More

    ಕರೊನಾದಿಂದ ಮೃತ್ಯುಕೂಪವಾಗಿರುವ ಅಮೆರಿಕದಲ್ಲಿ ಇನ್ನು ಲಾಕ್​ಡೌನ್​ ನಿಯಮವೇ ಇರಲ್ವಂತೆ! ಟ್ರಂಪ್​ ಹೇಳಿದ್ದೇನು?

    ನ್ಯೂಯಾರ್ಕ್​: ಒಂದೂವರೆ ಲಕ್ಷದ ಗಡಿ ದಾಟಿದ ಕರೊನಾ ಸೋಂಕಿತರು, 61 ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ… ಕರೊನಾ ಸೋಂಕು ಹೊಂದಿರುವ ವಿಶ್ವದ ನಂ.1 ರಾಷ್ಟ್ರವೆಂಬ ಕುಖ್ಯಾತಿ, ಇಡೀ ವಿಶ್ವದ ಮೂರನೆಯ ಒಂದು ಭಾಗದಷ್ಟು ಕರೊನಾ ಪೀಡಿತದಿಂದ ಬಾಧಿತವಾಗಿರುವ ರಾಷ್ಟ್ರ…!

    ಹೌದು. ಇದು ಅಮೆರಿಕದ ಮಾತು. ದಿನದಿಂದ ದಿನಕ್ಕೆ ಏರುತ್ತಲೇ ಇರುವ ಕರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆಯಿಂದ ಅರಗಿಸಿಕೊಳ್ಳಲಾರದ ಸ್ಥಿತಿಯಲ್ಲಿರುವ ಅಮೆರಿಕವು ಸಾಮಾಜಿಕ ಅಂತರದ ನಿಯಮವನ್ನು ವಿಸ್ತರಣೆ ಮಾಡದೇ ಇರಲು ತೀರ್ಮಾನಿಸಿದೆ. ಅಷ್ಟೇ ಅಲ್ಲದೇ ಶೀಘ್ರದಲ್ಲಿಯೇ ಅಂತರ್​ರಾಜ್ಯ ಪ್ರಯಾಣವನ್ನೂ ಆರಂಭಿಸಲಿದೆಯಂತೆ!

    ಇಂಥದ್ದೊಂದು ಭಯಾನಕ, ಅಚ್ಚರಿಯ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆಗೆದುಕೊಂಡಿದ್ದಾರೆ. ಅಮೆರಿಕದ ಇತಿಹಾಸದಲ್ಲಿಯೇ ಭೀಕರ ಎಂದು ಘೋಷಿಸಲಾಗಿದ್ದ ವಿಯಟ್ನಾಂ ಯುದ್ಧದಲ್ಲಿ 58,220 ಮಂದಿ ಮೃತಪಟ್ಟಿದ್ದರು. ಆದರೆ ಕೊರನಾ ವೈರಸ್​ನಿಂದ ಉಂಟಾದ ಸಾವು ಅದನ್ನೂ ಮೀರಿಸಿದ್ದು, ಇವತ್ತಿನವರೆಗೆ 60,207 ಮಂದಿ ಮೃತಪಟ್ಟಿದ್ದಾರೆ. ಇದರ ನಡುವೆಯೂ ಟ್ರಂಪ್​ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸಾಮಾಜಿಕ ಅಂತರ ನಿಯಮದ ಕುರಿತಂತೆ ಹೊರಡಿಸಲಾಗಿರುವ ಆದೇಶವು ಇಂದಿಗೆ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ, ಅದನ್ನು ವಿಸ್ತರಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ಟ್ರಂಪ್​.

    ಇದಕ್ಕೆ ದನಿಗೂಡಿಸಿರುವ ಇವರ ಅಳಿಯ ಮತ್ತು ಸಲಹೆಗಾರ ಜೇರೆಡ್ ಕುಶ್ನರ್, ಜುಲೈ ವೇಳೆಗೆ ದೇಶವು ಮತ್ತೆ “ನಿಜವಾಗಿಯೂ ರಾಕಿಂಗ್” ಆಗಲಿದೆ ಎಂದಿದ್ದಾರೆ. ಶೀಘ್ರದಲ್ಲಿಯೇ ಅಂತರ್​ರಾಜ್ಯ ಪ್ರಯಾಣವನ್ನೂ ಪುನರಾರಂಭಿಸುವ ಮೂಲಕ, ದೇಶವು ನಿಜವಾಗಿಯೂ ರಾಕಿಂಗ್​ ಆಗಲಿದೆ ಎಂಬ ಆತ್ಮವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಸಾಮೂಹಿಕ ಸಮಾವೇಶ ನಡೆಸಲೂ ಅವಕಾಶ ನೀಡುವುದಾಗಿ ಹೇಳಿದ್ದಾರೆ!

    ಲಾಕ್​ಡೌನ್​ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯ ಮೇಲೆ ಭಾರಿ ಪೆಟ್ಟು ಬಿದ್ದಿದ್ದು, ಇದನ್ನು ಶೀಘ್ರದಲ್ಲಿಯೇ ಸರಿಪಡಿಸುವುದಾಗಿ ಟ್ರಂಪ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕರೊನಾ ವೈರಸ್​ ವಿರುದ್ಧ ಹೋರಾಡಲು ಈಗಾಗಲೇ ಸಾಕಷ್ಟು ಸಿದ್ಧತೆಗಳು ನಡೆದಿವೆ. ಶೀಘ್ರದಲ್ಲಿಯೇ ಎಲ್ಲವೂ ಸರಿಹೋಗಲಿದೆ. ವೈದ್ಯಕೀಯ ಸೌಲಭ್ಯಗಳೂ ಚೆನ್ನಾಗಿವೆ ಎಂದಿರುವ ಟ್ರಂಪ್​, ಮೂರು ತಿಂಗಳ ಹಿಂದೆ ದೇಶ ಹಾಗೂ ದೇಶದ ಜನರ ಸ್ಥಿತಿ ಹೇಗೆ ಇದ್ದವೋ ಅದೇ ಮರುಕಳಿಸಲಿದೆ ಎಂದಿದ್ದಾರೆ.

    ಲಾಕ್​ಡೌನ್​ಗೆ ಸಂಬಂಧಿಸಿದಂತೆ ಮೊದಲು 15 ದಿನಗಳ ಕಾಲದವರೆಗೆ ಕೆಲವೊಂದು ಮಾರ್ಗಸೂಚಿಗಳನ್ನು ಅಳವಡಿಸಲಾಗಿತ್ತು, ನಂತರ ಅದನ್ನು 30 ದಿನಗಳವರೆಗೆ ವಿಸ್ತರಿಸಲಾಯಿತು, ಮನೆಯಿಂದಲೇ ಕೆಲಸ ಮಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ರೆಸ್ಟೋರೆಂಟ್‌ಗಳು, ಗುಂಪು ಕೂಟಗಳಿಗೆ ನಿಷಿದ್ಧ ಇತ್ಯಾದಿ ಷರತ್ತು ವಿಧಿಸಲಾಗಿತ್ತು. ಈಗ ನಿಧಾನವಾಗಿ ಎಲ್ಲವನ್ನೂ ಸಡಿಸಲಗೊಳಿಸಲು ಟ್ರಂಪ್​ ನಿರ್ಧರಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts