More

    ಈಡೇರದ ಟ್ರಕ್ ಟರ್ಮಿನಲ್ ಬೇಡಿಕೆ

    ಹರೀಶ್ ಮೋಟುಕಾನ, ಮಂಗಳೂರು
    ಹಗಲು, ರಾತ್ರಿ ಎನ್ನದೆ ದೂರದ ನಗರಗಳಿಂದ ಸರಕು ಸಾಗಿಸುವವವರು ಟ್ರಕ್, ಲಾರಿ ಚಾಲಕರು. ಅವರಿಗೆ ಮೂಲ ಸೌಲಭ್ಯ ಕಲ್ಪಿಸಿಕೊಡಲು ದಶಕದ ಹಿಂದೆ ರೂಪಿಸಲಾಗಿದ್ದ ಟ್ರಕ್ ಟರ್ಮಿನಲ್ ನಿರ್ಮಾಣದ ಕನಸು ಇನ್ನೂ ಈಡೇರಿಲ್ಲ. ಅವರಿಗಾಗಿ ಶೌಚಗೃಹ ವ್ಯವಸ್ಥೆಯನ್ನೂ ಮಾಡಿಲ್ಲ.

    ಮಂಗಳೂರು-ಸುರತ್ಕಲ್ ಮಾರ್ಗದಲ್ಲಿ ಎಂಸಿಎಫ್, ಎನ್‌ಎಂಪಿಟಿ ಮುಂಭಾಗ, ಬೈಕಂಪಾಡಿ, ಪಣಂಬೂರು, ಸುರತ್ಕಲ್ ಮುಂತಾದ ಕಡೆಗಳಲ್ಲೆಲ್ಲ ರಸ್ತೆ ಬದಿ ಪಾರ್ಕ್ ಮಾಡಿರುವ ಟ್ರಕ್‌ಗಳು ಕಾಣಸಿಗುತ್ತವೆ. ಜನವಸತಿ ಇಲ್ಲದ ಪ್ರದೇಶ ನೋಡಿ, ಖಾಲಿ ಜಾಗದ ಪೊದೆಗಳ ಹಿಂದೆ ಕುಳಿತು ದೇಹಬಾಧೆ ತೀರಿಸುವುದಷ್ಟೇ ಈ ಚಾಲಕರು, ಕ್ಲೀನರ್, ಸಹಾಯಕರಿಗೆ ಇರುವ ಆಯ್ಕೆ. ನೂರಾರು ಕಿ.ಮೀ ಲಾರಿ ಚಲಾಯಿಸಿಕೊಂಡು ಹೋಗುವ ಇವರು ಅಡುಗೆಯನ್ನು ಹೆಚ್ಚಾಗಿ ತಮ್ಮಲ್ಲೇ ಇರುವ ಸ್ಟವ್, ಪಾತ್ರೆ ಬಳಸಿ ತಯಾರಿಸುತ್ತಾರೆ. ಹಾಗಾಗಿ ಅದರ ಬಗ್ಗೆ ಹೆಚ್ಚು ತಲೆಕೆಡಿಸುವುದಿಲ್ಲ. ಆದರೆ ಶೌಚಗೃಹ, ಸ್ನಾನಗೃಹಗಳಿಗಾಗಿ ಒದ್ದಾಡಬೇಕಿದೆ.

    ಹೆಚ್ಚಾಗಿ ಅಪರಿಚಿತ ಪ್ರದೇಶಗಳಲ್ಲಿ ಲಾರಿ ಪಾರ್ಕ್ ಮಾಡುವಾಗ, ಸರಕು ಕಳವಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಚ್ಚರದಿಂದ ಇರಬೇಕಾಗುತ್ತದೆ. ಮಂಗಳೂರಿನ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಟ್ರಕ್‌ಗಳು ನಿಲ್ಲುವ ಸ್ಥಳಗಳಿವೆ. ಅವುಗಳನ್ನು ಗುರುತಿಸಿ ಸಾಮಾನ್ಯ ಸುಲಭ ಶೌಚಗೃಹಗಳನ್ನು ನಿರ್ಮಿಸಿಕೊಟ್ಟರೆ ಅವರಿಗೆ ಅನುಕೂಲವಾಗಬಹುದು.
    ನವಮಂಗಳೂರು ಬಂದರಿಗೆ ಹೊರದೇಶಗಳಿಂದ ಕೋಕ್ ಹೆಚ್ಚು ಪ್ರಮಾಣದಲ್ಲಿ ಆಮದಾಗುತ್ತದೆ. ಅವುಗಳನ್ನು ಕರ್ನಾಟಕದ ಉತ್ತರ ಭಾಗಕ್ಕೆ ರೈಲಿನಲ್ಲಿ ಮಾತ್ರವಲ್ಲದೆ ಲಾರಿಗಳಲ್ಲೂ ಸಾಗಾಟ ಮಾಡಲಾಗುತ್ತಿರುವುದರಿಂದ ಅಧಿಕ ಸಂಖ್ಯೆಯಲ್ಲಿ ಟ್ರಕ್‌ಗಳು ಬರತೊಡಗಿವೆ.
    ಬೈಕಂಪಾಡಿ ಎಪಿಎಂಸಿ ಬಳಿಯೂ ಹೆಚ್ಚಾಗಿ ಲಾರಿಗಳು ಪಾರ್ಕ್ ಮಾಡಿರುತ್ತವೆ. ಅಲ್ಲಿ ಮನಪಾ ವತಿಯಿಂದ ಶೌಚಗೃಹ ನಿರ್ಮಿಸಿ ಕೊಡಲಾಗಿದ್ದರೂ, ಅದು ಸ್ಥಳೀಯರ ಉಪಯೋಗಕ್ಕೇ ಸೀಮಿತ. ಅಲ್ಲಿ ಹೊರಗಿನ ಟ್ರಕ್ ಚಾಲಕರಿಗೆ ಸೌಲಭ್ಯ ಸಿಗುತ್ತಿಲ್ಲ.

    ಸಾಕಾಗುತ್ತಿಲ್ಲ ಸೀಮಿತ ವ್ಯವಸ್ಥೆ: ಸದ್ಯ ಪಣಂಬೂರು ಕಸ್ಟಮ್ಸ್ ಹೌಸ್ ಬಳಿಯ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಎನ್‌ಎಂಪಿಟಿ ನಿರ್ಮಿಸಿಕೊಟ್ಟಿರುವ ಟ್ರಕ್ ಟರ್ಮಿನಲ್ ಕಾರ್ಯವೆಸಗುತ್ತಿದೆ. ಇಲ್ಲಿ ಸೀಮಿತ ಸಂಖ್ಯೆಯ ಟ್ರಕ್‌ಗಳಿಗೆ ಸೌಲಭ್ಯ ಇದೆ. ಆದರೆ ಅದು ಸಾಕಾಗುತ್ತಿಲ್ಲ. ಹೆಚ್ಚು ಸಂಖ್ಯೆಯ ಟ್ರಕ್‌ಗಳೂ ಎನ್‌ಎಂಪಿಟಿಗೆ ಬರುವ ಕಾರಣ ಅವರು ಮೀನಕಳಿಯ, ಪಣಂಬೂರು ಭಾಗದಲ್ಲಿ ಇನ್ನೊಂದು ಟ್ರಕ್ ಟರ್ಮಿನಲ್ ನಿರ್ಮಿಸಿಕೊಡಬೇಕು ಎನ್ನುವುದು ಈ ಭಾಗದ ಜನರ ಆಗ್ರಹ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಿಸಬೇಕು ಎಂಬ ಪ್ರಸ್ತಾಪ ಕಳೆದ ದಶಕದಿಂದಲೇ ಇದ್ದರೂ ಈವರೆಗೆ ಸರಿಯಾದ ದಿಸೆಯಲ್ಲಿ ಮುಂದುವರಿದಿಲ್ಲ.

    ಟ್ರಕ್ ಟರ್ಮಿನಲ್ ನಿರ್ಮಾಣ ಸರ್ವೇ ಶೀಘ್ರ ಮುಗಿಯಲಿದೆ. ಆ ಬಳಿಕ ಜಾಗ ಗುರುತಿಸಬೇಕಾಗಿದೆ. ಟ್ರಕ್ ಟರ್ಮಿನಲ್ ಕಾರ್ಪೋರೇಷನ್ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಟರ್ಮಿನಲ್, 4 ಟ್ರಕ್ ಬೇಸ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಅನ್‌ಲೋಡ್ ವ್ಯವಸ್ಥೆ, ಚಾಲಕರಿಗೆ ಮೂಲಸೌಲಭ್ಯ ಸೇರಿದಂತೆ ವ್ಯವಸ್ಥೆಗೆ ವಿಸ್ತಾರವಾದ ಜಾಗ ಬೇಕಾಗಿದೆ. ಜನನಿಬಿಡ ಪ್ರದೇಶದಿಂದ ದೂರ ಇರಬೇಕಾಗಿದೆ. ಸ್ಥಳೀಯರಿಗೆ ಹಾಗೂ ಲಾರಿ ಚಾಲಕರಿಗೆ ಸಮಸ್ಯೆಯಾಗಬಾರದು. ಟರ್ಮಿನಲ್‌ಗೆ 30 ಎಕರೆ ಹಾಗೂ ಟ್ರಕ್ ಬೇಸ್ ನಿರ್ಮಾಣಕ್ಕೆ ತಲಾ 10 ಎಕರೆ ಜಾಗ ಬೇಕು.
    ರವಿಶಂಕರ ಮಿಜಾರ್ ಅಧ್ಯಕ್ಷ, ನಗರಾಭಿವೃದ್ಧಿ ಪ್ರಾಧಿಕಾರ ಮಂಗಳೂರು

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts