More

    ವಿವಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ; ನಾಲ್ಕು ವರ್ಷದ ಪದವಿ ಕೋರ್ಸ್ ; ಪಠ್ಯಕ್ರಮ ಸಿದ್ಧತೆಗೆ ಸೂಚನೆ ; ಕುಲಪತಿ ವಿಶೇಷ ಆಸಕ್ತಿ

    ತುಮಕೂರು : ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನದಲ್ಲಿ ದೇಶದಲ್ಲಿಯೇ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದಾಗಿದ್ದು, ಈ ನಿಟ್ಟಿನಲ್ಲಿ ತುಮಕೂರು ವಿವಿ ಕೂಡ ಸ್ನಾತಕ ಪದವಿ ವ್ಯಾಸಂಗವನ್ನು ನಾಲ್ಕು ವರ್ಷಕ್ಕೆ ವಿಸ್ತರಿಸಿ ಬುಧವಾರ ಮಹತ್ವದ ಆದೇಶ ಹೊರಡಿಸಿದೆ.

    ತುಮಕೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗುವಂತೆ ಆದೇಶ ಹೊರಬಂದಿದ್ದು, ಆಗಸ್ಟ್ 23ರಿಂದ ಪ್ರಕ್ರಿಯೆ ಅರಂಭವಾಗಲಿದೆ, ವಿದ್ಯಾರ್ಥಿಗಳು ನಾಲ್ಕು ವರ್ಷಗಳ ಆನರ್ಸ್ ಪದವಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

    ಬಹುಶಿಸ್ತೀಯ ಮೌಲ್ಯಾಧಾರಿತ ಅಧ್ಯಯನಕ್ಕೆ ಅವಕಾಶ ಕಲ್ಪಿಸಿರುವ ಸ್ನಾತಕ ಪದವಿಯ ಈ ಹೊಸ ಮಾದರಿಯು ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳಿಗೆ ಯುವಜನರನ್ನು ಸಿದ್ಧಪಡಿಸುವ ಉದ್ದೇಶ ಹೊಂದಿದೆ. ಕೋರ್ಸ್ ಮಧ್ಯೆ ವ್ಯಾಸಂಗ ನಿಲ್ಲಿಸಿದ ವಿದ್ಯಾರ್ಥಿ ಮತ್ತೆ ಅಲ್ಲಿಂದಲೇ ವ್ಯಾಸಂಗ ಮುಂದುವರಿಸಲು ಅವಕಾಶವಿದ್ದು, ನಾಲ್ಕು ವರ್ಷದ ಆನರ್ಸ್ ಪದವಿ ಪಡೆದ ವಿದ್ಯಾರ್ಥಿ ನೇರವಾಗಿ ಪಿಎಚ್‌ಡಿ ಅಧ್ಯಯನಕ್ಕೆ ಪ್ರವೇಶ ಪಡೆಯಬಹುದು.

    ವಿಜ್ಞಾನ ವಿಭಾಗದ ವಿದ್ಯಾರ್ಥಿ ಕಲೆ ಹಾಗೂ ವಾಣಿಜ್ಯ ವಿಷಯಗಳನ್ನು ಓದುವುದಕ್ಕೂ, ಕಲಾ ವಿಭಾಗದ ವಿದ್ಯಾರ್ಥಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಓದುವುದಕ್ಕೂ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉಳಿದೆರಡು ವಿಭಾಗದ ವಿಷಯಗಳನ್ನು ಓದುವುದಕ್ಕೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅವಕಾಶವಿದೆ.

    ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಸಮಾಜ ವಿಜ್ಞಾನ ವಿಷಯಗಳ ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮಗಳ ವ್ಯಾಪ್ತಿ ರೂಪಿಸುವ ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷರಾಗಿರುವ ಕಾರಣದಿಂದ ತುಮಕೂರು ವಿವಿ ಹೊಸ ಮಾದರಿಯ ಪದವಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಮುನ್ನುಡಿ ಬರೆದಿದೆ. ಈ ನಿಟ್ಟಿನಲ್ಲಿ ವಿಷಯ ಪರಿಣಿತರ ಸಮಿತಿಗಳು ಪಠ್ಯಕ್ರಮ ರೂಪಿಸಲು ಮುಂದಾಗಿದ್ದಾರೆ.

    ನಾಲ್ಕು ವರ್ಷದ ಆನರ್ಸ್ ಪದವಿಯ ವಿಶೇಷ ನಿಮಯಗಳನ್ನು ಪರಿಚಯಿಸುವ ವಿಡಿಯೋ ಕೂಡ ವಿವಿ ಸೃಜಿಸಿದ್ದು ಅಧ್ಯಾಪಕರು, ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಲಸ ಸಾಗಿದೆ.

    ಮೂರು ವರ್ಷಕ್ಕೆ ಪದವಿ, ನಾಲ್ಕು ವರ್ಷಕ್ಕೆ ಆನರ್ಸ್ : ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಹುಹಂತದ ಪ್ರವೇಶ ಹಾಗೂ ನಿರ್ಗಮನದ ಅವಕಾಶ ಇರುವುದು ಪದವಿಯ ವೈಶಿಷ್ಟ ಎನಿಸಿದೆ. ಪದವಿಯ ಮೊದಲ ವರ್ಷ ಪೂರೈಸಿದ ಬಳಿಕ ಅನಿವಾರ್ಯವಾಗಿ ವ್ಯಾಸಂಗ ಮುಂದುವರಿಸಲಾಗದ ಪರಿಸ್ಥಿತಿ ಎದುರಾದರೆ ಆ ವಿದ್ಯಾರ್ಥಿ ‘ಸರ್ಟಿಫಿಕೇಟ್’ ಪಡೆಯಲು ಅವಕಾಶವಿದೆ. 2ನೇ ವರ್ಷದ ಅಂತ್ಯದಲ್ಲಿ ಕೋರ್ಸ್ ಬಿಡುವುದಾದರೆ ‘ಡಿಪ್ಲೊಮಾ’, ಮೂರನೇ ವರ್ಷ ಪೂರೈಸಿದರೆ ಪದವಿ ಹಾಗೂ ಸಂಪೂರ್ಣ ನಾಲ್ಕು ವರ್ಷ ಪೂರೈಸಿದರೆ ಆನರ್ಸ್ ಪದವಿಗೆ ಅರ್ಹರಾಗುತ್ತಾರೆ. ಆನರ್ಸ್ ಪಡೆದ ವಿದ್ಯಾರ್ಥಿ ಸ್ನಾತಕೋತ್ತರ ಪದವಿ ಇಲ್ಲದೆ ಪಿಎಚ್‌ಡಿಗೂ ಪ್ರವೇಶ ಪಡೆಯಲು ಅರ್ಹರಾಗುವುದು ಇಲ್ಲಿನ ವಿಶೇಷ.

    ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನಕ್ಕೆ ತುಮಕೂರು ವಿವಿ ಮುಂದಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ, ಎಲ್ಲ ಪದವಿ ಕಾಲೇಜುಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು ಅರಿವು ಕಾರ್ಯಾಗಾರಗಳು ನಡೆಯಲಿವೆ. ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಈ ಬಗ್ಗೆ ತಿಳಿವಳಿಕೆ ಪಡೆದು ಹೊಸ ನಿಯಮಗಳಿಗೆ ಸಿದ್ಧರಾಗಬೇಕು.
    ವೈ.ಎಸ್.ಸಿದ್ಧೇಗೌಡ ಕುಲಪತಿ, ತುಮಕೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts