More

    ಇನ್ನೂ ತಲುಪಿಲ್ಲ ತುಟ್ಟಿ ಭತ್ಯೆ

    ಸುಭಾಸ ಧೂಪದಹೊಂಡ ಕಾರವಾರ

    ಇಲ್ಲಿನ ಜಿಪಂ ಹೊರಗುತ್ತಿಗೆ ನೌಕರರ ಐದು ವರ್ಷಗಳ ಹಿಂದಿನ ತುಟ್ಟಿ ಭತ್ಯೆ ಕಡತ ಕಚೇರಿಯಲ್ಲೇ ಕೊಳೆಯುತ್ತಿದೆ. ಕಡತ ಹೊತ್ತು ಓಡಾಡುವ ನೌಕರರು ಭತ್ಯೆ ಪಡೆಯಲು ಅಂಗಲಾಚಬೇಕಿದೆ.

    ಜಿಪಂ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜವಾನರು, ಡೇಟಾ ಎಂಟ್ರಿ ಆಪರೇಟರ್​ಗಳ 2016-17, 2017-18ನೇ ಸಾಲಿನ ವೇರಿಯೇಬಲ್ ಡಿಯರ್​ನೆಸ್ ಅಲೋವೆನ್ಸ್ (ವಿಡಿಎ) ಇನ್ನೂ ಕಾರ್ವಿುಕರ ಕೈ ಸೇರಿಲ್ಲ. ಅದಕ್ಕಾಗಿ ಅಧಿಕಾರಿಗಳ ಬಳಿ ಮನವಿ ಮಾಡಿ ನೌಕರರು ಸೋತಿದ್ದಾರೆ.

    2015ರಿಂದ 17ರವರೆಗೆ ಹೊರಗುತ್ತಿಗೆ ಖಾಸಗಿ ಕಂಪನಿಯು ಒಟ್ಟು 23 ಡಿ, ಸಿ ದರ್ಜೆ ನೌಕರರನ್ನು ಜಿಪಂ ಕಚೇರಿಗೆ ಒದಗಿಸಿತ್ತು. ಅವರಿಗೆ 2015ನೇ ಸಾಲಿನಲ್ಲಿ ಕಾರ್ವಿುಕ ಇಲಾಖೆ ಮಾನದಂಡದಂತೆ ತುಟ್ಟಿ ಭತ್ಯೆ ನೀಡಲಾಗಿದೆ. 2016ರ ಜೂನ್​ನಲ್ಲಿ ಕಾರ್ವಿುಕ ಇಲಾಖೆ ವಿಡಿಎಯನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ಆದರೆ, ಪರಿಷ್ಕೃತ ಭತ್ಯೆಯನ್ನು ಲೆಕ್ಕ ಹಾಕಿ ಗುತ್ತಿಗೆ ನೌಕರರ ಖಾತೆಗೆ ಜಮಾ ಮಾಡಲು ಜಿಪಂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಮೊದಲೇ ಕಡಿಮೆ ವೇತನಕ್ಕೆ ದುಡಿಯುತ್ತಿರುವ ನೌಕರರು ತಮಗೆ ಬರಬೇಕಾದ ಸಾವಿರಾರು ರೂಪಾಯಿ ಭತ್ಯೆಗಾಗಿ ಕಾದು ಸುಸ್ತಾಗಿದ್ದಾರೆ.ಮೂವರು ಸಿಇಒ ಬದಲಾದರೂ…

    2016ರ ನಂತರ ಮೂವರು ಸಿಇಒ ಬದಲಾಗಿದ್ದಾರೆ. ಹಲವು ಅಧಿಕಾರಿಗಳು ಆಗಿ ಹೋಗಿದ್ದಾರೆ. ಆದರೆ, ಗುತ್ತಿಗೆ ನೌಕರರಾಗಿ ದುಡಿಯುವ ನಮ್ಮ ನ್ಯಾಯಯುತ ಬೇಡಿಕೆಗೆ ಮನ್ನಣೆ ಸಿಗುತ್ತಿಲ್ಲ ಎನ್ನುತ್ತಾರೆ ಜಿಪಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಸರು ಹೇಳಲಿಚ್ಛಿಸದ ಗುತ್ತಿಗೆ ನೌಕರ. ಈಗ ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಿದೆ. ಈಗಲಾದರೂ ಹಳೆಯ ಬಾಕಿ ತುಟ್ಟಿ ಭತ್ಯೆ ಸಿಕ್ಕರೆ ಜೀವನ ನಿರ್ವಹಣೆಗೆ ಅನುಕೂಲವಾಗಲಿದೆ ಎಂಬ ಆಸೆಯಲ್ಲಿ ನೌಕರರಿದ್ದಾರೆ.

    ಆರ್ಥಿಕ ಮಿತವ್ಯಯ… ತಾತ್ಕಾಲಿಕ ತಡೆ: ಕೋವಿಡ್ ಕಾರಣದಿಂದ ಆರ್ಥಿಕ ಮಿತವ್ಯಯ ಹೇರಿರುವುದರಿಂದ ಈ ಬಾರಿ ಹೊರಗುತ್ತಿಗೆ ನೌಕರರಿಗೆ ನೀಡುವ ತುಟ್ಟಿ ಭತ್ಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಸರ್ಕಾರ ಆದೇಶ ನೀಡಿದೆ. ಅದನ್ನು ತೆರವು ಮಾಡಿ ಭತ್ಯೆ ನೀಡುವ ಯಾವುದೇ ಲಕ್ಷಣ ಇಲ್ಲ. ಬೆಲೆ ಹೆಚ್ಚಿದ ಕಾಲದಲ್ಲೇ ತುಟ್ಟಿ ಭತ್ಯೆಯೂ ಬಾರದೆ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂಬುದು ನೌಕರರ ಬೇಸರ.

    ಏನಿದು?: ವಿಡಿಎ ಎಂಬುದು ಕಾರ್ಖಾನೆ, ಕಂಪನಿ ಮುಂತಾದೆಡೆ ದುಡಿಯುವ ಸಂಘಟಿತ ವಲಯದ ಕಾರ್ವಿುಕರಿಗೆ ಕನಿಷ್ಠ ವೇತನ ಕಾಯ್ದೆಯಡಿ ನೀಡುವ ಸೌಲಭ್ಯ. ಆಯಾ ವರ್ಷದ ದಿನಬಳಕೆ ಸಾಮಗ್ರಿ ಬೆಲೆ ಆಧರಿಸಿ ಸರ್ಕಾರ ಪ್ರತಿ ವರ್ಷ ವಿಡಿಎ ಎಷ್ಟು ಕೊಡಬೇಕು ಎಂಬುದನ್ನು ನಿಗದಿ ಮಾಡುತ್ತದೆ. ಸರ್ಕಾರ ಮಾಡುವ ಪರಿಷ್ಕರಣೆಯಂತೆ ಉದ್ಯೋಗದಾತ ಸಂಸ್ಥೆಯು ನೌಕರನಿಗೆ ಕಾಲ ಕಾಲಕ್ಕೆ ಭತ್ಯೆಯನ್ನು ಪರಿಷ್ಕರಿಸಿ ನೀಡಬೇಕು.

    ಹೊರ ಗುತ್ತಿಗೆ ನೌಕರರ ವಿಡಿಎ ಬಾಕಿ ಕಡತ ಪರಿಶೀಲಿಸಿದ್ದೇನೆ. ಅದರಲ್ಲಿ ಕೆಲವು ಗೊಂದಲಗಳಿವೆ. ಆರ್ಥಿಕ ವಿಭಾಗದ ಜತೆ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.

    | ಪ್ರಿಯಾಂಗಾ ಎಂ.ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts