More

    ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಲಂಚಾವತಾರ: ದೂರು ಕೊಟ್ರೆ ಹೆಂಡತಿ, ಮಕ್ಕಳನ್ನ ಅಡಮಾನ ಇರಿಸ್ತಾರಂತೆ

    ತುಮಕೂರು: ಜಿಲ್ಲಾ ಕಾರಾಗೃಹದಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಕೈದಿಗಳನ್ನು ನೋಡಲು ಜೈಲಿಗೆ ಬರುವ ಕುಟುಂಬಸ್ಥರಿಂದ ಜೈಲಿನ ಸಿಬ್ಬಂದಿ ಹಣ ಪೀಕುತ್ತಿರುವ ಆರೋಪ ಕೇಳಿಬಂದಿದೆ.

    ಒಬ್ಬ ಕೈದಿಯನ್ನು ನೋಡಲು ಜೈಲಿನ ಸಿಬ್ಬಂದಿ 1150 ರೂ. ಲಂಚ ಪಡೆದ ದೃಶ್ಯ ಮೊಬೈಲ್​​ನಲ್ಲಿ ಸೆರೆಯಾಗಿದೆ. ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಈ ಘಟನೆ ನಡೆದಿದ್ದು, ಕಾರಾಗೃಹದಲ್ಲಿನ ಅವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸೇರಿದಂತೆ ಹಲವರಿಗೆ ಕೈದಿಗಳು ದೂರು ನೀಡಿದ್ದಾರೆ.

    ಜಿಲ್ಲಾಧಿಕಾರಿ, ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಎಡಿಜಿಪಿ, ಲೋಕಾಯುಕ್ತ, ಮಾನವಹಕ್ಕುಗಳ ಆಯೋಗ ಹಾಗೂ ಗೃಹಸಚಿವರಿಗೆ ಕೈದಿಗಳು ದೂರು ನೀಡಿದ್ದಾರೆ. ನಾಲ್ಕೈದು ಪುಟಗಳಲ್ಲಿ ಬಂಧಿಖಾನೆಯ ಸಮಸ್ಯೆಗಳ ವಿಸ್ಕೃತ ವಿವರಣೆ ನೀಡಿ, ಸುಮಾರು 40ಕ್ಕೂ ಹೆಚ್ಚು ಕೈದಿಗಳು ದೂರು ನೀಡಿದ್ದಾರೆ.

    ಜಿಲ್ಲಾ ಕಾರಾಗೃಹವು ತುಮಕೂರು ತಾಲೂಕಿನ ಊರುಕೆರೆ ಬಳಿಯಿದೆ. ಕಾರಾಗೃಹದಲ್ಲಿ ಸಮರ್ಪಕವಾಗಿ ಊಟ ನೀಡುತ್ತಿಲ್ಲ ಎಂದು ಜೈಲು ಅಧೀಕ್ಷಕರ ವಿರುದ್ಧವು ಆರೋಪ ಮಾಡಿದ್ದಾರೆ. ಕಳೆದ ವಾರವಷ್ಟೇ ವಿಚಾರಣಾಧೀನ ಕೈದಿಗಳು ಜೈಲಿನಲ್ಲಿ ಪ್ರತಿಭಟನೆ ನಡೆಸಿದ್ದರು. ಕಳೆಪೆ ಗುಣಮಟ್ಟದ ಆಹಾರ ಹಾಗೂ ಜೈಲಿನ ಅಕ್ರಮಗಳ ವಿರುದ್ಧ ಪ್ರತಿಭಟಿಸಿದ್ದರು.

    ತುಮಕೂರು ಜಿಲ್ಲಾ ಕಾರಾಗೃಹ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕೈದಿಗಳು ಆಕ್ರೋಶ ಹೊರಹಾಕಿದ್ದರು. ಕಳೆದ ವಾರ ಪ್ರತಿಭಟನೆ ಕಾವು ಹೆಚ್ಚಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಭೇಟಿ, ಪರಿಶೀಲನೆ ನಡೆಸಿದ್ದರು. ಹಿರಿಯ ಅಧಿಕಾರಿಗಳು ಪರಿಶೀಲನೆಗೆ ಬಂದರೆ ದೂರು ನೀಡದಂತೆ ಕಾರಾಗೃಹದ ಅಧೀಕ್ಷಕಿ ಶಾಂತಶ್ರೀ ತಾಕೀತು ಮಾಡಿದ್ದಾರೆ ಎಂದು ಕೈದಿಗಳು ದೂರಿದ್ದಾರೆ. ಶಾಂತಶ್ರೀ ವಿರುದ್ಧ ಕೈದಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    ಜೈಲಿಗೆ ಭೇಟಿ ನೀಡುವ ಎಲ್ಲಾ ಉನ್ನತ ಅಧಿಕಾರಿಗಳಿಗೆ ಮಾಸಿಕವಾಗಿ 1 ಲಕ್ಷ, 2 ಲಕ್ಷ ರೂ.ಗಳನ್ನು ಅಧಿಕಾರಿಗಳ ದರ್ಜೆಗೆ ತಕ್ಕಂತೆ ಲಂಚ ನೀಡುತ್ತಿದ್ದೇನೆ ಎಂದು ಅಧೀಕ್ಷಕಿ ಶಾಂತಶ್ರೀ ಹೇಳುತ್ತಾರೆ ಎಂದು ಆರೋಪ ಮಾಡಿದ್ದಾರೆ. ನೀವುಗಳು ಯಾವುದೇ ದೂರು ನೀಡಿದರೂ ಏನನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಅಧಿಕಾರಿಗಳು ಇಲ್ಲಿಗೆ ಬರುವುದು ಮಾಮೂಲಿ ಲಂಚ ಪಡೆಯಲೇ ಹೊರತು ನಿಮ್ಮ ಯೋಗಕ್ಷೇಮ ವಿಚಾರಿಸಲು ಅಲ್ಲ. ಯಾವನಾದರೂ ದೂರು ನೀಡುವ ಸಾಹಸ ಮಾಡಿದರೆ, ಬಾಲಬಿಚ್ಚಿದರೆ ಅಂತಹವರ ಮನೆ ಮಠ ಮಾರಿಸುತ್ತೇನೆ. ಹೆಂಡತಿ ಮಕ್ಕಳನ್ನು ಅಡಮಾನ ಇರಿಸುತ್ತೇನೆ ಎಂದು ಅಧೀಕ್ಷಕಿ ಶಾಂತಶ್ರೀ ಅವಾಜ್ ಹಾಕಿದ್ದಾರಂತೆ.

    ನೀವುಗಳು ಸಾಯುವವರೆಗೂ ಜೈಲಿನಲ್ಲೇ ಕೊಳೆಯವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುವ ಆರೋಪವೂ ಇದೆ. ಜಿಲ್ಲಾ ಕಾರಾಗೃಹದ ಕೈದಿಗಳಿಂದ ಹಾಗೂ ಸಂಬಂಧಿಕರಿಂದ ಹಣ ವಸೂಲಿ ಮಾಮೂಲಿಯಂತೆ. ಹಣ ನೀಡದಿದ್ದರೆ ಕೈದಿಗಳಿಗೆ ಮಾನಸಿಕ ಹಿಂಸೆ, ದೌರ್ಜನ್ಯ, ಶೋಷಣೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಕಾರಾಗೃಹದಲ್ಲಿ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಆರೋಪವಿದೆ.

    ಕಾರಾಗೃಹದಲ್ಲಿ ನಡೆಯುತ್ತಿರುವ ದೌರ್ಜನ್ಯ, ಹಣ ವಸೂಲಿ, ಲಂಚದ ಬಗ್ಗೆ ಕೈದಿಗಳು ತಮ್ಮ ಹೆಸರು ಹಾಗೂ ನಂಬರ್ ಸಹಿತ ತುಮಕೂರು ಜಿಲ್ಲಾಧಿಕಾರಿ ಸೇರಿದಂತೆ ಹಲವರಿಗೆ ದೂರು ನೀಡಿದ್ದಾರೆ. ದೂರು ಕೊಡುತ್ತಿದ್ದಂತೆ ನ್ಯಾಯಾಂಗ ವ್ಯವಸ್ಥೆಯ ಅಧಿಕಾರಿಗಳು ಕಾರಾಗೃಹಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ಮಾಡಿ ಕೈದಿಗಳ ಹೇಳಿಕೆಗಳನ್ನು ಪಡೆದಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಇನ್ನು ಕಾರಾಗೃಹದಲ್ಲಿ ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ದರು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆಯಾ ಎಂಬ ಪ್ರಶ್ನೆ ಮೂಡಿದೆ. ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸುವಂತೆ ಕೈದಿಗಳು ಒತ್ತಾಯಿಸಿದ್ದಾರೆ. ಕಾರಾಗೃಹ ಅಧೀಕ್ಷಕಿ ಶಾಂತಶ್ರೀ ಮತ್ತು ಅವರ ಪಟಾಲಂ ವಿರುದ್ಧ ಕೈದಿಗಳು ಆಕ್ರೋಶ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)

    ಹಿಂದುಗಳಿಗೆ ಮಾತ್ರ ಪ್ರವೇಶ! ದೇವರ ದರ್ಶನ ಸಿಗದಿದ್ದಕ್ಕೆ ಎಂಟ್ರಿ ಬುಕ್​ನಲ್ಲಿ ಖಡಕ್​ ಪ್ರತಿಕ್ರಿಯೆ ಕೊಟ್ಟ ಅಮಲಾ

    ಹೊಸಪೇಟೆ ಉದ್ಯಮಿಯ ಪುತ್ರಿಯಿಂದ ಸನ್ಯಾಸತ್ವ ಸ್ವೀಕಾರ: ಎಸ್ಸೆಸ್ಸೆಲ್ಸಿ, ಪಿಯುಸಿ ಟಾಪರ್​ಗೆ ಲೌಕಿಕ ಬದುಕಿನ ವೈರಾಗ್ಯ!

    ಮತ್ತೊಮ್ಮೆ ವಿಜಯ್​ ಜೊತೆ ಹಾಟ್​ ಆಗಿ ಕಾಣಿಸಿಕೊಂಡ ತಮನ್ನಾ: ಬೇಸರ ಹೊರಹಾಕಿದ ಅಭಿಮಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts