More

    ಅಗತ್ಯವಿರುವೆಡೆ ಬೋರ್‌ವೆಲ್ ಕೊರೆಯಿಸಲು ತುಷಾರ್ ಗಿರಿನಾಥ್ ಸೂಚನೆ

    ಬೆಂಗಳೂರು: ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಪ್ರದೇಶಗಳಲ್ಲಿ ಪರಿಹಾರ ಒದಗಿಸಲು ಬೋರ್‌ವೆಲ್ ಕೊರೆಯಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಮಂಗಳವಾರ ಈ ಎರಡೂ ವಲಯಗಳಿಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಮುಖ್ಯವಾಗಿ ಕಾವೇರಿ ನೀರು ಸಂಪರ್ಕ ಕಲ್ಪಿಸದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದ್ದಲ್ಲಿ ತಕ್ಷಣವೇ ಹಾಲಿ ಬೋರ್‌ವೆಲ್‌ಗಳನ್ನು ದುರಸ್ತಿ ಮಾಡುವ ಜತೆಗೆ ಹೊಸದಾಗಿ ಕೊಳವೆಬಾವಿಗಳನ್ನು ಕೊರೆಯಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

    ಆರ್‌ಆರ್ ನಗರ ವಲಯದಲ್ಲಿ 110 ಹಳ್ಳಿಗಳ ಪಟ್ಟಿಯಲ್ಲಿರುವ 20 ಗ್ರಾಮಗಳಿವೆ. ಸದ್ಯ ಇಲ್ಲೆಲ್ಲೂ ನೀರಿನ ಅಭಾವ ಉಂಟಾಗದಂತೆ ನಿಗಾ ವಹಿಸಬೇಕು. ಹಾಲಿ 146 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, 93 ಘಟಕಗಳಿಗೆ ಬೋರ್‌ವೆಲ್ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. 36 ಘಟಕಗಳಿಗೆ ಜಲಮಂಡಳಿ ನೀರು ಪೂರೈಸುತ್ತಿದ್ದು, 17 ಘಟಕಗಳು ಮಾತ್ರ ಸ್ಥಗಿತಗೊಂಡಿವೆ. ಇವುಗಳನ್ನೂ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

    113 ಸ್ಥಳಗಳಲ್ಲಿ ಸಿಂಟೆಕ್ಸ್ ಟ್ಯಾಂಕ್ ಸೌಲಭ್ಯ:

    ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಪಾಲಿಕೆಯ 38 ಹಾಗೂ ಜಲಮಂಡಳಿಯ 18 ನೀರಿನ ಟ್ಯಾಂಕರ್‌ಗಳ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿದೆ. 113 ಸ್ಥಳಗಳಲ್ಲಿ ಸಿಂಟೆಕ್ಸ್ ಟ್ಯಾಂಕ್‌ಗಳನ್ನು ಇರಿಸಿದ್ದು, ಜಲಮಂಡಳಿಯಿಂದ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಈ ಉಪಕ್ರಮದಿಂದಾಗಿ ಈ ವಲಯದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಈ ವಲಯದಲ್ಲಿ 80 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಸದ್ಯ 24 ಘಟಕಗಳು ಸ್ಥಗಿತಗೊಂಡಿವೆ. ಹಾಗಾಗಿ ಎಲ್ಲೆಲ್ಲಿ ಸಮಸ್ಯೆಯಾಗಲಿದೆಯೋ ಅಂತಹ ಪ್ರದೇಶಗಳಿಗೆ ಜಲಮಂಡಳಿಯಿಂದ ನೀರಿನ ವ್ಯವಸ್ಥೆ ಮಾಡಬೇಕು ಎಂದು ತುಷಾರ್ ಗಿರಿನಾಥ್ ಸೂಚನೆ ನೀಡಿದರು.

    ಸಭೆಯಲ್ಲಿ ಬಿಬಿಎಂಪಿಯ ವಿಪತ್ತು ನಿರ್ವಹಣೆಯ ನೋಡಲ್ ಅಧಿಕಾರಿ ಸುರೋಳ್ಕರ್ ವಿಕಾಸ್ ಕಿಶೋರ್, ರಮ್ಯ, ವಲಯ ಆಯುಕ್ತ ಶಿವಾನಂದ ಕಪಾಶಿ, ಮುಖ್ಯ ಅಭಿಯಂತರರಾದ ರಾಘವೇಂದ್ರ ಪ್ರಸಾದ್, ಶಶಿಕುಮಾರ್ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts