More

    ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಮರಗಳ ತೆರವು ಕಾರ್ಯ ಆರಂಭ

    ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಗುರುತಿಸಲಾಗಿರುವ ಮರಗಳ ತೆರವು ಕಾರ್ಯ ಆರಂಭವಾಗಿದೆ.

    33.1 ಕಿ.ಮೀ. ವ್ಯಾಪ್ತಿಯ ಈ ರಸ್ತೆ ಅಭಿವೃದ್ಧಿ ಅಂಗವಾಗಿ ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದೀಗ ಪ್ರಥಮ ಹಂತದಲ್ಲಿ ಪುಂಜಾಲಕಟ್ಟೆಯಿಂದ ಉಜಿರೆ ತನಕ ಮರಗಳು ತೆರೆವುಗೊಳ್ಳಲಿವೆ. ಮಡಂತ್ಯಾರು ಉಪವಲಯದಲ್ಲಿ 1,176, ಬೆಳ್ತಂಗಡಿ ಉಪವಲಯದ 2,620 ಮರ ತೆರವುಗೊಳ್ಳಲಿದೆ. ಪುಂಜಾಲಕಟ್ಟೆಯಿಂದ ಉಜಿರೆ ಹಳೆಪೇಟೆ ತನಕದ 3,796 ಮರಗಳಿಗೆ ಸುಮಾರು 96 ಲಕ್ಷ ರೂ. ಮೌಲ್ಯವನ್ನು ಹೆದ್ದಾರಿ ಇಲಾಖೆ ಈಗಾಗಲೇ ಅರಣ್ಯ ಇಲಾಖೆಗೆ ಪಾವತಿಸಿದೆ ಹಾಗೂ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡು ಮರಗಳ ತೆರವು ಆರಂಭವಾಗಿದೆ.

    ಎರಡನೇ ಹಂತ: ಈ ಮರಗಳ ತೆರವು ಪೂರ್ಣಗೊಂಡ ಬಳಿಕ ಉಜಿರೆ ಉಪ ವಲಯದ 968, ಚಿಬಿದ್ರೆಯಲ್ಲಿ 968, ಚಾರ್ಮಾಡಿಯಲ್ಲಿ 336 ಮರಗಳ ತೆರವಿನ ಪ್ರಕ್ರಿಯೆ ಆರಂಭವಾಗಲಿದೆ. ಒಟ್ಟು ಎರಡು ಹಂತಗಳಲ್ಲಿ 5,494ರಷ್ಟು ಮರಗಳು ತೆರವುಗೊಂಡು ಹೆದ್ದಾರಿ ಅಭಿವೃದ್ಧಿ ಹೊಂದಲಿದೆ. ಅರಣ್ಯ ಇಲಾಖೆಗೆ ರಾಷ್ಟ್ರೀಯ ಹೆದ್ದಾರಿ ವಿಭಾಗ ನಿಗದಿಪಡಿಸಿದ ದರದ ಜತೆ ಪ್ರತಿ ಕಿ.ಮೀ.ಗೆ 9 ಲಕ್ಷ ರೂ.ಗಳನ್ನು ಹೆಚ್ಚುವರಿ ಪಾವತಿಸಬೇಕು. 1:10 ಅನುಪಾತದಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ನೆಟ್ಟು ಬೆಳೆಸಬೇಕಾಗಿದೆ. ಮರಗಳ ತೆರವು ಪೂರ್ಣಗೊಂಡ ಬಳಿಕ ಈ ಅನುಪಾತದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ನೆಡುತೋಪು ನಿರ್ಮಾಣಕ್ಕೆ ಚಿಂತನೆ ನಡೆದಿದೆ ಹಾಗೂ ರಸ್ತೆ ಇಕ್ಕೆಲಗಳಲ್ಲೂ ಗಿಡ ನೆಡಲು ಪರಿಶೀಲನೆ ಕಾರ್ಯ ಸಾಗಿದೆ.

    ಕಾಮಗಾರಿಗೆ ವೇಗ ಸಾಧ್ಯತೆ: ಮರಗಳು ತೆರವುಗೊಂಡಂತೆ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಹೆಚ್ಚಿನ ವೇಗ ಸಿಗುವ ಸಾಧ್ಯತೆ ಇದೆ. ಈಗಾಗಲೇ ಸರ್ಕಾರಿ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿದ್ದು, ಅರಣ್ಯ ಇಲಾಖೆಯ ವ್ಯಾಪ್ತಿಯ ಸ್ಥಳಗಳಲ್ಲಿ ಕಾಮಗಾರಿ ನಡೆಸಲು ಮರಗಳು ಅಡ್ಡಿಯಾಗಿದ್ದು ಈಗ ತೆರವು ಪ್ರಕ್ರಿಯೆ ಆರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಭರದಿಂದ ಕಾಮಗಾರಿ ನಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ಗುತ್ತಿಗೆದಾರ ಕಂಪನಿಯ ಅಗತ್ಯ ವಾಹನ, ಯಂತ್ರೋಪಕರಣಗಳು ಆಗಮಿಸಿದ್ದು ಕೆಲವೆಡೆ ಇವುಗಳ ಮೂಲಕ ಕೆಲಸ ಆರಂಭಿಸಲಾಗಿದೆ.

    ಮರಗಳ ಗುಣಮಟ್ಟ?

    ಇಲ್ಲಿನ ಪ್ರದೇಶದ ರಸ್ತೆ ಬದಿ ಹಲವು ಜಾತಿಯ ಮರಗಳಿದ್ದು ಅವು ಈಗ ಹೆದ್ದಾರಿ ಅಭಿವೃದ್ಧಿಗೆ ತೆರವುಗೊಳ್ಳುತ್ತಿವೆ. ಆದರೆ ಈ ಮರಗಳ ಗುಣಮಟ್ಟ ಮೌಲ್ಯಕ್ಕೆ ತಕ್ಕದಾಗಿ ಇರಬಹುದೇ ಎಂದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ರಸ್ತೆ ಬದಿ ಇರುವ ಮರಗಳಿಗೆ ಬ್ಯಾನರ್, ಬಂಟಿಂಗ್ಸ್ ಹಾಕಲು ಮೊಳೆ, ಸ್ಕ್ರೂ ಇತ್ಯಾದಿ ಉಪಯೋಗಿಸಿದ್ದು, ಅವುಗಳು ಈ ಮರಗಳೊಳಗೆ ಅಡಕವಾಗಿವೆ. ಮೊಳೆ, ಸ್ಕ್ರೂಗಳು ಮರಗಳ ಬೆಳವಣಿಗೆಗೆ ಅಡ್ಡಿಯಾಗುತ್ತವೆ ಹಾಗೂ ತೆರವಿನ ಸಂದರ್ಭ ಉಪಯೋಗಿಸುವ ಯಂತ್ರೋಪಕರಣಗಳಿಗೂ ಹಾನಿಗೆ ಕಾರಣವಾಗಬಹುದು. ಸ್ಕ್ರೂ, ಮೊಳೆ ಬಡಿದಿರುವ ಮರಗಳು ಒಳಭಾಗದಲ್ಲಿ ಹಾಳಾಗಿ ಕೆಲವೊಂದು ಮರಗಳು ಸಂಪೂರ್ಣ ಮೌಲ್ಯ ಕಳೆದುಕೊಳ್ಳುವ ಸಾಧ್ಯತೆಯೂ ಇದೆ.

    ರಸ್ತೆ ಅಭಿವೃದ್ಧಿಗಾಗಿ ಪ್ರಥಮ ಹಂತದಲ್ಲಿ ಪುಂಜಾಲಕಟ್ಟೆಯಿಂದ ಉಜಿರೆ ಟಿಬಿ ಕ್ರಾಸ್ ತನಕ ತೆರವುಗೊಳ್ಳಬೇಕಾಗಿರುವ ಮರಗಳ ಮೊತ್ತವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅರಣ್ಯ ಇಲಾಖೆಗೆ ಪಾವತಿಸಿದ್ದು, ಕಳೆದ ನಾಲ್ಕು ದಿನಗಳಿಂದ ತೆರವು ಕಾರ್ಯ ಆರಂಭವಾಗಿದೆ. ಇದು ಪೂರ್ಣಗೊಂಡ ಬಳಿಕ ಎರಡನೇ ಹಂತದಲ್ಲಿ ಉಜಿರೆಯಿಂದ ಚಾರ್ಮಾಡಿವರೆಗಿನ ಮರಗಳ ತೆರವು ಪ್ರಕ್ರಿಯೆ ಆರಂಭಗೊಳ್ಳಲಿದೆ.
    ತ್ಯಾಗರಾಜ್, ಆರ್‌ಎಫ್‌ಒ, ಬೆಳ್ತಂಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts