More

    ಕಡಲಾಮೆಗಳು ಬರುತ್ತಿವೆ ಕಡಲ ಬದಿಗೆ, ಸ್ವಚ್ಛ ತೀರಗಳಿಗೆ ನಿಸರ್ಗ ಮಿತ್ರರ ಸರ್ಟಿಫಿಕೇಟ್!

    ಮಂಗಳೂರು: ಕುಂದಾಪುರ ಕೋಡಿ ಮತ್ತು ಮದ್ಯ ಕೋಡಿ ಕಡಲ ತೀರಗಳಲ್ಲಿ ನಾಲ್ಕನೇ ಬಾರಿ ಕಡಲಾಮೆಗಳು ಬಂದು ಮೊಟ್ಟೆ ಇಟ್ಟಿವೆ. ಇದು ಕರ್ನಾಟಕ ಕರಾವಳಿಯ ಬೀಚುಗಳು ನಿಸರ್ಗ ಸ್ನೇಹಿಯಾಗಿ ಸುಧಾರಣೆಗೊಳ್ಳುತ್ತಿವೆ ಎನ್ನುವುದಕ್ಕೆ ಸಾಕ್ಷಿ ಎನ್ನುತ್ತಾರೆ ಪರಿಸರ ತಜ್ಞರು.

    ಕಳೆದ ಅನೇಕ ವರ್ಷಗಳಿಂದ ಕಡಲ ತೀರಗಳಲ್ಲಿ ಕಡಲಾಮೆ ಮೊಟ್ಟೆಗಳು ಗೋಚರಿಸಿದ್ದೇ ಇಲ್ಲ ಎನ್ನುತ್ತಾರೆ ಸ್ಥಳೀಯರು. ಪರಿಸರ ಹಾನಿಯೇ ಕಡಲಾಮೆಗಳು ಇಲ್ಲಿನ ತೀರಗಳಿಗೆ ಇತ್ತೀಚಿನ ವರ್ಷಗಳಲ್ಲಿ ಬರದಿರಲು ಮುಖ್ಯ ಕಾರಣ.

    ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಹರಿತ್ ಭಾರತ್ ಯೋಜನೆಯಲ್ಲಿ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಹಾಗೂ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನೆ ಸಂಸ್ಥೆ(ಎಂಪ್ರಿ) ಸಹಯೋಗದಲ್ಲಿ ಕರ್ನಾಟಕದ ಐದು ಕಡಲ ತೀರಗಳನ್ನು ಕಳೆದ ನವೆಂಬರ್‌ನಲ್ಲಿ ದತ್ತು ತೆಗೆದುಕೊಳ್ಳಲಾಗಿದೆ.

    ಮಂಗಳೂರಿನ ಬೆಂಗ್ರೆ (ತಣ್ಣೀರುಬಾವಿ ತನಕ), ಇಡ್ಯಾ ಗುಡ್ಡೆಕೊಪ್ಲ, ಉಡುಪಿ ಜಿಲ್ಲೆಯ ಕುಂದಾಪುರ ಕೋಡಿ, ಮದ್ಯಕೋಡಿ, ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕಡಲ ಕಿನಾರೆಗಳನ್ನು ದತ್ತು ನೀಡಲಾಗಿದ್ದು, ಇಲ್ಲಿ ಈಜು ಬಲ್ಲ ತಲಾ ಇಬ್ಬರು ಸಿಬ್ಬಂದಿಯನ್ನು ನೇಮಿಸಲಾಗಿದೆ. ಇವರು ಸ್ವಚ್ಛತಾ ಕಾರ್ಯವನ್ನು ನಿರ್ವಹಿಸುವುದರ ಜತೆಯಲ್ಲೇ ತೀರಗಳಿಗೆ ಭೇಟಿ ನೀಡುವ ಸಾರ್ವಜನಿಕರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಾರೆ.

    ಮುಕ್ತವಾಗಿ ಮೋಜು, ಪಾರ್ಟಿ ನಡೆಸಲು ಕಡಲ ತೀರಗಳನ್ನು ಬಳಸುವವರು ಕಡಿಮೆ ಇಲ್ಲ. ಅವರು ಬಳಸಿ ಎಸೆದ ಮದ್ಯದ ಬಾಟಲಿ, ಸಿಗರೇಟ್ ಖಾಲಿ ಪ್ಯಾಕೆಟ್, ಕಾಂಡಮ್ ಸಹಿತ ಅಸಂಖ್ಯಾತ ತ್ಯಾಜ್ಯ ವಸ್ತುಗಳ ರಾಶಿಯನ್ನು ಯಾವಾಗಲೊಮ್ಮೆ ಪರಿಸರ ಸ್ನೇಹಿ ಸಂಘಸಂಸ್ಥೆಗಳು ಸ್ವಚ್ಛಗೊಳಿಸುತ್ತಿದ್ದವು. ಆದರೆ ನಿರಂತರ ವ್ಯವಸ್ಥೆಯೊಂದು ಇಲ್ಲಿ ಅಗತ್ಯವಿತ್ತು. ಈ ಕೊರತೆ ತುಂಬುವ ಪ್ರಯತ್ನಗಳು ನಡೆಯುತ್ತಿವೆ.

    ಮೀನುಗಾರಿಕೆ ಚಟುವಟಿಕೆಗಳಿಗೆ ಮೀಸಲಾಗಿದ್ದ ಕರ್ನಾಟಕ ಕರಾವಳಿಯ ಹೆಚ್ಚಿನ ಬೀಚ್‌ಗಳು ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿ ಕೇಂದ್ರಗಳಾಗಿ ಮಹತ್ವ ಪಡೆಯುತ್ತಿವೆ. ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದಿಂದ ಇಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಲು ಆರಂಭಿಸಿರುವುದೇ ಈ ಬದಲಾವಣೆಗೆ ಮುಖ್ಯ ಕಾರಣ.

    ರಾಜ್ಯದ ಐದು ಕಡಲ ತೀರಗಳನ್ನು ದತ್ತು ತೆಗೆದುಕೊಂಡ ಬಳಿಕ ಈ ತೀರಗಳಲ್ಲಿ ಗಮನಾರ್ಹ ಮಟ್ಟದ ಸುಧಾರಣೆ ಆಗಿದೆ. ಕುಂದಾಪುರ ಕೋಡಿ ಮತ್ತು ಮದ್ಯ ಕೋಡಿ ತೀರಗಳಲ್ಲಿ ಸುಮಾರು ವರ್ಷಗಳ ಬಳಿಕ ಕಡಲಾಮೆಗಳು ಬಂದು ಮೊಟ್ಟೆ ಇಡಲು ಆರಂಭಿಸಿರುವುದೇ ಇದಕ್ಕೆ ಒಂದು ಉತ್ತಮ ನಿದರ್ಶನ. ಕಡಲ ತೀರ ಸ್ವಚ್ಛತೆಯ ಒಪ್ಪಂದ ಮುಂದುವರಿಯುವ ಸಾಧ್ಯತೆಯೇ ಅಧಿಕ.

    ಡಾ.ದಿನೇಶ್ ಕುಮಾರ್, ಪ್ರಾದೇಶಿಕ ನಿರ್ದೇಶಕರು, ಪರಿಸರ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts