More

    ಸಹಜ ಸ್ಥಿತಿಗೆ ಮರಳುತ್ತಿದೆ ತುಮಕೂರು

    ತುಮಕೂರು: ಕರೊನಾ ನಿಯಂತ್ರಣಕ್ಕೆ ಬರುವ ವಿಶ್ವಾಸದಲ್ಲಿ ವ್ಯಾಪಾರ ವಹಿವಾಟು ನಡೆಸಲು ಜಿಲ್ಲಾಡಳಿತ ಶುಕ್ರವಾರದಿಂದ ನೀಡಿದ್ದ ಅನುಮತಿಯಿಂದಾಗಿ ತುಮಕೂರು ಸಹಜ ಸ್ಥಿತಿಗೆ ಮರಳುತ್ತಿದೆ. ಆದರೂ, ಪಾವಗಡದಲ್ಲಿ ಕ್ವಾರಂಟೈನಲ್ಲಿರುವ ತಬ್ಲಿಘಿಗಳು ಆತಂಕ ಸೃಷ್ಟಿಸಿದ್ದಾರೆ.

    ನಗರದಲ್ಲಿ ಶುಕ್ರವಾರ ಬೆಳಗ್ಗೆಯಿಂದ ವಾಹನಗಳು ರಸ್ತೆಗಿಳಿದವು. 40 ದಿನಗಳ ದೀರ್ಘ ಲಾಕ್‌ಡೌನ್ ಬಳಿಕ ವೈನ್‌ಶಾಪ್, ಬ್ಯೂಟಿಪಾರ್ಲರ್ ಸೇರಿ ಎಲ್ಲ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಪ್ರಮುಖ ವಾಣಿಜ್ಯ ಕೇಂದ್ರಗಳಾದ ಎಂ.ಜಿ.ರಸ್ತೆ, ಜನರಲ್ ಕಾರ್ಯಪ್ಪ ರಸ್ತೆ, ಜೆ.ಸಿ.ರಸ್ತೆ, ಅಶೋಕ ರಸ್ತೆ, ಗುಂಚಿವೃತ್ತ, ವಿವೇಕಾನಂದ ರಸ್ತೆ, ಹೊರಪೇಟೆ, ಮಂಡಿಪೇಟೆ, ಹೊಸ ಮಂಡಿಪೇಟೆ, ಸೋಮೇಶ್ವರ ಪುರಂ ಮುಖ್ಯರಸ್ತೆ, ಎಸ್‌ಐಟಿ ಮುಖ್ಯರಸ್ತೆ ಸೇರಿ ಮೊದಲ ಬಾರಿಗೆ ಬಹುತೇಕ ಎಲ್ಲ ವಿಧದ ಮಳಿಗೆಗಳು ತೆರೆಯಲ್ಪಟ್ಟವು. ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ವ್ಯಾಪಾರಕ್ಕೆ ಅವಕಾಶ ಕೊಡಲಾಗಿತ್ತು.

    ಬೆಳಗಿದ ಸಿಗ್ನಲ್‌ಗಳು: ಬಿ.ಎಚ್.ರಸ್ತೆಯಲ್ಲಿರುವ ಎಲ್ಲ ಟ್ರಾಫಿಕ್ ಸಿಗ್ನಲ್‌ಗಳೆಲ್ಲ ಸ್ವಿಚ್‌ಆನ್ ಆಗಿದ್ದವು. ಸಾಕಷ್ಟು ವಾಹನಗಳು ರಸ್ತೆಗಳಿದಿದ್ದರಿಂದ ಸಿಗ್ನಲ್‌ಗಳಲ್ಲಿ ನಿಲ್ಲುತ್ತಿದ್ದ ವಾಹನಗಳ ಸಂಖ್ಯೆಯೂ ಜಾಸ್ತಿಯಿತ್ತು. ಜಿಲ್ಲೆಯಲ್ಲಿ ಬೆಂಗಳೂರಿನಿಂದ ಸಾಕಷ್ಟು ವಾಹನಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಲೆಕೆಡಿಸಿಕೊಂಡಿರುವ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು ಜಿಲ್ಲೆಯ ಗಡಿಯ ಭಾಗದಲ್ಲಿರುವ ಚೆಕ್‌ಪೋಸ್ಟ್ ಬಿಗಿಗೊಳಿಸಲು ಮುಂದಾಗಿದೆ.

    ಚೆಕ್‌ಪೋಸ್ಟ್‌ಗೆ ಡಿಸಿ, ಎಸ್ಪಿ ಭೇಟಿ : ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಬೆಂಗಳೂರಿನಿಂದ ತುಮಕೂರಿಗೆ ಬರುವ ಮಾರ್ಗ ರಾಷ್ಟ್ರೀಯ ಹೆದ್ದಾರಿ 48 ಹಳೆ ನಿಜಗಲ್ಲು ಬಳಿ ಚೆಕ್‌ಪೋಸ್ಟ್ ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

    ತಬ್ಲಿಘಿಗಳ ಆತಂಕ: ಪಾವಗಡದಲ್ಲಿ ಕ್ವಾರಂಟೈನ್‌ನಲ್ಲಿರುವ ತಬ್ಲಿಘಿಗಳು ಈಗ ಆತಂಕ ಸೃಷ್ಟಿಸಿದ್ದಾರೆ. ಅಹಮದಾಬಾದ್‌ನಿಂದ ಬರುತ್ತಿದ್ದ 33 ತಬ್ಲಿಘಿಗಳನ್ನು ಚಿತ್ರದುರ್ಗದ ಬಳಿ ತಡೆದು ಕೆಲವರನ್ನು ಚಿತ್ರದುರ್ಗ, ಉಳಿದಿದ್ದ 18 ತಬ್ಲಿಘಿಗಳನ್ನು ಪಾವಗಡದಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಇವರಲ್ಲಿ ಐವರನ್ನು ಆಂಧ್ರಕ್ಕೆ ಕಳುಹಿಸಲಾಗಿದೆ. ಚಿತ್ರದುರ್ಗದಲ್ಲಿ ಕ್ವಾರಂಟೈನ್‌ನಲ್ಲಿದ್ದ ಮೂವರಿಗೆ ಕರೊನಾ ಸೋಂಕು ತಗುಲಿರುವುದು ಈಗ ಮತ್ತೆ ಜಿಲ್ಲಾಡಳಿತಕ್ಕೆ ದೊಡ್ಡತಲೆನೋವು ತಂದಿದೆ. ನಗರದ 2 ಸೀಲ್‌ಡೌನ್ ಪ್ರದೇಶಗಳಾದ ಪೂರ್‌ಹೌಸ್ ಕಾಲನಿ ಮತ್ತು ಕೆಎಚ್‌ಬಿ ಕಾಲನಿಯಲ್ಲಿ ನಿವಾಸಿಗಳು ಯಾವುದೇ ಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿದ್ದು, ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೆರವು ದೊರಕಿಸಿಕೊಡುವಂತೆ ಪಾಲಿಕೆ ಸದಸ್ಯ ನಯಾಜ್ ಅಹ್ಮದ್ ಒತ್ತಾಯಿಸಿದ್ದಾರೆ.

    ಎಲ್ಲೆಲ್ಲೂ ಗ್ರಾಹಕರ ಕೊರತೆ : ನಗರಾದ್ಯಂತ ವ್ಯಾಪಾರ ವಹಿವಾಟು ಆರಂಭಗೊಂಡಿತಾದರೂ, ಗ್ರಾಹಕರ ಕೊರತೆ ಕಂಡುಬಂದಿತು. 40 ದಿನಗಳ ಬಳಿಕ ವ್ಯಾಪಾರಕ್ಕೆ ಅನುಮತಿ ಕೊಟ್ಟ ಹಿನ್ನೆಲೆಯಲ್ಲಿ ಮೊದಲನೇ ದಿನವೆಂಬ ಕಾರಣದಿಂದಾಗಿ ಜನದಟ್ಟಣೆ ಇರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts