ಸಿನಿಮಾ

ನಿಧಿ ಆಸೆ ತೋರಿಸಿ ವಂಚನೆ: ದಂಪತಿಯ ಬಂಧನ

ಚಿತ್ರದುರ್ಗ: ನಿಧಿ ಸಿಗುತ್ತದೆ ಎಂದು ನಂಬಿಸಿ, ಪೂಜೆಯ ಹೆಸರಲ್ಲಿ ವಂಚನೆ ಎಸಗಿದ ಆರೋಪದಡಿ ಪೊಲೀಸರು ದಂಪತಿಯನ್ನು ಬಂಧಿಸಿ ೨.೯೮ ಲಕ್ಷ ರೂ. ಮೌಲ್ಯದ ನಗ, ನಗದು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಮೂಲತಃ ಸುರಪುರದ, ಚಿತ್ರದುರ್ಗ ತಾಲೂಕು ಮದಕರಿಪುರ ನಿವಾಸಿಗಳಾದ ಮುದ್ದುರಂಗಪ್ಪ ಹವಾಲ್ದಾರ್, ಮಧುಮತಿ ಬಂಧಿತ ಆರೋಪಿಗಳು. ಚಳ್ಳಕೆರೆಯ ಅಶ್ವಿನಿ ಹೋಟೆಲ್‌ಗೆ ದಂಪತಿ ೨೦೨೧ ಮೇ ೨೩ರಂದು ಊಟಕ್ಕೆ ಹೋಗಿದ್ದರು. ಈ ವೇಳೆ ಮಧುಮತಿ ದೇವರು ಮೈ ಮೇಲೆ ಬಂದಂತೆ ನಟಿಸಿದ್ದಳು.

ನಿಮಗೆ ನಿಧಿ ಸಿಗುತ್ತದೆ, ನೀವು ನಿಧಿ ಪಡೆಯದಿದ್ದರೆ ನಿಮ್ಮ ಅಥವಾ ನಿಮ್ಮ ಮಗನ ಮರಣವಾಗುತ್ತದೆ ಎಂದು ಹೋಟೆಲ್ ಮಾಲೀಕ ಶಂಕರಪ್ಪ ಅವರಿಗೆ ಬೆದರಿಸಿದ್ದರು. ಪರಿಹಾರವಾಗಿ ೨೧ ದಿನಗಳ ಕಾಲ ಪೂಜೆ ಮಾಡಬೇಕೆಂದು ೧.೮೦ ಲಕ್ಷ ರೂ. ಪಡೆದಿದ್ದರು.

ನಿಧಿ ಸುದ್ದಿಯ ಬಳಿಕ ಮತ್ತೆ ವಜ್ರದ ಹರಳುಗಳು ಸಿಕ್ಕಿವೆ. ಅವುಗಳನ್ನು ಮಾರಾಟ ಮಾಡಬೇಕು ಹಾಗೂ ಹರಳು ಜೋಡಿಸಲು ೧೫ ಗ್ರಾಂ ಬಂಗಾರ, ೧೦ ತೊಲ ಬೆಳ್ಳಿ ಬೇಕು ಎಂದು ಹೇಳಿದ್ದಾರೆ. ಹಂತ ಹಂತವಾಗಿ ೧.೪೩ ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ಶಂಕರಪ್ಪ ದೂರು ನೀಡಿದ್ದರು.

ನಿಧಿ ವಂಚನೆ ದೂರಿನ ಬೆನ್ನು ಬಿದ್ದ ಚಳ್ಳಕೆರೆ ಪೊಲೀಸರು ತನಿಖೆ ಆರಂಭಿಸಿದ್ದರು. ಆರೋಪಿಗಳನ್ನು ಬಂಧಿಸಿ, ಅವರಿಂದ ೧೦ ಗ್ರಾಂ ಚಿನ್ನದ ಸರ, ೭೧ ಗ್ರಾಂ ಬೆಳ್ಳಿ ಆಭರಣ, ೧ ಲಕ್ಷ ರೂ. ನಗದು ಹಾಗೂ ಕಾರು ವಶಕ್ಕೆ ಪಡೆದಿದ್ದಾರೆ.


Latest Posts

ಲೈಫ್‌ಸ್ಟೈಲ್