More

    ಸಾರಿಗೆ ಸಂಘರ್ಷ ತಾರಕಕ್ಕೆ: ಇಂದು ನಿರ್ಣಾಯಕ ಸಭೆ

    ಬೆಂಗಳೂರು: ಸಾರಿಗೆ ನೌಕರರು ಹಾಗೂ ರಾಜ್ಯ ಸರ್ಕಾರದ ನಡುವಿನ ಬಿಕ್ಕಟ್ಟು ತಾರಕಕ್ಕೇರಿದ್ದರಿಂದ ಸಾರ್ವಜನಿಕರು ಶನಿವಾರವೂ ಸಂಕಷ್ಟ ಅನುಭವಿ ಸುವಂತಾಯಿತು. ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಸೇರಿದಂತೆ ತಮ್ಮೆಲ್ಲ ಬೇಡಿಕೆಗಳು ಈಡೇರುವವರೆಗೂ ಮುಷ್ಕರ ಕೈಬಿಡುವುದಿಲ್ಲ ಎಂದು ನೌಕರರು ಪಟ್ಟುಹಿಡಿದಿದ್ದರೆ, ಮುಷ್ಕರ ನಿಲ್ಲಿಸದಿದ್ದಲ್ಲಿ ಸರ್ಕಾರಿ ಬಸ್​ಗಳ ದರದಲ್ಲೇ ಖಾಸಗಿ ಬಸ್​ಗಳನ್ನು ಸಂಚಾರಕ್ಕಾಗಿ ರಸ್ತೆಗಿಳಿಸುವುದಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ರಾತ್ರಿ ಸುದ್ದಿಗೋಷ್ಠಿ ನಡೆಸಿದ ಸಚಿವರು ಭಾನುವಾರ ಬೆಳಗ್ಗೆ ಸಾರಿಗೆ ಇಲಾಖೆಯ ಟ್ರೇಡ್ ಯೂನಿಯನ್ ಮುಖಂಡರ ಸಭೆ ಕರೆದಿರುವುದಾಗಿ ಪ್ರಕಟಿಸಿದರು. ಹೀಗಾಗಿ ಸಮಸ್ಯೆ ಬಗೆಹರಿಯುವ ನಿಟ್ಟಿನಲ್ಲಿ ಈ ಸಭೆಯ ಫಲಶ್ರುತಿ ನಿರ್ಣಾಯಕವಾಗಲಿದೆ.

    ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸವದಿ ಕೋಡಿಹಳ್ಳಿ ಚಂದ್ರಶೇಖರ್, ರೈತ ನಾಯಕರು, ಇಲಾಖೆಯ ಟ್ರೇಡ್ ಯೂನಿಯನ್ ಮುಖಂಡರನ್ನು ಸಭೆಗೆ ಆಹ್ವಾನಿಸಿರುವುದಾಗಿ ತಿಳಿಸಿದರು.

    ಸಹಾನುಭೂತಿ ಇದೆ: ನೌಕರರ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿಯಿದೆ. ಬಿಚ್ಚುಮನಸ್ಸಿನಿಂದ ಮಾತುಕತೆ ನಡೆಸಲಿದ್ದು, ಸಮಸ್ಯೆ ಬಗೆಹರಿಯಲಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ನೌಕರರು ಎಂದಿನಂತೆ ಕರ್ತವ್ಯಕ್ಕೆ ಮರಳುವ ವಿಶ್ವಾಸವಿದೆ ಎಂದು ಹೇಳಿದರು.

    ಶೀಘ್ರ ವೇತನ: ಮುಖ್ಯಮಂತ್ರಿಯೊಂದಿಗೆ ರ್ಚಚಿಸಿದ ವೇಳೆ ಎಲ್ಲ ಮಾಹಿತಿ ನೀಡಲಾಗಿದೆ. ಆರ್ಥಿಕ ಸಂಕಷ್ಟದ ಮಧ್ಯೆ ಸಾರಿಗೆ ನೌಕರರಿಗೆ ವೇತನಕ್ಕೆ ಅಡ್ಡಿಯಾಗದಂತೆ ನೋಡಿಕೊಂಡಿದ್ದೇವೆ. ನವೆಂಬರ್​ವರೆಗಿನ ವೇತನ ಪಾವತಿಸಲಾಗಿದ್ದು, ಡಿಸೆಂಬರ್ ವೇತನವನ್ನೂ ಶೀಘ್ರವೇ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

    ಉಪವಾಸ ಸತ್ಯಾಗ್ರಹ: ಸಾರಿಗೆ ನೌಕರರು ಭಾನುವಾರದಿಂದ ಎಲ್ಲ ಡಿಪೋ ಹಾಗೂ ಗಾಂಧಿ ಪ್ರತಿಮೆಗಳ ಬಳಿ ಕುಟುಂಬ ಸದಸ್ಯರ ಸಮೇತ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ.

    ಮುಷ್ಕರದ ಸ್ಥಳಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರತ್ತ ಗಮನಸೆಳೆದಾಗ ವಿರೋಧ ಪಕ್ಷದವರು ಅವರ ಕೆಲಸ ಮಾಡುತ್ತಾರೆ ಎಂದು ಸವದಿ ಪ್ರತಿಕ್ರಿಯಿಸಿದರು. ‘ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನನ್ನೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಲು ಸಲಹೆ-ಸೂಚನೆಗಳನ್ನು ನೀಡಿದ್ದಾರೆ’ ಎಂದರು. ಬಿಎಸ್​ವೈ ಜತೆಗೆ ಸವದಿ ಮಾತುಕತೆ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಇದ್ದರು.

    ಶನಿವಾರ ಬೆಳಗ್ಗೆ ನಡೆದ ಬೆಳವಣಿಗೆಗಳ ಬಳಿಕ ಸರ್ಕಾರಿ ಬಸ್​ಗಳಲ್ಲಿನ ಪ್ರಯಾಣದ ದರದಲ್ಲೇ ಖಾಸಗಿ ಬಸ್ ಸೇವೆ ಆರಂಭಿಸಲು ಸರ್ಕಾರ ಮುಂದಾಗಿತ್ತು. ಇದೆಲ್ಲದರ ನಡುವೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷರೆಂದು ಸಾರಿಗೆ ನೌಕರರು ಘೋಷಿಸಿರುವುದು ಸಾರಿಗೆ ಸಂಘರ್ಷಕ್ಕೆ ಹೊಸ ತಿರುವು ನೀಡಿದೆ. ಕೋಡಿಹಳ್ಳಿ ನೇತೃತ್ವದಲ್ಲೇ ಮುಷ್ಕರ ಮುಂದುವರಿಸಲು ತೀರ್ವನಿಸಲಾಗಿದ್ದು, ಅವರನ್ನು ಬಿಟ್ಟು ಸರ್ಕಾರದೊಂದಿಗೆ ಸಭೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ನೌಕರರು ಹೇಳಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಮಾತುಕತೆಗೆ ಕರೆದರಷ್ಟೇ ಬರುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಜತೆ ಚರ್ಚೆ ಮಾಡುವುದಿಲ್ಲ ಎಂದು ಸಾರಿಗೆ ಸಚಿವರೂ ಪಟ್ಟು ಹಿಡಿದಿದ್ದಾರೆ. ಅತ್ತ ಸಿಎಂ ಸಹ ಕೋಡಿಹಳ್ಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಅಧಿಕಾರಿಗಳ ಜತೆ ಸವದಿ ಚರ್ಚೆ

    ಜಯಮಹಲ್​ನಲ್ಲಿರುವ ತಮ್ಮ ಮನೆಯಲ್ಲಿ ಸಚಿವ ಸವದಿ ಅವರು ಶನಿವಾರ ಬೆಳಗ್ಗೆ ಬಿಎಂಟಿಸಿ ಎಂಡಿ ಶಿಖಾ ಹಾಗೂ ಕೆಎಸ್​ಆರ್​ಟಿಸಿ ಎಂಡಿ ಶಿವಯೋಗಿ ಕಳಸದ್ ಜತೆ ಖಾಸಗಿ ಬಸ್ಸುಗಳ ಓಡಾಟಕ್ಕೆ ಮಾಡಬೇಕಾದ ಸಿದ್ಧತೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಎಷ್ಟು ಖಾಸಗಿ ಬಸ್ಸುಗಳನ್ನು ಓಡಿಸಬೇಕು? ಸದ್ಯ ಖಾಸಗಿ ವಾಹನಗಳು ಎಷ್ಟಿವೆ? ಕೆಎಸ್​ಆರ್​ಟಿಸಿ ಬಸ್ಸುಗಳನ್ನು ಖಾಸಗಿ ವಾಹನ ಚಾಲಕರ ಬಳಕೆಗೆ ನೀಡುವುದು ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

    ನೌಕರರ ಮುಂದಿನ ಹಾದಿ

    • ಸರ್ಕಾರಿ ನೌಕರರಾಗಿ ಪರಿಗಣಿಸುವ ಬೇಡಿಕೆ ಈಡೇರಿಸುವವರೆಗೆ ಪ್ರತಿಭಟನೆ ಮುಂದುವರಿಸುವುದು
    • ಸಿಎಂ ಹಾಗೂ ಸಾರಿಗೆ ಸಚಿವರ ಮನವಿಗೆ ಸ್ಪಂದಿಸಿ ಚರ್ಚೆ ನಡೆಸಿ ಅಂತಿಮ ತೀರ್ವನಕ್ಕೆ ಬರುವುದು
    • ಸರ್ಕಾರ ಕೊಡುವ ಭರವಸೆ ಪಡೆದು ಕರ್ತವ್ಯಕ್ಕೆ ಹಾಜರಾಗುವುದು
    • ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವ ಸರ್ಕಾರದ ಕ್ರಮ ಒಪ್ಪಿಕೊಳ್ಳುವುದು
    • ಜನರಿಗಾಗುತ್ತಿರುವ ಸಮಸ್ಯೆ ಅರಿತು, ಸ್ವಯಂಪ್ರೇರಿತವಾಗಿ ಕೆಲಸಕ್ಕೆ ಬರುವುದು

    ಸರ್ಕಾರ ಏನು ಮಾಡಬಹುದು?

    • ಸಾರಿಗೆ ನೌಕರರೊಂದಿಗೆ ಮಾತುಕತೆ ನಡೆಸಿ ಅವರ ಕೆಲ ಬೇಡಿಕೆ ಈಡೇರಿಸುವುದು
    • ಸರ್ಕಾರಿ ನೌಕರರಾಗಿ ಪರಿಗಣಿಸುವ ಬೇಡಿಕೆ ಬದಲು ವೇತನ ಹೆಚ್ಚಳ ಮಾಡುವ ಭರವಸೆ ನೀಡುವುದು, ತರಬೇತಿ ನೌಕರರನ್ನು ಬಳಸಿಕೊಂಡು ಅವರ ಮುಖಾಂತರ ಬಸ್ ಸೇವೆ ಒದಗಿಸುವುದು
    • ಖಾಸಗಿ ಬಸ್ ಮಾಲೀಕರ ಮನವೊಲಿಸಿ ಬಸ್ ಸೇವೆ ನೀಡುವುದು, ಎಸ್ಮಾ ಜಾರಿ ಮಾಡುವುದಾಗಿ ಹೆದರಿಸಿ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಬಹುದು

    ಖಾಸಗಿ ಬಸ್​ಗಳ ಬಳಕೆ?

    ನಿರೀಕ್ಷೆಯಂತೆ ಮಾತುಕತೆ ಫಲಪ್ರದವಾಗದಿದ್ದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ. ಈಗಾಗಲೇ ತೀರ್ವನಿಸಿದಂತೆ ಖಾಸಗಿ ಬಸ್​ಗಳು ರಸ್ತೆಗೆ ಇಳಿಯಲಿವೆ. ನೌಕರರ ಹಿತದ ಜತೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದೂ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಸಚಿವ ಸವದಿ ಸಮಜಾಯಿಷಿ ನೀಡಿದ್ದಾರೆ.

    ಸಾರಿಗೆ ಸಂಘರ್ಷ ತಾರಕಕ್ಕೆ: ಇಂದು ನಿರ್ಣಾಯಕ ಸಭೆಕೆಲ ಸಾರಿಗೆ ನೌಕರರನ್ನು ಎತ್ತಿಕಟ್ಟಿ ಮುಷ್ಕರ ನಡೆಸಲು ಹಾಗೂ ರಾಜ್ಯದ ವಿವಿಧೆಡೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಸಲು ಪ್ರಚೋದಿಸಿ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟ ಉಂಟಾಗಲು ಕೋಡಿಹಳ್ಳಿ ಚಂದ್ರಶೇಖರ್ ಅವರೇ ಕಾರಣೀಕರ್ತರು.

    | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

    ಸಚಿವ ಸವದಿ ನಿರ್ಲಕ್ಷ್ಯದಿಂದಾಗಿ ಸಂಕಷ್ಟ

    ಸಾರಿಗೆ ನೌಕರರ ನಿಲ್ಲದ ಮುಷ್ಕರ, ಸಾರ್ವಜನಿಕರ ಪರದಾಟವು ಸಾರಿಗೆ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಸಮರ್ಥತೆಗೆ ಸಾಕ್ಷಿ ಎಂಬ ಟೀಕೆ ಕೇಳಿಬರುತ್ತಿವೆ. ಹಲವು ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಧರಣಿ ನಡೆಸಿದಾಗಲೇ ಪರಿಸ್ಥಿತಿ ಗಂಭೀರತೆ ಅರಿತುಗೊಳ್ಳುವಲ್ಲಿ ಸವದಿ ಮುಗ್ಗರಿಸಿದ್ದಾರೆ. ನೌಕರರು ಪ್ರತಿಭಟನೆ ನಡೆಸುವುದು ಮೊದಲೇ ಗೊತ್ತಿದ್ದರೂ ನಿಯಂತ್ರಣಕ್ಕೆ ಮುಂದಾಗದಿದ್ದದ್ದು ಸಾರ್ವಜನಿಕರು ಸಂಕಷ್ಟ ಎದುರಿಸಲು ಕಾರಣವಾಗಿದೆ. ವಿಧಾನ ಮಂಡಲದ ಅಧಿವೇಶನದಲ್ಲಿ ಭಾಗವಹಿಸಿದ್ದ ಅವರು, ತಕ್ಷಣ ಸ್ಥಳಕ್ಕೆ ತೆರಳಿ ಮನವೊಲಿಸುವ ಮೂಲಕ ಬಸ್ ಸಂಚಾರ ನಿಲುಗಡೆ ತಪ್ಪಿಸಲು ಸಾಧ್ಯವಿತ್ತು. ಪಕ್ಷ ವಹಿಸಿದ ಜವಾಬ್ದಾರಿ ಜತೆಗೆ ಇಲಾಖೆ ನಿರ್ವ ಹಿಸುವಲ್ಲಿಯೂ ಸವದಿ ಪದೇಪದೆ ಎಡವುತ್ತಿದ್ದಾರೆ ಎನ್ನುವ ಆರೋಪಗಳಿಗೆ ಈ ಸನ್ನಿವೇಶವೇ ಪುಷ್ಟಿ ನೀಡಿದೆ. ಮುಷ್ಕರದ ನೇತೃತ್ವವಹಿಸಿದ್ದ ನಾಯಕರು ಹಾಗೂ ಟ್ರೇಡ್ ಯೂನಿಯನ್ ಮುಖಂಡರನ್ನು ಒಟ್ಟಿಗೆ ಮಾತುಕತೆ ಕರೆಯುವ ಬದಲು ಪ್ರತಿಷ್ಠೆ ತೋರಿಸಿಕೊಂಡದ್ದೂ ಸಂಕಷ್ಟ ಹೆಚ್ಚಿಸಿದೆ ಎನ್ನಲಾಗುತ್ತಿದೆ.

    ದ್ವಂದ್ವ ನಿಲುವು: ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ ಹಾಗೂ ನಿಗಮಗಳನ್ನು ಬಲಪಡಿಸುತ್ತೇವೆ ಎನ್ನುವ ಮೂಲಕ ಖಾಸಗಿ ವಲಯವನ್ನು ಮಟ್ಟ ಹಾಕುವ ಮಾತನಾಡುವ ಸವದಿ, ಮತ್ತೊಂದೆಡೆ ಖಾಸಗಿ ಬಸ್​ಗಳನ್ನು ಬಳಸಿಕೊಂಡು ಸೇವೆ ನೀಡುವುದಾಗಿ ಹೇಳುವ ಮೂಲಕ ದ್ವಂದ್ವ ನಿಲುವು ಪ್ರದರ್ಶಿಸಿದ್ದಾರೆ. ಕರೊನಾ ಸಂಕಷ್ಟ ಕಾಲದಲ್ಲಿ ನೌಕರರಿಗೆ ವೇತನ ಪಾವತಿಸಿದ್ದೇವೆ. ಹೀಗಾಗಿ ಮುಷ್ಕರ ಕೈಬಿಡುತ್ತಾರೆ ಎಂಬ ಅತಿಯಾದ ವಿಶ್ವಾಸದಿಂದ ತಕ್ಷಣಕ್ಕೆ ಮುಕ್ತ ಮಾತುಕತೆ ನಡೆಸುವ ಅವಕಾಶ ಕೈಚೆಲ್ಲಿದರು. ಮೊದಲ ಸುತ್ತಿನ ಮಾತುಕತೆ ವಿಫಲವಾದ ಬಳಿಕ ಮತ್ತೊಮ್ಮೆ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಕೈಬಿಟ್ಟು ತಟಸ್ಥ ನಿಲುವು ತಳೆದದ್ದರಿಂದಾಗಿ ಸರ್ಕಾರವೇ ಪ್ರತಿಷ್ಠೆ, ಹಠಮಾರಿ ನಿಲುವು ಹೊಂದಿದೆ ಎಂಬ ಸಂದೇಶ ರವಾನೆಯಾಗಿ ನೌಕರರು ಪಟ್ಟು ಬಿಗಿಗೊಳಿಸಿದರು. ಪರಿಸ್ಥಿತಿ ಉಲ್ಬಣಿಸಿದ ಬಳಿಕ ಸವದಿ ಗಡಬಡಿಸಿ ಮತ್ತೊಮ್ಮೆ ಫೀಲ್ಡ್​ಗೆ ಇಳಿದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ಪರಿಹಾರದ ಮಾರ್ಗಕ್ಕೆ ಮೊರೆ ಹೋಗಿದ್ದಾರೆ.

    ಸಾರಿಗೆ ಸಂಸ್ಥೆಗಳಿಗೆ ನಷ್ಟ: ಬಸ್​ಗಳು ರಸ್ತೆಗೆ ಇಳಿಯದ ಕಾರಣ ಪ್ರಯಾಣಿಕರಿಗೆ ಪರದಾಟ ಒಂದೆಡೆಯಾದರೆ, ಸಾರಿಗೆ ಸಂಸ್ಥೆ ಹಾಗೂ ನಿಗಮಗಳಿಗೆ ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಕರೊನಾ ಕಷ್ಟಕಾಲದಲ್ಲಿ ಯಾರಿಗೂ ಬೇಕಿಲ್ಲದ ಮುಷ್ಕರ ಬರೆ ಇಟ್ಟಿದೆ. ಹೊಣೆಗಾರಿಕೆಯನ್ನು ದಕ್ಷ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿನ ಸವದಿ ವೈಫಲ್ಯ, ಪರಿಹಾರೋಪಾಯಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

    ಸಾರಿಗೆ ಸಂಘರ್ಷ ತಾರಕಕ್ಕೆ: ಇಂದು ನಿರ್ಣಾಯಕ ಸಭೆಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರ ನ್ನಾಗಿ ಪರಿಗಣಿಸ ಬೇಕೆಂಬ ಬೇಡಿಕೆ ಒಪು್ಪವುದು ಕಷ್ಟಸಾಧ್ಯ. ಸರ್ಕಾರಿ ನೌಕರ ರಿಗಿಂತಲೂ ಉತ್ತಮ ಸೌಲಭ್ಯ ನೀಡಲಿದ್ದೇವೆ. ಉಳಿದೆಲ್ಲ ಬೇಡಿಕೆ ಈಡೇರಿಸಲು ಸಿದ್ಧರಿದ್ದೇವೆ.

    | ಲಕ್ಷ್ಮಣ ಸವದಿ ಸಾರಿಗೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts