More

    ಗೃಹಲಕ್ಷ್ಮೀ ಯೋಜನೆಗೆ ಚಾಲನೆ

    ತುಮಕೂರು: ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಗೆ ನೀಲಮ್ಮ ಎಂಬುವವರನ್ನು ಫಲಾನುಭವಿಯಾಗಿ ನೋಂದಣಿ ಮಾಡುವ ಮೂಲಕ ಕೋರಾ ಗ್ರಾಪಂ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಗುರುವಾರ ಯೋಜನೆಗೆ ಚಾಲನೆ ನೀಡಿದರು.
    ಪಡಿತರಚೀಟಿ ಹೊಂದಿದ ಕುಟುಂಬದ ಯಜಮಾನಿಗೆ ನೋಂದಾಯಿತ ದೂರವಾಣಿ ಸಂಖ್ಯೆಗೆ ಕಳುಹಿಸಲಾಗುವ ಎಸ್‌ಎಂಎಸ್‌ನಲ್ಲಿ ತಿಳಿಸಿದ ದಿನಾಂಕದಂದು ನೋಂದಣಿ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಬಹುದು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
    ಗೃಹಲಕ್ಷ್ಮಿ ಯೋಜನೆಗೆ ಜುಲೈ 19ರಂದು ಸಿಎಂ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಯಶಸ್ವಿಯಾಗಬೇಕೆಂದು ಸೂಚನೆ ನೀಡಲಾಗಿದ್ದು, ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ ಎಂದರು.
    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಜಿಲ್ಲೆಯ ಅಂದಾಜು 7 ಲಕ್ಷ ಯಜಮಾನಿ ಮಹಿಳೆಯರಿಗೆ ತಿಂಗಳಿಗೆ 2000ರೂ. ನೀಡಲು ವರ್ಷಕ್ಕೆ 1680 ಕೋಟಿ ರೂ. ಬೇಕಾಗುತ್ತದೆ. ಯಾವುದೇ ಫಲಾನುಭವಿ ಕೇಂದ್ರಕ್ಕೆ ಬಂದ ತಕ್ಷಣ ಅರ್ಜಿ ಸ್ವೀಕರಿಸಿ ನೋಂದಣಿ ಮಾಡಬೇಕು. ಯಾವುದೇ ಫಲಾನುಭವಿಯ ಹೆಸರು ಕೈಬಿಟ್ಟು ಹೋದಲ್ಲಿ ಯೋಜನೆಗೆ ಸೇರ್ಪಡೆಗೊಳ್ಳುವ ಅವಕಾಶ ನಿರಂತರವಾಗಿ ದೊರಕಲಿದೆ ಎಂದರು.
    ಕೋರಾ ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ, ಉಪಾಧ್ಯಕ್ಷ ಬಿ.ಮಧು ಮತ್ತಿತರರು ಇದ್ದರು.


    ಯೋಜನೆಗೆ ಜಿಲ್ಲೆಯಲ್ಲಿ ಮಾಸಿಕ 140 ಕೋಟಿ ರೂ.: ಜಿಲ್ಲೆಯಲ್ಲಿ 722523 ಪಡಿತರ ಚೀಟಿದಾರರಿದ್ದು, ಅಂತ್ಯೋದಯ, ಎಪಿಎಲ್, ಬಿಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬದ ಯಜಮಾನಿ ಮಹಿಳೆಯರಿಗೆ ಮಾಸಿಕ 2000ರೂ.ನಂತೆ ಒಟ್ಟು 140ಕೋಟಿ ರೂ. ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಲಿದೆ. ಬ್ಯಾಂಕ್‌ನಲ್ಲಿ ಇಕೆವೈಸಿ ಹಾಗೂ ಆಧಾರ್ ಲಿಂಕ್ ಆಗಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ 2 ಸಾವಿರ ರೂ. ಜಮೆಯಾಗಲಿದೆ. ಕುಟುಂಬದ ಯಜಮಾನಿ ಮಹಿಳೆಯರಿಗೆ ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎಸ್‌ಎಂಎಸ್ ರವಾನಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ನೋಂದಣಿ ಉಚಿತವಾಗಿದ್ದು, ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸುವಂತಿಲ್ಲ.


    ನೋಂದಣಿಗೆ 744 ಕೇಂದ್ರ: ಜಿಲ್ಲೆಯಲ್ಲಿ 722523 ಫಲಾನುಭವಿಗಳಿದ್ದು 744 ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಒಂದು ಕೇಂದ್ರದಲ್ಲಿ ದಿನಕ್ಕೆ 60 ಅರ್ಜಿ ಸ್ವೀಕರಿಸಲು ಅವಕಾಶವಿದ್ದು, ನೂಕುನುಗ್ಗಲು ಉಂಟಾಗುವ ಸಾಧ್ಯತೆಯಿದೆ.
    ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಸಂಬಂಧ ಯಾವುದೇ ಮಾಹಿತಿ ಅಗತ್ಯವಿದ್ದಲ್ಲಿ ರಾಜ್ಯ ಮಟ್ಟದ ಉಚಿತ ಸಹಾಯವಾಣಿ 1902 ಹಾಗೂ ತುಮಕೂರು ಜಿಲ್ಲಾ ಮಟ್ಟದಲ್ಲಿ 155304/ 0816 2213400 ಸಂಪರ್ಕಿಸಿ ಮಹಿತಿ ಪಡೆಯಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts