More

    VIDEO| ಮಧ್ಯಪ್ರದೇಶದಲ್ಲಿ ರಾತ್ರೋ ರಾತ್ರಿ ರಾಜಕೀಯ ಕ್ಷಿಪ್ರಕ್ರಾಂತಿ: ಸಿಎಂ ಕಮಲ್​ನಾಥ್​ ಸರ್ಕಾರಕ್ಕೆ ಆಪತ್ತು

    ಭೋಪಾಲ್​: ಮಧ್ಯಪ್ರದೇಶದ ರಾಜಕೀಯದಲ್ಲಿ ಮಂಗಳವಾರ ಮಧ್ಯರಾತ್ರಿ ದಿಢೀರ್​ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಕಮಲ್​ನಾಥ್​ ನೇತೃತ್ವದ ಕಾಂಗ್ರೆಸ್​ ಸರ್ಕಾರಕ್ಕೆ ಭಾರಿ ಗಂಡಾಂತರ ಎದುರಾಗಿದೆ.

    ಕಾಂಗ್ರೆಸ್ ನಾಲ್ವರು ಶಾಸಕರು ಹಾಗೂ ಸರ್ಕಾರಕ್ಕೆ ಬೆಂಬಲ ನೀಡಿದ್ದ ನಾಲ್ವರು ಪಕ್ಷೇತರ ಶಾಸಕರು ಸೇರಿ ಒಟ್ಟು 8 ಮಂದಿ ಶಾಸಕರು ಗುರುಗ್ರಾಮದ ಹೋಟೆಲ್‌ಗೆ ಸ್ಥಳಾಂತರಗೊಂಡಿದ್ದು, ಬಿಜೆಪಿಯ ಮಾಜಿ ಸಚಿವರೊಬ್ಬರು ಶಾಸಕರನ್ನು ಹೋಟೆಲ್​ನಲ್ಲಿ ಹಿಡಿದಿಟ್ಟಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿದೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಧ್ಯಪ್ರದೇಶ ಅರ್ಥ ಸಚಿವ ತರುಣ್​ ಬಾನೋಟ್​, ನಮ್ಮ ಶಾಸಕರನ್ನು ಬಲವಂತವಾಗಿ ಗುರುಗ್ರಾಮದ ಐಟಿಸಿ ಮರಾಠಾ ಹೋಟೆಲ್​ನಲ್ಲಿ ಹೊರಗೂ ಹೋಗದಂತೆ ಹಿಡಿದಿಟ್ಟಿರುವುದಾಗಿ ನಮ್ಮ ಶಾಸಕರೊಬ್ಬರು ತಿಳಿಸಿದ್ದಾರೆ. ಹೋಟೆಲ್​ನಲ್ಲಿರುವ ಶಾಸಕರ ದೂರವಾಣಿ ಕರೆ ಸ್ವೀಕರಿಸದ ಬಳಿಕ ಅಲ್ಲಿರುವ 8 ಶಾಸಕರನ್ನು ಭೇಟಿ ಮಾಡಲು ನಮ್ಮಿಬ್ಬರು ಸಚಿವರಾದ ಜೈವರ್ಧನ್​ ಸಿಂಗ್​ ಮತ್ತು ಜೀತು ಪಟ್ವಾರಿ ಅವರು ತೆರಳಿದ್ದರು. ಆದರೆ, ಹೋಟೆಲ್​ ಪ್ರವೇಶಿಸಲು ಅನುಮತಿ ನೀಡಲಿಲ್ಲ ಎಂದು ದೂರಿದ್ದಾರೆ.

    ಹರಿಯಾಣದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ಅಲ್ಲಿನ ಸರ್ಕಾರದ ನೆರವಿನಿಂದ ನಮ್ಮ ಶಾಸಕರನ್ನು ಬಂಧಿಸಿದ್ದಾರೆ. ಹರಿಯಾಣ ಪೊಲೀಸ್​ ಮತ್ತು ಮಧ್ಯಪ್ರದೇಶದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ನಾರೊಟ್ಟಮ್​ ಮಿಶ್ರಾ ಅವರು ನಮ್ಮ ಸಚಿವರಿಗೆ ಹೋಟೆಲ್​ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಅವರನ್ನು ಬಲವಂತವಾಗಿ ಕೂಡಿ ಹಾಕಿದ್ದಾರೆ ಎಂದು ಬಾನೋಟ್​ ಪುನರುಚ್ಛರಿಸಿದರು.

    ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ ಆಮಿಷವೊಡ್ಡುತ್ತಿದೆ ಎಂದು ಕಾಂಗ್ರೆಸ್​ ನಾಯಕ ದಿಗ್ವಿಜಯ ಸಿಂಗ್​ ಆರೋಪಿಸಿದ ದಿನದ ಬೆನ್ನಲ್ಲೇ 8 ಶಾಸಕರು ಗುರುಗ್ರಾಮ್​ ಹೋಟೆಲ್​ನಲ್ಲಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮಾಜಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಮತ್ತು ನಾರೊಟ್ಟಮ್​ ಮಿಶ್ರಾ ಕಾಂಗ್ರೆಸ್​ ಶಾಸಕರಿಗೆ ಸುಮಾರು 25 ರಿಂದ 35 ಕೋಟಿ ರೂ. ಆಮಿಷವೊಡ್ಡುತ್ತಿದ್ದಾರೆ ಎಂದು ದಿಗ್ವಿಜಯ ಸಿಂಗ್​ ದೂರಿದ್ದರು.

    ಮಧ್ಯಪ್ರದೇಶಲ್ಲಿ ಒಟ್ಟು 230 ವಿಧಾನಸಭಾ ಸ್ಥಾನಗಳಿದ್ದು, ಇಬ್ಬರು ಶಾಸಕ ಮರಣದಿಂದ 228ಕ್ಕೆ ಇಳಿದಿದೆ. ಅದರಲ್ಲಿ ಮ್ಯಾಜಿಕ್​ ನಂಬರ್​ಗೆ 215 ಸ್ಥಾನಗಳು ಬೇಕಾಗಿದ್ದು, ಸದ್ಯ ಕಾಂಗ್ರೆಸ್​ 114, ಬಿಜೆಪಿ 107 ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ಉಳಿದಂತೆ ಬಿಎಸ್​ಪಿ 2, ಎಸ್​ಪಿ 1 ಹಾಗೂ ಪಕ್ಷೇತರರು ನಾಲ್ವರು ಶಾಸಕರಿದ್ದು, ದಿಢೀರ್​ ಬೆಳವಣಿಗೆಯಿಂದ ಮಧ್ಯಪ್ರದೇಶ ರಾಜಕೀಯ ಯಾವೆಲ್ಲಾ ತಿರುವುಗಳು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts