ಮ ರಕ್ತದಲ್ಲಿಯೇ ಹರಿದು ಬಂದಿದೆಯೇನೋ ಎನಿಸುತ್ತದೆ. ಈ ನಿರಾಶಾವಾದಕ್ಕೆ ಪುಷ್ಟಿ ನೀಡುವುದು ನನ್ನದೇ ಆದ ಧಾರಾವಾಹಿ ರಂಗ.

    ಯಾವುದೇ ದೃಶ್ಯದ ಚಿತ್ರೀಕರಣಕ್ಕೆ ಮುಂಚೆ ಆ ದೃಶ್ಯದ ಸೀನ್ ಪೇಪರ್ ನಟರಿಗೆ ಕೊಡಲಾಗುತ್ತದೆ. ಅದನ್ನು ಓದಿಕೊಂಡು ದೃಶ್ಯ ಕಥೆಯ ಯಾವ ಭಾಗವನ್ನು ಹೇಳುತ್ತದೆ ಎಂದು ತಿಳಿದುಕೊಳ್ಳಬೇಕು. ಹೆಚ್ಚೆಂದರೆ ಸೀನ್ ಪೇಪರ್ ಕೈಗೆ ಬಂದ ಮೇಲೆ ಐದಾರು ನಿಮಿಷಗಳ ಸಮಯ ಮಾತ್ರ ಇರುವುದರಿಂದ ಆ ದೃಶ್ಯದಲ್ಲಿರುವ ಪ್ರತಿಯೊಬ್ಬರೂ ದೃಶ್ಯವನ್ನು ಓದಿ ಮನನ ಮಾಡಿಕೊಂಡಿರಬೇಕಾದ್ದು ನಮ್ಮ ವೃತ್ತಿಯ ಒಂದು ಭಾಗ. ಮಾತುಗಳನ್ನು ನೆನಪಿಡುವುದಕ್ಕೆ ಪ್ರತಿಯೊಬ್ಬರಿಗೂ ಅವರದ್ದೇ ವಿಧಾನವಿರುತ್ತದೆ. ಉದಾಹರಣೆಗೆ ನನಗೆ ನಾನೇ ಓದಬೇಕು.

    ಆ ಅಕ್ಷರಗಳನ್ನು ನೋಡಬೇಕು. ಆಗ ನೆನಪಿನಲ್ಲಿ ಉಳಿಯುತ್ತದೆ. ಮತ್ತೊಬ್ಬರು ಓದಿದರೆ ಅದನ್ನು ಕೇಳಿ ನಾನು ನೆನಪಿಟ್ಟುಕೊಳ್ಳಲಾರೆ. ಹಾಗೆಯೇ ಕೆಲವರಿಗೆ ಬೇರೆ ಯಾರಾದರೂ ಓದಬೇಕು. ಅದನ್ನು ಕೇಳಿದರೆ ಅವರಿಗೆ ಮಾತು ಮನಸ್ಸಿನಲ್ಲಿ ನಿಲ್ಲುತ್ತದೆ. ಓದಿದರೆ ತಲೆಗೆ ಹೋಗುವುದಿಲ್ಲ. ಹೀಗೆ ಮಾತುಗಳನ್ನು ನೆನಪಿಡಲು ಬೇರೆ ಬೇರೆ ವಿಧಾನಗಳಿರುತ್ತವೆ. ಆದರೆ ಮೊದಲು ಸೀನ್ ಪೇಪರನ್ನು ಓದುವುದು ಮಾತುಗಳನ್ನು ನೆನಪಿಡಲು ಅಲ್ಲ. ಆ ದೃಶ್ಯದಲ್ಲಿ ಏನೇನು ನಡೆಯುತ್ತದೆ ಎಂದು ತಿಳಿದಿರಬೇಕಾದ್ದರಿಂದ. ಆಗ ಅದಕ್ಕೆ ತಕ್ಕ ಹಾಗೆ ಮುಖಭಾವವನ್ನು, ಮುಂದಿನ, ಅದರ ಮುಂದಿನ ಶಾಟ್​ಗಳಲ್ಲಿ ಆ ಭಾವ ನಿರಂತರತೆಯನ್ನು ಕಾಯ್ದುಕೊಳ್ಳುವಲ್ಲಿ ಸಹಾಯವಾಗುತ್ತದೆ.

    ನಾನು ಕಳೆದ ಹಲವು ವರ್ಷಗಳಿಂದ ಗಮನಿಸುತ್ತಾ ಬಂದಿದ್ದೇನೆ. ಹೊಸದಾಗಿ ಈ ರಂಗಕ್ಕೆ ಬರುವ ಎಳೆಯರಲ್ಲಿ ಮುಕ್ಕಾಲು ಪಾಲು ಜನರು ಕನ್ನಡ ಮಾತನಾಡುತ್ತಾರೆ ಆದರೆ ಸರಿಯಾಗಿ ಓದಲು ಬರುವುದಿಲ್ಲ!! ಬರುವುದೇ ಇಲ್ಲ, ಕನ್ನಡವೇ ಗೊತ್ತಿಲ್ಲ, ಕನ್ನಡದವರಲ್ಲ ಎಂದೇನಲ್ಲ. ಅಂಥವರಿಗೆ ವಿನಾಯಿತಿ ಇದೆ. ಆದರೆ ಇವರೆಲ್ಲಾ ಕನ್ನಡದವರೇ. ಮನೆಯಲ್ಲಿ ಕನ್ನಡ ಮಾತಾಡುವವರೇ. ಆದರೆ ಸರಾಗವಾಗಿ ಓದಲು ಬರುವುದಿಲ್ಲ.

    ಸ್ಕಿ›ೕನ್ ಟೆಸ್ಟ್​ಗೆಂದು ಸೆಟ್​ಗಳಿಗೆ ಬರುವ ಹುಡುಗ ಹುಡುಗಿಯರಿಗೆ ನಾನು ಸಾಧಾರಣವಾಗಿ ಸಹಾಯ ಮಾಡುತ್ತೇನೆ. ಅವರಿಂದ ಅವರಿಗೆ ಕೊಟ್ಟಿರುವ ಮಾತುಗಳನ್ನು ಹೇಳಿಸಿ, ಅದರಲ್ಲಿನ ಭಾವ, ಉಸಿರು ತೆಗೆದುಕೊಳ್ಳಬೇಕಾದ ಜಾಗಗಳು ಮೊದಲಾದವು ಎಲ್ಲಾದರೂ ತಪ್ಪಿದ್ದರೆ ಹೇಳುತ್ತೇನೆ. ನನ್ನ ಅಭಿಪ್ರಾಯ ತಿಳಿಸುತ್ತೇನೆ. ಆದರೆ ಹಾಗೆ ಮಾಡುವ ಮುನ್ನ ಅವರ ಮಾತೇನೆಂದು ತಿಳಿಯಲು ಅವರಿಗೆ ಓದಲು ಹೇಳುತ್ತೇನೆ. ಹತ್ತರಲ್ಲಿ ಎಂಟು ಜನ ‘‘ನಾ…ನೂ… ನಿನನ್ನೂ… ಇಂತವ…ಳೆಂದ…ದು..ಕೊಂಡು…ಡಿ…ರ…ಲಿಲ್ಲ…’’ ಹೀಗೆ ಓದುತ್ತಾರೆ. ತುಣುಕು ತುಣುಕಾಗಿ. ಐತ್ವಗಳು, ಗುಣಿಸುಗಳು, ಕೊಂಬುಗಳು, ದೀರ್ಘಗಳು ಪ್ರತಿಯೊಂದಕ್ಕೂ ಕಷ್ಟ ಪಡುತ್ತಾ ಓದುತ್ತಾರೆ. ಒಂದು ಮಾತು ನೆನಪಿಡಲು ಅರ್ಧ ದಿನ ತೆಗೆದುಕೊಂಡು ತಯಾರಾಗಿ ಸ್ಕಿ›ೕನ್ ಟೆಸ್ಟ್ ಕೊಡುತ್ತಾರೆ. ಆಯ್ಕೆಯೂ ಆಗುತ್ತಾರೆ. ಎ

    ಳೆಯರಾದ್ದರಿಂದ ಮುಖ್ಯ ಪಾತ್ರಗಳಿಗೇ ಆಯ್ಕೆಯಾಗುತ್ತಾರೆ. ದಿನದಲ್ಲಿ ಚಿತ್ರೀಕರಣವಾಗುವ ದೃಶ್ಯಗಳಲ್ಲಿ ಮುಕ್ಕಾಲು ದೃಶ್ಯಗಳಲ್ಲಿ ಇವರಿರುತ್ತಾರೆ ಮತ್ತು ಇವರಿಗೆ ಸಾಕಷ್ಟು ಮಾತುಗಳಿರುತ್ತವೆ. ಇಡೀ ದೃಶ್ಯವನ್ನು ಇವರುಗಳು ಮೇಲಿನ ಹಾಗೆ ಓದುತ್ತಾ ಕುಳಿತರೆ ಬೆಳಗು ಹರಿಯುತ್ತದೆ ಮತ್ತು ಬಹುಪಾಲು ಜನರಿಗೆ ಅದರಲ್ಲಿ ಆಸಕ್ತಿಯೂ ಇರುವುದಿಲ್ಲ. ಸಹಾಯಕ ನಿರ್ದೇಶಕರ ಬಳಿ ಕ್ಯಾಮೆರಾ ಎದುರು ನಿಂತಾಗ ತಮ್ಮ ಮಾತುಗಳ ಒಂದೊಂದು ಸಾಲುಗಳನ್ನು ಓದಿಸಿಕೊಳ್ಳುತ್ತಾರೆ. ಆ ಮಾತಿನ ಹಿಂದೆ ಏನಾಗಿತ್ತು ಎಂದು ತಿಳಿದಿರುವುದಿಲ್ಲ. ಆ ಮಾತಿಗೆ ಮುಂದೆ ಯಾವ ಪಾತ್ರ ಏನು ಹೇಳುತ್ತದೆ ಎಂದು ಗೊತ್ತಿರುವುದಿಲ್ಲ! ಯಾವ ಭಾವವನ್ನು ವ್ಯಕ್ತ ಪಡಿಸಿಯಾರು?

    ಸಹಾಯಕ ನಿರ್ದೇಶಕರು ನಟರಲ್ಲ. ಅವರಿಗೆ ಆ ಮಾತಿನ ಧ್ವನಿ, ಭಾವ, ಏರಿಳಿತಗಳು ಗೊತ್ತಿರುವುದಿಲ್ಲ. ಅವರು ಹೇಗೆ ಓದುತ್ತಾರೋ ಹಾಗೆಯೇ ಇವರು ಹೇಳುತ್ತಾರೆ. ಇಲ್ಲಿ ನಟನೆ ಎಲ್ಲಿ ಸಿಕ್ಕೀತು? ಇದು ತಮ್ಮ ವೃತ್ತಿಗೂ ಮಾಡುವ ಮೋಸವಲ್ಲವೇ? ದೃಶ್ಯವನ್ನೇ ತಿಳಿಯದೇ ನಟನೆ ಮಾಡುವುದು ಹೇಗೆ ಸಾಧ್ಯ? ತಾನೇ ಮಾತಾಡಬೇಕಾದ ಸಂದರ್ಭದಲ್ಲೇ ಓದಲು ಕಲಿಯದ ಇವರುಗಳು, ಮತ್ತೊಬ್ಬರಿಂದ ಕಂಠದಾನ (ಡಬ್ಬಿಂಗ್) ಮಾಡಿಸುತ್ತಾರೆ ಎಂದಾಗಿಬಿಟ್ಟರಂತೂ ಏನನ್ನೂ ಕಲಿಯುವ ಕನಿಷ್ಟ ಪ್ರಯತ್ನವನ್ನೂ ಮಾಡುವುದಿಲ್ಲ. ಕೊನೆಯ ಪಕ್ಷ ಬಾಯಿ ತೆರೆದು ಮಾತನ್ನೂ ಆಡುವುದಿಲ್ಲ. ತಪ್ಪು ತಪ್ಪು ಉಚ್ಚಾರವಿದ್ದರೆ ಕಂಠದಾನ ಕಲಾವಿದರು ಸರಿಪಡಿಸಿಕೊಳ್ಳಲು ಅನುವಾಗಲಿ ಎಂದು!

    ಕನ್ನಡ ಇವರೆಲ್ಲರ ಅನ್ನ ಸಂಪಾದನೆಯ ಮಾರ್ಗ. ಆದರೂ ಭಾಷೆಯನ್ನು ಕಲಿಯಬೇಕಾದ ಒತ್ತಡ ಇವರಲ್ಲಿ ಸೃಷ್ಟಿಯಾಗಿಯೇ ಇಲ್ಲ! ಎಲ್ಲಿ ಎಡವುತ್ತಿದ್ದೇವೆ? ಹೇಗೆ ಸರಿ ಪಡಿಸುವುದು? ‘ಕನ್ನಡ ಉಳಿಸಿ ಬೆಳೆಸಿ’ ಎಂಬ ಘೊಷವಾಕ್ಯದಲ್ಲಿ ನನಗೆ ನಂಬಿಕೆಯಿಲ್ಲ. ಕನ್ನಡ ಒಂದು ಆದಿಭಾಷೆ. ಅದನ್ನು ನಮ್ಮಂಥ ತೃಣಮಾತ್ರರು ಉಳಿಸುತ್ತೇವೆ, ಬೆಳೆಸುತ್ತೇವೆ ಎಂದುಕೊಳ್ಳುವುದು ಹಾಸ್ಯಾಸ್ಪದ. ಕನ್ನಡವನ್ನು ಬಳಸಬೇಕು. ಜೀವಂತವಾಗಿಡಬೇಕು.

    ನಮಗೆ ಅನ್ನ ಕೊಡುವ ಭಾಷೆಯಾದಾಗಲೂ ಅದರೆಡೆಗೆ ನಿರ್ಲಿಪ್ತಿ ತೋರುತ್ತೇವೆಂದರೆ ಇದು ಯಾವುದೋ ಪರಿಹಾರವಿಲ್ಲದ ಶಾಪವೆನಿಸುತ್ತದೆ. ಕಾಲವೇ ಇದಕ್ಕೆ ಉತ್ತರ ಕೊಡಬೇಕು. ಮಾತೃಭಾಷೆಯನ್ನೇ ಕಲಿಯದೇ ಅದೇ ಭಾಷಿಗರಾದ ಕೋಟಿ ಕೋಟಿ ಜನರೆದುರು ಬಂದು ನಟಿಸುತ್ತೇನೆನ್ನುವ ಧಾಷ್ಟರ್್ಯ ಕಲೆಗೆ, ನಟನೆಗೆ, ತನ್ನ ವೃತ್ತಿಗೆ ಮಾಡುವ ದ್ರೋಹ ಮಾತ್ರವಲ್ಲ, ಮಾತೃದ್ರೋಹ ಕೂಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts