More

    ಲಾರಿಗಳಿಲ್ಲದೆ ರಾಗಿ ಖರೀದಿ ಸ್ಥಗಿತ: ಕೊಟ್ಟೂರು ಕೇಂದ್ರದ ಮುಂದೆ ಸಾಲುಗಟ್ಟಿ ನಿಂತ ವಾಹನಗಳು

    ಕೊಟ್ಟೂರು: ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ಬಂದ 150ಕ್ಕೂ ಹೆಚ್ಚು ರೈತರು ಹಬೊಹಳ್ಳಿ ಉಗ್ರಾಣಕ್ಕೆ ಸಾಗಿಸಲು ಲಾರಿಗಳು ಇಲ್ಲದ ಕಾರಣ ಪಟ್ಟಣದಲ್ಲಿ ನಾಲ್ಕು ದಿನಗಳಿಂದ ಖರೀದಿ ಕೇಂದ್ರದ ಮುಂದೆ ಕಾದು ನಿಂತಿದ್ದಾರೆ. ಆದರೆ, ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.

    ಮಾ.12ರಿಂದ ಖರೀದಿ ಕೇಂದ್ರ ಆರಂಭಿಸಿದ್ದು, ಏ.15 ರವರೆಗೆ ಮಾರಾಟ ಮಾಡಲು ಅವಕಾಶವಿದೆ. ಒಂದು ಕ್ವಿಂಟಾಲ್‌ಗೆ 3295 ರೂ. ದರ ನಿಗದಿಪಡಿಸಿದ್ದು, 1250 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ನಿತ್ಯ ಹತ್ತಾರು ವಾಹನಗಳಲ್ಲಿ ರಾಗಿ ತರುತ್ತಿದ್ದಾರೆ. ಈವರೆಗೆ 12,500 ಕ್ವಿಂಟಾಲ್ ಖರೀದಿಸಲಾಗಿದೆ. ಇನ್ನು 10 ರಿಂದ 15 ಸಾವಿರ ಕ್ವಿಂಟಾಲ್ ರಾಗಿ ಖರೀದಿ ಕೇಂದ್ರಕ್ಕೆ ಬರುವ ನಿರೀಕ್ಷೆ ಇದೆ. ಕೊಟ್ಟೂರಲ್ಲಿ ಉಗ್ರಾಣ ಇಲ್ಲದ್ದರಿಂದ ಹಗರಿಬೊಮ್ಮನಹಳ್ಳಿಗೆ ಲಾರಿಗಳ ಮೂಲಕ ಸಾಗಿಸಲು ಬೇಲ್ದಾರ್ ಬಾಷಾ ಎನ್ನುವರಿಗೆ ಗುತ್ತಿಗೆ ನೀಡಲಾಗಿದೆ. ಆದರೆ, ಕಳೆದ ನಾಲ್ಕು ದಿನಗಳಿಂದ ಲಾರಿಗಳನ್ನು ಕಳಿಸಿಲ್ಲ.ಹೀಗಾಗಿ 40ಕ್ಕೂ ಹೆಚ್ಚು ವಾಹನಗಳಲ್ಲಿ ರಾಗಿ ಹೇರಿಕೊಂಡು ಬಂದ ರೈತರು ಖರೀದಿ ಕೇಂದ್ರದ ಮುಂದೆ ಕಾಲ ಕಳೆಯುತ್ತಿದ್ದಾರೆ. ಇವತ್ತು, ನಾಳೆ ಖರೀದಿಸಬಹುದೆಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಯಾರೂ ಇತ್ತ ಗಮನಹರಿಸುತ್ತಿಲ್ಲ. ಆದರೆ, ಖರೀದಿ ಕೇಂದ್ರದ ಅಧಿಕಾರಿ ಬಸವರಾಜಪ್ಪಗೆ ಕೇಳಿದರೆ, ಹಗರಿಬೊಮ್ಮನಹಳ್ಳಿ ಉಗ್ರಾಣದಲ್ಲಿ ರಾಗಿ ಇಳಿಸಿಕೊಳ್ಳಲು ಹಮಾಲರ ಕೊರತೆಯಿಂದ ಸಮಸ್ಯೆಯಾಗಿದೆ ಎಂದು ಸಮಾಜಾಯಿಷಿ ನೀಡಿದರು.

    ರಾಗಿ ಖರೀದಿ ಕೇಂದ್ರದ ಮುಂದೆ ನಾಲ್ಕು ದಿನಗಳಿಂದ 40 ರಾಗಿ ವಾಹನಗಳು ನಿಂತಿವೆ. ತಕ್ಷಣವೇ ಎಂಟು ಲಾರಿಗಳ ಬಿಡಲು ಗುತ್ತಿಗೆದಾರ ಬೇಲ್ದಾರ್ ಬಾಷಾಗೆ ತಿಳಿಸಲಾಗುವುದು. ರೈತರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗುವುದು.
    | ಗೀತಾಂಜನೇಯ ಆಹಾರ ನಿರೀಕ್ಷಕ, ಕೂಡ್ಲಿಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts