More

    ಅಪಾಯ ಮಟ್ಟ ಮೀರಿದ ತುಂಗಭದ್ರಾ

    ಗುತ್ತಲ: ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಬೆಳೆಯೆಲ್ಲ ತುಂಗಭದ್ರೆಯ ಪಾಲಾಗಿವೆ.

    ಮಂಗಳವಾರ ಬೆಳಗ್ಗೆ 8 ಗಂಟೆಗೆ 6.930 ಮೀಟರ್ ಇದ್ದ ನೀರಿನ ಮಟ್ಟ ಮಧ್ಯಾಹ್ನದ ವೇಳೆಗೆ ಅಪಾಯ ಮಟ್ಟ 7.000 ಮೀಟರ್​ಗೆ ತಲುಪಿ ಸಂಜೆ 6 ಗಂಟೆ ವೇಳೆಗೆ ಮೀ. 7.370 ಮೀಟರ್ ತಲುಪಿದೆ. ಪ್ರತಿ ಗಂಟೆಗೆ ಸುಮಾರು 6 ಸೆ.ಮೀ ನಷ್ಟು ಏರುತ್ತಿದೆ. ಅಲ್ಲದೆ, ಚೌಡಯ್ಯದಾನಪುರ- ಕಂಚಾರಗಟ್ಟಿ ರಸ್ತೆ ಸಂಚಾರ ಬಂದ್ ಆಗಿದೆ.

    ತುಂಗಭದ್ರಾ ನದಿಯ ಅಬ್ಬರದಿಂದಾಗಿ ತಾಲೂಕಿನ ಕಂಚಾರಗಟ್ಟಿ, ನರಸೀಪುರ, ಹರಳಹಳ್ಳಿ, ಹಾವನೂರ, ಹುರಳಿಹಾಳ, ಗಳಗನಾಥ, ಗುಯಿಲಗುಂದಿ, ಮೇವುಂಡಿ, ತೆರೆದಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳ ರೈತರ ಸಾವಿರಾರು ಹೆಕ್ಟೇರ್ ಜಮೀನಿನಲ್ಲಿನ ಫಸಲು ಜಲಾವೃತಗೊಂಡಿದೆ.

    ವರದಾ ನದಿಯ ಅಬ್ಬರ ಹೆಚ್ಚಾಗುತ್ತಿದ್ದು ಗಳಗನಾಥ ಗ್ರಾಮದ ಬಳಿ ತುಂಗಭದ್ರಾ ನದಿಯೊಂದಿಗೆ ಸಂಗಮವಾಗ ಸ್ಥಳದ ಹಿಂಭಾಗದಲ್ಲಿ ಬರುವ ಗಳಗನಾಥ, ಬೆಳವಿಗಿ, ನೀರಲಗಿ, ಮರೋಳ, ಹಾಲಗಿ, ಮರಡೂರ, ಅಕ್ಕೂರ, ಹೊಸರಿತ್ತಿ, ಕಿತ್ತೂರ, ಕೆಸರಳ್ಳಿ, ಕೋಣನತಂಬಿಗಿ, ಹಂದಿಗನೂರ ಗ್ರಾಮಗಳಲ್ಲಿನ ಸಾವಿರಾರು ಎಕರೆ ಪ್ರದೇಶಗಳು ವರದಾ ನದಿಯ ಪಾಲಾಗುವ ಹಂತ ತಲುಪಿದೆ.

    ಉಭಯ ನದಿಗಳ ಪ್ರವಾಹಕ್ಕೆ ಕಳೆದ ಎರಡು ತಿಂಗಳಲ್ಲಿ ಪ್ರವಾಹಕ್ಕೆ ಸಿಲುಕಿ ಮೆಕ್ಕೆಜೋಳ, ಹತ್ತಿ, ಮೆಣಸಿಕಾಯಿ, ಟೊಮ್ಯಾಟೊ, ಬದನೆಕಾಯಿ, ಸೌತೆ ಕಾಯಿ, ರೇಷ್ಮೆ, ಶೇಂಗಾ, ಅಡಕೆ, ಪೇರಲ, ಚಿಕ್ಕು, ಕಬ್ಬು ಸೇರಿ ವಿವಿಧ ತೋಟಗಾರಿಕೆ ಬೆಳೆಗಳು ಜಲಾವೃತವಾಗಿ ಹಾನಿಗೆ ಒಳಗಾಗಿದೆ. ಈಗ ಅವು ಬಹುತೇಕ ಹಾನಿಯ ನಂತರ ತ್ಯಾಜ್ಯವಾಗುವ ಹಂತಕ್ಕೆ ಬಂದು ತಲುಪಿದೆ.

    ಕಳೆದ ಜುಲೈ 16ರಂದು ಅಪಾಯ ಮಟ್ಟದಲ್ಲಿ ಹರಿದ್ದ ತುಂಗಭದ್ರಾ ಈಗ ಮತ್ತೊಮ್ಮೆ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ರೈತರು ಆತಂಕದಲ್ಲಿದ್ದಾರೆ. ಇನ್ನೂ ಮಳೆ ಮುಂದುವರಿಯುವ ಲಕ್ಷಣದಲ್ಲಿರುವ ಕಾರಣ ನದಿಯ ನೀರಿನ ಮಟ್ಟ ದಿನೇ ದಿನೇ ಏರುತ್ತ ಸಾಗಿದರೆ ಅಪಾಯ ಹಾಗೂ ಹಾನಿಯ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆಯಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts