More

    IPL 2024: ತವರಿನಲ್ಲೂ ಸೋಲಿನ ಸರಪಳಿ ಕಳಚದ ಆರ್​ಸಿಬಿ; ರನ್​ಮಳೆಯಲ್ಲಿ ಸನ್​ರೈಸರ್ಸ್ ಎದುರು ವೀರೋಚಿತ ಸೋಲು

    ಗುರುರಾಜ್​ ಬಿ.ಎಸ್​. ಬೆಂಗಳೂರು
    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಕ್ಸರ್​-ಬೌಂಡರಿಗಳ ಸುರಿಮಳೆ ಹರಿಸಿ ಐಪಿಎಲ್​ ಇತಿಹಾಸದಲ್ಲಿ ಸರ್ವಾಧಿಕ ಮೊತ್ತ ದಾಖಲಿಸಿದ ಪ್ರವಾಸಿ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಎದುರು ಆತಿಥೇಯ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ದಿಟ್ಟ ತಿರುಗೇಟು ನೀಡಲು ಪ್ರಯತ್ನಿಸಿ 25 ರನ್​ಗಳಿಂದ ವೀರೋಚಿತ ಸೋಲು ಕಂಡಿದೆ. ಎಡಗೈ ಆರಂಭಿಕ ಟ್ರಾವಿಸ್​ ಹೆಡ್​ (102 ರನ್​, 41 ಎಸೆತ, 9 ಬೌಂಡರಿ, 8 ಸಿಕ್ಸರ್​) ಶತಕದ ಆರ್ಭಟ ಹಾಗೂ ವಿಕೆಟ್​ ಕೀಪರ್​&ಬ್ಯಾಟರ್​ ಹೆನ್ರಿಕ್​ ಕ್ಲಾಸೆನ್​ (67 ರನ್​, 31 ಎಸೆತ, 2 ಬೌಂಡರಿ, 7 ಸಿಕ್ಸರ್​) ಅಬ್ಬರದ ಬ್ಯಾಟಿಂಗ್​ ನೆರವಿನಿಂದ ರನ್​ಪ್ರವಾಹ ಹರಿಸಿದ ಸನ್​ರೈಸರ್ಸ್​ ತಂಡ ಐಪಿಎಲ್​-17ರಲ್ಲಿ 4ನೇ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿತು. ಸತತ 5ನೇ ಸೋಲಿನೊಂದಿಗೆ ಫಾಫ್ ಡು ಪ್ಲೆಸಿಸ್​ ಪಡೆ ಕೊನೇ ಸ್ಥಾನದಲ್ಲಿ ಉಳಿದಿದ್ದು, ಪ್ಲೇಆ್​ಗೇರಲು ಉಳಿದ ಏಳೂ ಪಂದ್ಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

    ಸೋಮವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಸನರೈಸರ್ಸ್​, ಟ್ರಾವಿಸ್​ ಹೆಡ್​&ಅಭಿಷೇಕ್​ ಶರ್ಮ (34) ಹಾಕಿಕೊಟ್ಟ ಭದ್ರ ಅಡಿಪಾಯ ಹಾಗೂ ಹೆನ್ರಿಕ್​ ಕ್ಲಾಸೆನ್​ ಅರ್ಧಶತಕದ ಬಲದಿಂದ 3 ವಿಕೆಟ್​ಗೆ 287 ರನ್​ಗಳ ಬೃಹತ್​ ಮೊತ್ತ ಕಲೆಹಾಕಿತು. ಪ್ರತಿಯಾಗಿ ನಾಯಕ ಫಾಫ್​ ಡು ಪ್ಲೆಸಿಸ್​ (62 ರನ್​, 28 ಎಸೆತ, 7 ಬೌಂಡರಿ, 4 ಸಿಕ್ಸರ್​) ಹಾಗೂ ವಿರಾಟ್​ ಕೊಹ್ಲಿ (42 ರನ್​, 20 ಎಸೆತ, 6 ಬೌಂಡರಿ, 2 ಸಿಕ್ಸರ್​) ಒದಗಿಸಿದ ಬಿರುಸಿನ ಆರಂಭ ಹಾಗೂ ಅನುಭವಿ ಬ್ಯಾಟರ್​ ದಿನೇಶ್​ ಕಾರ್ತಿಕ್​ (83 ರನ್​,35 ಎಸೆತ, 5 ಬೌಂಡರಿ, 7 ಸಿಕ್ಸರ್​) ಪ್ರತಿರೋಧದ ಹೊರತಾಗಿಯೂ ಆರ್​ಸಿಬಿ ತಂಡ 7 ವಿಕೆಟ್​ಗೆ 262 ರನ್​ಗಳಿಸಲಷ್ಟೇ ಶಕ್ತವಾಯಿತು. ಇದು ಐಪಿಎಲ್​ನಲ್ಲಿ ಚೇಸಿಂಗ್​ ವೇಳೆ ತಂಡವೊಂದು ಪೇರಿಸಿದ ಸರ್ವಾಧಿಕ ಮೊತ್ತದ ದಾಖಲೆಯಾಗಿದೆ.

    ಪ್ಲೆಸಿಸ್​-ಕಾರ್ತಿಕ್​ ಪ್ರತಿರೋಧ
    ದಾಖಲೆ ಮೊತ್ತ ಚೇಸಿಂಗ್​ಗೆ ಇಳಿದ ಡು ಪ್ಲೆಸಿಸ್​ ಹಾಗೂ ವಿರಾಟ್​ ಕೊಹ್ಲಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಪವರ್​ಪ್ಲೇಯಲ್ಲಿ ಆರ್​ಸಿಬಿಯ ಗರಿಷ್ಠ ಮೊತ್ತಗಳಿಸಿದ ಇವರಿಬ್ಬರು ಮೊದಲ ವಿಕೆಟ್​ಗೆ 38 ಎಸೆತಗಳಲ್ಲಿ 80 ರನ್​ ಕಸಿದರು. ಆಗ ದಾಳಿಗಿಳಿದ ಇಂಪ್ಯಾಕ್ಟ್​ ಪ್ಲೇಯರ್​ ಮಯಾಂಕ್​ ಮಾರ್ಕಂಡೆ ಈ ಜೋಡಿಯನ್ನು ಬೇರ್ಪಡಿಸಿದರು. ನಂತರ ವಿಲ್​ ಜ್ಯಾಕ್ಸ್​ (7), ರಜತ್​ ಪಾಟೀದಾರ್​ (9) ಹಾಗೂ ಸೌರವ್​ ಚೌವ್ಹಾಣ್​ (0) ವೈಫಲ್ಯ ಕಂಡರು. 23 ಎಸೆತಗಳಲ್ಲಿ ಅರ್ಧಶತಕಗಳಿಸಿ ಹೋರಾಟ ಜೀವಂತವಿರಿಸಿದ ಪ್ಲೆಸಿಸ್​ ವಿಕೆಟ್​ ಪಡೆದ ಪ್ಯಾಟ್​ ಕಮ್ಮಿನ್ಸ್​ (43ಕ್ಕೆ 3) ಆರ್​ಸಿಬಿಗೆ ಕಡಿವಾಣ ಹೇರಿದರು. ನಂತರ ದಿನೇಶ್​ ಕಾರ್ತಿಕ್​, ಮಹಿಪಾಲ್​ ಲೋಮ್ರೊರ್​ (19) ಜತೆಯಾಗಿ 6ನೇ ವಿಕೆಟ್​ಗೆ 25 ಎಸೆತಗಳಲ್ಲಿ 59 ರನ್​ ಪೇರಿಸಿದರು. 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಕಾರ್ತಿಕ್​ ಏಕಾಂಗಿ ಹೋರಾಟ ನಡೆಸಿದರು. ಅನುಜ್​ ರಾವತ್​ (25*) ಜತೆಗೆ 28 ಎಸೆತಗಳಲ್ಲಿ 63 ರನ್​ ಕಸಿದ ಕಾರ್ತಿಕ್​ ಸೋಲಿನ ಅಂತರ ತಗ್ಗಿಸಿ ಆರ್​ಸಿಬಿ ಮಾನ ಉಳಿಸಿದರು.

    RCB vs SRH: ಐಪಿಎಲ್ ಇತಿಹಾಸದಲ್ಲೇ ವೇಗದ ಶತಕ ಸಿಡಿಸಿದ ಹೆಡ್! ಆರ್​ಸಿಬಿಗೆ 287 ರನ್ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts