More

    ಹೊರನಾಡಿನ ಗಿರಿಜನ ಆಶ್ರಮ ಶಾಲೆಯಲ್ಲಿದ್ದ ಗುಹೆವಾಸಿ ನಾಪತ್ತೆ

    ಕಳಸ: ಕಲ್ಮಕ್ಕಿ ಗ್ರಾಮದಲ್ಲಿ ಗುಹೆಯಲ್ಲಿ ಜೀವನ ಮಾಡುತ್ತಿದ್ದ ಗಿರಿಜನ ಕುಟುಂಬವನ್ನು ನಾಡಿನಲ್ಲಿ ಉಳಿಸಿಕೊಳ್ಳುವುದೇ ಅಧಿಕಾರಿಗಳಿಗೆ ತಲೆನೋವಾಗಿದೆ. ತಾತ್ಕಾಲಿಕವಾಗಿ ಹೊರನಾಡಿನ ಗಿರಿಜನ ಆಶ್ರಮ ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಿರುವಾಗ, ಕುಟುಂಬದ ಯಜಮಾನ ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾನೆ.

    ಬಲಿಗೆ ಕಲ್ಮಕ್ಕಿಯ ಅನಂತು ಮತ್ತು ಆತನ ಪತ್ನಿ, ಮಕ್ಕಳು ಗುಹೆಯೊಂದರಲ್ಲಿ ವಾಸ ಮಾಡುತ್ತಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಆ ಕುಟುಂಬದ ಮನವೊಲಿಸಿ ಗುಹೆಯಿಂದ ಕರೆದುಕೊಂಡು ಬಂದು ಬಲಿಗೆ ಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಿದರು. ಅಲ್ಲಿ ಅಧಿಕಾರಿಗಳೇ ಅಡುಗೆ ಮಾಡಿ ಆ ಕುಟುಂಬಕ್ಕೆ ಊಟ ಮಾಡಿಸಲಾಗಿತ್ತು. ಮರುದಿನ ಆ ಕುಟುಂಬವನ್ನು ಹೊರನಾಡಿನ ಗಿರಿಜನ ಆಶ್ರಮ ಶಾಲೆಗೆ ಸ್ಥಳಾಂತರಿಸಿ ಮನೆ ಬಳಕೆಗೆ ಬೇಕಾದ ಸಾಮಗ್ರಿ, ಬಟ್ಟೆ ನೀಡಲಾಗಿತ್ತು. ಜತೆಗೆ ಸರ್ಕಾರದಿಂದ ಕಳಸದ ಕುಂಬಳಡಿಕೆಯಲ್ಲಿ ನಿವೇಶನ ಗೊತ್ತುಪಡಿಸಿ ಹಕ್ಕು ಪತ್ರವನ್ನೂ ನೀಡಲಾಗಿತ್ತು. ಸದ್ಯದಲ್ಲಿಯೇ ಮನೆಕಟ್ಟಿಕೊಡುವ ತೀರ್ಮಾನ ಮಾಡಲಾಗಿತ್ತು. ಕಾಡು ಬಿಟ್ಟು ಸರ್ಕಾರ ಕೊಡುವ ಮನೆಯಲ್ಲಿ ಇರುವುದಾಗಿ ಒಪ್ಪಿಕೊಂಡು ಸರಿಯಾಗಿ ಒಂದು ತಿಂಗಳು ಆಗುತ್ತಿದ್ದಂತೆ ಅನಂತು ತನ್ನ ವರಸೆ ಬದಲಾಯಿಸಿದ್ದಾನೆ.

    ನಾಲ್ಕು ದಿನಗಳ ಹಿಂದೆ ವಸತಿ ನಿಲಯದಲ್ಲಿದ್ದ ಅನಂತ ನಾನು ಯಾವುದೇ ಕಾರಣಕ್ಕೂ ಇಲ್ಲಿ ಇರುವುದಿಲ್ಲ. ಹೆಂಡತಿ ಮಕ್ಕಳು ಬೇಕಾದರೆ ಇಲ್ಲಿರಲಿ. ಮೊದಲು ಇದ್ದ ಪ್ರದೇಶಕ್ಕೇ ಹೋಗುತ್ತೇನೆ. ನನ್ನನ್ನು ಬಿಡಿ ಎಂದು ಗಲಾಟೆ ಮಾಡಿ ವಸತಿ ನಿಲಯದ ಗೇಟ್​ಗಳನ್ನು ಕಿತ್ತು ಬಿಸಾಕಿ, ಅಲ್ಲಿದ್ದ ಸಿಬ್ಬಂದಿಯನ್ನು ಕತ್ತಿಯಿಂದ ಕಡಿಯಲು ಮುಂದಾಗಿದ್ದಾನೆ. ಪತ್ನಿ ಮೇಲೂ ಹಲ್ಲೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಆತನ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಹೆಂಡತಿ, ಮಕ್ಕಳನ್ನು ಬಿಟ್ಟು ವಸತಿ ನಿಲಯ ಬಿಟ್ಟು ಹೋಗಿ ನಾಲ್ಕು ದಿನವಾದರೂ ಆತನ ಸುಳಿವು ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts