More

    ಸಾರ್ವಜನಿಕ ಶೌಚಗೃಹವಾಗುತ್ತಿದೆ ವಿಶ್ವವಿಖ್ಯಾತ ಬೀಚ್

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ವಿಶ್ವವಿಖ್ಯಾತ ತ್ರಾಸಿ ಮರವಂತೆ ಬೀಚ್ ಸಾರ್ವಜನಿಕ ಶೌಚಗೃಹವಾಗುತ್ತಿದೆ. ಸೂಪರ್ ಫಾಸ್ಟ್ ಹೆದ್ದಾರಿಯಲ್ಲಿ ಎರ‌್ರಾಬಿರ‌್ರಿ ವಾಹನ ನಿಲುಗಡೆಗೆ ಅವಕಾಶ ಇಲ್ಲದಿದ್ದರೂ ಉದ್ದಾನುದ್ದಕ್ಕೂ ವಾಹನ ನಿಲ್ಲಿಸಿ ಸಂಚಾರ ಸಮಸ್ಯೆ ಜತೆ ಸಮುದ್ರ ತೀರದಲ್ಲಿ ದೇಹಬಾಧೆ ತೀರಿಸಿಕೊಳ್ಳುವ ತಾಣವಾಗಿ ಮಾರ್ಪಾಟಾಗಿದೆ.

    ದಿನ ಬೆಳಗ್ಗೆ ಸಂಜೆ ನೂರಾರು ಜನ ಜಾಗಿಂಗ್ ಮಾಡುವವರು ಮೂಗು -ಕಣ್ಣು ಮುಚ್ಚಿಕೊಂಡು ಹೋಗಬೇಕು. ಪಾದಚಾರಿಗಳು ಜೀವ ಗಟ್ಟಿ ಮಾಡಿಕೊಂಡು ಸಾಗಬೇಕು. ಮರವಂತೆ ತ್ರಾಸಿ ಬೀಚ್ ಪ್ರಸಿದ್ಧಿ ಪಡೆದುಕೊಂಡಿರುವುದು ಸೂರ್ಯಾಸ್ತಮಾನ ಸೊಬಗಿನಿಂದ. ಅವ್ಯವಸ್ಥಿತ ವಾಹನ ನಿಲುಗಡೆ ಪ್ರಕೃತಿ ನೀಡಿದ ಸೊಬಗು ವೀಕ್ಷಣೆಗೆ ಅಡ್ಡಿ ಮಾಡುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಕಪ್ಪು ಚುಕ್ಕೆಯಾಗಿದೆ.

    ಈ ಪರಿ ಸೊಬಗು ಇನ್ನೆಲ್ಲೂ ಸಿಗದು: ತ್ರಾಸಿ ಮರವಂತೆ ಕಡಲ ತೀರ ಕೇವಲ ಸೂರ್ಯಾಸ್ತಮಾನಕ್ಕೆ ಸೀಮಿತವಲ್ಲ. ಸಮುದ್ರ ಪಕ್ಕದಲ್ಲಿ ಮಂದವಾಗಿ ಹರಿವ ಸೌಪರ್ಣಿಕಾ ನದಿ ದೋಣಿ ವಿಹಾರಕ್ಕೂ, ಸಾಹಸ ಕ್ರೀಡೆಗೂ ಹೇಳಿ ಮಾಡಿಸಿದ ಪ್ರದೇಶ. ಒಂದುಕಡೆ ಪಶ್ಚಿಮ ಘಟ್ಟ, ಮತ್ತೊಂದು ಕಡೆ ಸಮುದ್ರದ ಭೋರ್ಗರೆತ, ನದಿಯ ತೀರದಲ್ಲಿ ಕಾಂಡ್ಲಾ ಸಸ್ಯ ಸಂಕುಲ, ಶ್ರೀ ಮಾರಸ್ವಾಮಿ ದೇವಸ್ಥಾನ, ಕುರು ದ್ವೀಪದ ಸುತ್ತ ನದಿಯಲ್ಲೊಮ್ಮೆ ದೋಣಿ ವಿಹಾರ, ವಿಶಾಲ ಕೃಷಿ ಭೂಮಿ ಹೀಗೆ ವೈವಿಧ್ಯತೆ ಇರುವ ಪ್ರಕೃತಿ ಕೊಟ್ಟ ಕೊಡುಗೆ ಸೊಬಗು ಒಂದೇ ಕಡೆ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. ಹಾಗಾಗಿಯೇ ಮರವಂತೆ ತ್ರಾಸಿ ಬೀಚ್ ವಿಶ್ವವಿಖ್ಯಾತ. ಸೂರ್ಯಾಸ್ತಮಾನದ ಪರಿಯಂತೂ ಅನುಭವಿಸಿಯೇ ಸವಿಯಬೇಕು. ಇಡೀ ಸಮುದ್ರ ನೀರೆಲ್ಲ ಬಂಗಾರದ ಬಣ್ಣಕ್ಕೆ ತಿರುಗಿ, ಹಂತಹಂತ ಸೂರ್ಯ ಮುಳುಗುವ ಸೊಬಗಿದೆಯಲ್ಲಾ ನೋಡಿಯೇ ತಣಿಯಬೇಕು. ಇಷ್ಟೊಂದು ಸೊಬಗಿನ ಬೀಚ್ ಹತ್ತರಲ್ಲಿ ಹನ್ನೊಂದಾಗುತ್ತಿರುವುದು ಮಾತ್ರ ಬೇಸರದ ಸಂಗತಿ.

    ಬೀಚ್ ಬಳಿ ಸ್ಥಳೀಯರಿಗೆ ವ್ಯಾಪಾರ ಅವಕಾಶ ನೀಡಬೇಕು ಎನ್ನುವ ಉದ್ದೇಶದಿಂದ ಅಂಗಡಿ ಮಾಡಿ ಹಂಚಿಕೆ ಮಾಡಿದ್ದು, ರಸ್ತೆ ಬದಿ ವ್ಯಾಪಾರಿಗಳು ಅಲ್ಲಿಗೆ ಹೋಗದೆ ಅಸಹಕಾರ ನೀಡುತ್ತಿದ್ದಾರೆ. ಬೀಚ್ ಬಳಿ ಟೂರಿಸಂ ಅಭಿವೃದ್ಧಿಗೆ ಜಾಗ ಮೀಸಲಿಟ್ಟಿದ್ದು, ಅದನ್ನು ಪಾರ್ಕಿಂಗ್ ಮಾಡಲು ಬಿಟ್ಟುಕೊಟ್ಟರೆ ಶಾಶ್ವತ ಪಾರ್ಕಿಂಗ್ ಆಗುತ್ತದೆ. ಬೀಚ್ ಪಕ್ಕ ಪಾರ್ಕಿಂಗ್ ವ್ಯವಸ್ಥೆಯಿದ್ದು, ಅದು ತುಂಬಿದ್ದೇ ನೋಡಿಲ್ಲ. ಈಗಿರುವ ಪಾರ್ಕಿಂಗ್ ವ್ಯವಸ್ಥೆ ಸಾಲದಿದ್ದರೆ ಐಬಿ ಪಕ್ಕದಲ್ಲಿ ಮಾಡಬಹುದು. ಹೆದ್ದಾರಿಯುದ್ದಕ್ಕೂ ಲಾರಿ, ಭಾರಿ ವಾಹನ ನಿಲುಗಡೆಯೇ ದೊಡ್ಡ ಸಮಸ್ಯೆ ಆಗಿದ್ದು, ಈ ಬಗ್ಗೆ ಎಸ್ಪಿ ಜತೆ ಮಾತನಾಡಿ ಬೀಚ್‌ನಲ್ಲಿ ಪೊಲೀಸ್ ನಿಯುಕ್ತಿ ಮಾಡಲಾಗುತ್ತದೆ. ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತನಾಡಿ ಸಮಸ್ಯೆ ಹೇಗೆ ಪರಿಹಾರ ಮಾಡಬಹುದು ಎನ್ನುವ ಬಗ್ಗೆ ಮಾತನಾಡಲು ಉಪ ವಿಭಾಗಾಧಿಕಾರಿಯವರಿಗೆ ಸೂಚಿಸುತ್ತೇನೆ.
    ಜಿ.ಜಗದೀಶ್
    ಜಿಲ್ಲಾಧಿಕಾರಿ, ಉಡುಪಿ

    ಬೆಳಗ್ಗೆ ತ್ರಾಸಿ ಮರವಂತೆ ಕಡಲ ತೀರದಲ್ಲಿ ಕಣ್ಣು, ಮೂಗು ಮುಚ್ಚಿಕೊಂಡು ಜಾಗಿಂಗ್ ಮಾಡಬೇಕಾದ ಅಸಹ್ಯ ಸ್ಥಿತಿ ಇದೆ. ಸಮುದ್ರ ತೀರ ಉದ್ದಕ್ಕೂ ವಾಹನಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ಹೋಗಬೇಕು. ವಾಹನ ನಿಲುಗಡೆ ಸಂಚಾರ ಸಮಸ್ಯೆ ಮಾತ್ರ ಸೃಷ್ಟಿಸುವುದಿಲ್ಲ. ವಾಹನ ಚಾಲಕ ಹಾಗೂ ಸಹಾಯಕರಿಗೆ ಕಡಲ ತೀರ ಪಬ್ಲಿಕ್ ಟಾಯ್ಲೆಟ್ ಆಗಿದ್ದು, ಪರಿಸರ ಮಾಲಿನ್ಯ ಕೂಡ ಆಗುತ್ತಿದೆ.
    ಸುಧಾಕರ ಐತಾಳ್
    ಜಾಗಿಂಗ್ ಮಾಡುವ ಯುವಕ, ಪಡುಕೋಣೆ

    ಪಡುಕೋಣೆಯಿಂದ ರಾಷ್ಟ್ರೀಯ ಹೆದ್ದಾರಿ ಬೆಸೆಯಲು ಮಾರಸ್ವಾಮಿ ದೇವಸ್ಥಾನ ಬಳಿ 5 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಆದರೂ ಊಟಕ್ಕಿಲ್ಲದ ಉಪ್ಪಿನಕಾಯಿ. ಸೇತುವೆಯಿಂದ ಎರಡಕ್ಕೆ ತಿರುಗಿ ಮಾರಸ್ವಾಮಿ ದೇವಸ್ಥಾನ ಸ್ವಾಗತ ಗೋಪುರದಡಿಯಲ್ಲಿ ಹೆದ್ದಾರಿ ಸೇರಬೇಕು. ಕೂಡುರಸ್ತೆ ಕಡಿದಾಗಿದ್ದರಿಂದ ವಾಹನ ಹತ್ತಿಸುವುದು ತ್ರಾಸದಾಯಕ. ಕೂಡು ರಸ್ತೆ ಎರಡೂ ಕಡೆ ಭಾರಿ ವಾಹನ ನಿಲ್ಲಿಸುವುದರಿಂದ ಚಾಲಕ ಗಲಿಬಿಲಿಗೊಂಡು ಅಪಾಯಕ್ಕೆ ಈಡಾಗಬೇಕು. ಬೀಚ್ ಬಳಿ ಬೆಳಗ್ಗೆ ಸಂಜೆ ಪೊಲೀಸರ ನಿಯೋಜಿಸಬೇಕು.
    ರಾಘವೇಂದ್ರ ಭಟ್, ಕೃಷಿಕ ಬೀಚ್ ಬಳಿ ನಿವಾಸಿ, ಪಡುಕೋಣೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts