More

    ಕನ್ನಡ ಕೈಬಿಟ್ಟು ತುಳು ನಾಮಫಲಕ, ಕೃಷ್ಣ ಮಠದ ಕ್ರಮಕ್ಕೆ ಉಡುಪಿ ಜಿಲ್ಲಾ ಕಸಾಪ ಆಕ್ಷೇಪ

    ಉಡುಪಿ: ಕೃಷ್ಣ ಮಠದ ದಕ್ಷಿಣದ್ವಾರದಲ್ಲಿ ತುಳು ಮತ್ತು ಸಂಸ್ಕೃತ ಭಾಷೆಯ ಹೊಸ ನಾಮಫಲಕ ಅಳವಡಿಸಲಾಗಿದ್ದು, ಕನ್ನಡವನ್ನು ತೆಗೆದು ಹಾಕಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.

    ನಾಮಫಲಕದಲ್ಲಿ ಕನ್ನಡವನ್ನು ಕೈಬಿಟ್ಟ ಮಠದ ಆಡಳಿತ ಮಂಡಳಿಯ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಖಂಡಿಸಿದ್ದಾರೆ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಆದ್ಯತೆ. ನಾಮಫಲಕದಲ್ಲಿ ಮೊದಲು ಕನ್ನಡ ಇರಬೇಕು. ಅನಂತರ ಇತರ ಭಾಷೆಗಳಿರಲಿ. ಒಂದು ಧಾರ್ಮಿಕ ಸಂಸ್ಥೆ ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ. ಇದು ಕಾನೂನಿನ ಸ್ವಷ್ಟ ಉಲ್ಲಂಘನೆ. ಲೋಪವನ್ನು ಕೂಡಲೇ ಸರಿಪಡಿಸಬೇಕು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು.ನಾಮಫಲಕದಲ್ಲಿ ಕನ್ನಡ ಭಾಷೆ ತೆಗೆದು ತುಳು ಭಾಷೆ ಹಾಕಿದ್ದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಮಠದ ಸ್ಪಷ್ಟನೆ: ಹಳೆಯ ಪ್ಲಾಸ್ಟಿಕ್ ಬೋರ್ಡ್ ತೆರವುಗೊಳಿಸಿ ಕನ್ನಡ, ತುಳು ಮತ್ತು ಸಂಸ್ಕೃತ ಭಾಷೆಯಲ್ಲಿ ಬರೆದ ಮರದ ನಾಮಫಲಕ ಅಳವಡಿಸಲು ಚಿಂತನೆ ನಡೆಸಲಾಗಿತ್ತು. ಆದರೆ ಲಕ್ಷದೀಪೋತ್ಸವ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಈಗಾಗಲೇ ಸಿದ್ಧವಾಗಿದ್ದ ತುಳು ಮತ್ತು ಸಂಸ್ಕೃತ ಭಾಷೆ ನಾಮಫಲಕ ಅಳವಡಿಸಲಾಯಿತು. ಕನ್ನಡದ ಬೋರ್ಡ್ ತಯಾರಾಗುತ್ತಿದೆ. ಸ್ವಲ್ಪ ವಿಳಂಬವಾಗಿದೆ. ಎಲ್ಲ ಭಾಷೆಗಳಿಗೂ ಸಮಾನ ಆದ್ಯತೆ ಎಂದು ಮಠದ ಮ್ಯಾನೇಜರ್ ಗೋವಿಂದರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts