More

    ತುಳು ರಾಜ್ಯ ಭಾಷೆ ಮಾನ್ಯತೆಗೆ ಕ್ರಮ: ಸಚಿವ ಅರವಿಂದ ಲಿಂಬಾವಳಿ ಭರವಸೆ

    ಬೆಂಗಳೂರು: ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

    ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಕರಾವಳಿ ಪೂಜನೀಯ ಪ್ರದೇಶ. ಅಲ್ಲಿನ ಸಂಸ್ಕೃತಿ, ಸಂಪ್ರದಾಯಗಳು ಉತ್ತಮ. ತುಳುವನ್ನು ರಾಜ್ಯ ಭಾಷೆಯನ್ನಾಗಿ ೋಷಿಸುವ ಬೇಡಿಕೆಯಿದೆ. ತುಳು, ಕೊಡವ ಮತ್ತು ಬಂಜಾರ ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಕೇಂದ್ರ ಸಂಸ್ಕೃತಿ ಸಚಿವರ ಬಳಿಗೆ ಸಂಬಂಧಪಟ್ಟ ಅಕಾಡೆಮಿ ಮತ್ತು ಪ್ರಾಧಿಕಾರದ ಸದಸ್ಯರನ್ನೊಳಗೊಂಡ ನಿಯೋಗ ತೆರಳಲಿದೆ ಎಂದರು.

    ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ತುಳು ಭಾಷಿಕರು ಹಲವು ದೇಶಗಳಲ್ಲಿ ನೆಲೆಸಿದ್ದಾರೆ. ಅವರೆಲ್ಲರೂ ಭಾರತದ ಸೇವೆಗೆ ಸದಾ ಸಿದ್ಧರಿಸಿದ್ದಾರೆ. ಭಾರತದಲ್ಲಿ ರಾಮರಾಜ್ಯ ಸ್ಥಾಪನೆಗೆ ಜಗತ್ತಿನ ಬಹುತೇಕ ದೇಶಗಳು ಕುತೂಹಲದಿಂದ ನೋಡುತ್ತಿವೆ. ರಾಮ ಮಂದಿರ ನಿರ್ಮಾಣದ ಮೂಲಕ ಅದು ಸಾಕಾರವಾಗಲಿದೆ ಎಂದರು.

    2018, 2019 ಮತ್ತು 2020ನೇ ಸಾಲಿನ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ, ಯುವ ಸಾಧಕ ಪ್ರಶಸ್ತಿ ಹಾಗೂ ವಿಶೇಷ ಬಾಲಪ್ರತಿಭೆ ಪ್ರಶಸ್ತಿಯನ್ನು ನೀಡಲಾಯಿತು.
    ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವ ಎಸ್. ಅಂಗಾರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಮತ್ತಿತರರಿದ್ದರು.

    ಮನವಿ ಸಲ್ಲಿಕೆ
    ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಮಾಡಬೇಕು, 8ನೇ ಪರಿಚ್ಛೇದಕ್ಕೆ ಸೇರಿಸಬೇಕು, ತುಳು ಅಕಾಡೆಮಿಯನ್ನು ಸದೃಢವನ್ನಾಗಿಸಬೇಕು, ತುಳು ಮಾತನಾಡುವ ಪ್ರದೇಶಗಳ ಶಾಲೆಯಲ್ಲಿ ಆ ಭಾಷಿಕ ಶಿಕ್ಷಕರನ್ನೇ ನೇಮಿಸಬೇಕು ಎಂಬ ಬೇಡಿಕೆಗಳ ಮನವಿ ಪತ್ರವನ್ನು ಸಚಿವ ಅರವಿಂದ ಲಿಂಬಾವಳಿ ಅವರಿಗೆ ನೀಡಲಾಯಿತು.

    ತುಳು ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಹಿಂದೆ 4.5 ಕೋಟಿ ರೂ. ಅನುದಾನ ನೀಡಿದ್ದರು. ಅದರ ಜತೆಗೆ, ಇನ್ನೂ 3.6 ಕೋಟಿ ರೂ.ನೀಡಿದರೆ, ತುಳು ಭವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಹೀಗಾಗಿ ಸರ್ಕಾರ ಅನುದಾನ ನೀಡಲು ಮುಂದಾಗಬೇಕು.
    -ದಯಾನಂದ ಜಿ. ಕತ್ತಲ್‌ಸಾರ್, ಅಧ್ಯಕ್ಷ, ತುಳು ಸಾಹಿತ್ಯ ಅಕಾಡೆಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts