More

    ಅನುಕೂಲಕ್ಕೆ ಬಳಸಿಕೊಳ್ಳುವ ವಸ್ತುವಾಗಿದ್ದಾಳೆ ಹೆಣ್ಣು: ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಪ್ರೊ.ಆರ್.ಕಾವಲಮ್ಮ ಬೇಸರ

    ಮೈಸೂರು: ಮಹಿಳಾ ಅಭಿವೃದ್ಧಿ, ಮಹಿಳಾ ಸಬಲೀಕರಣದ ಮಾತುಗಳನ್ನು ನಾವು ಗ್ರಹಿಸಿಕೊಂಡಿರುವ ರೀತಿಗೂ, ವಾಸ್ತವದ ಅನುಭವಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಪ್ರೊ.ಆರ್.ಕಾವಲಮ್ಮ ಅಭಿಪ್ರಾಯಪಟ್ಟರು.
    ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಿಂದ ಸೋಮವಾರ ವಿವಿ ಆವರಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
    ಆಧುನಿಕ ಯುಗದಲ್ಲಿ ಮಹಿಳೆ ಎಲ್ಲ ಕ್ಷೇತ್ರದಲ್ಲೂ ಮುಂದಿದ್ದು, ಮಹಿಳಾ ಸಬಲೀಕರಣವಾಗಿದೆ ಎನ್ನುವುದು ಕೇವಲ ಭ್ರಮೆ. ಮಹಿಳಾ ಸಬಲೀಕರಣ ಅನ್ನುವುದೇ ಒಂದು ರಾಜಕಾರಣ. ಯಾವ ವರ್ಗದ ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ ಎಂಬ ಪ್ರಶ್ನೆ ಕಾಡುತ್ತದೆ ಎಂದರು.
    ಮಹಿಳಾ ಅಭಿವೃದ್ಧಿ, ಮಹಿಳಾ ಸಬಲೀಕರಣದ ಮಾತುಗಳನ್ನು ನಾವು ಗ್ರಹಿಸಿಕೊಂಡಿರುವ ರೀತಿಗೂ, ವಾಸ್ತವದ ಅನುಭವಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ತಮ್ಮ ಅಸ್ಮಿತೆಯನ್ನು ತಾವೇ ಕಂಡುಕೊಳ್ಳಬೇಕು ಎಂದು ತಿಳಿಸಿದರು.
    ಪುರುಷರ ಬಾಯಿಂದ ಬರುವ ಸ್ತ್ರೀ ಸ್ವಾತಂತ್ರೃದ ಮಾತುಗಳು ನೆರೆಹೊರೆಯ ಹೆಣ್ಣು ಮಕ್ಕಳಿಗೆ ಅನ್ವಯಿಸುವಂತೆ ಇರುತ್ತವೆ. ಆದರೆ, ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಎಲ್ಲ ಸಂದರ್ಭದಲ್ಲಿಯೂ ನಿಯಂತ್ರಿಸುತ್ತಲೇ ಇರುತ್ತಾರೆ. ಅಂದರೆ ಒಟ್ಟಾರೆಯಾಗಿ ಹೆಣ್ಣು ಅವರವರ ಅನುಕೂಲಕ್ಕೆ ಬಳಸಿಕೊಳ್ಳುವ ವಿಷಯ ವಸ್ತುವಾಗಿದ್ದಾಳೆ ಎಂದು ವಿಷಾದಿಸಿದರು.
    ಮಹಿಳೆಯರು ತಮ್ಮ ಸ್ವಾತಂತ್ರ್ಯ ಮತ್ತು ಆಯ್ಕೆಯ ಬಗ್ಗೆ ಸ್ಪಷ್ಟತೆ ಕಂಡುಕೊಳ್ಳಬೇಕಿದೆ. ಮಹಿಳೆಯರು ಯಾರೋ ನಮ್ಮನ್ನು ಉದ್ಧಾರ ಮಾಡುತ್ತಾರೆ ಎಂದು ಭಾವಿಸಿಕೊಳ್ಳಬಾರದು. ಮಹಿಳೆಯರ ಸಬಲೀಕರಣ ಮಹಿಳೆಯರಿಂದ ಮಾತ್ರ ಸಾಧ್ಯ. ಆದ್ದರಿಂದ ಹೆಣ್ಣು ಮಕ್ಕಳು ಸರ್ಕಾರದಿಂದ ಕೊಡುವ ಸೌಲಭ್ಯ ಬಳಸಿಕೊಂಡು ತಮ್ಮನ್ನು ತಾವೇ ಸಬಲೀಕರಣಗೊಳ್ಳಬೇಕು ಎಂದು ಸಲಹೆ ನೀಡಿದರು.
    ರಾಜಪ್ರಭುತ್ವದ ಆಳ್ವಿಕೆಯ ಕಾಲದಲ್ಲಿ ಯುದ್ಧದ ರಕ್ತ-ಸಿಕ್ತ ಪರಿಸ್ಥಿತಿಯ ಅರಿವೇ ಇಲ್ಲದ ಒಂದು ವರ್ಗ ಎಲ್ಲೋ ಒಂದು ಮೂಲೆಯಲ್ಲಿ ಕುಳಿತುಕೊಂಡು ಯುದ್ಧದಲ್ಲಿ ಗೆದ್ದರೆ ವಿಜಯಲಕ್ಷ್ಮಿ ಒಲಿಯುತ್ತಾಳೆ, ಸೋತು ಸತ್ತರೆ ಸುರಾಂಗನೆಯರು ಸ್ವರ್ಗಕ್ಕೆ ಎತ್ತುಕೊಂಡು ಹೋಗುತ್ತಾರೆ ಎಂದು ಬರೆಯುತ್ತಿದ್ದರು. ಯುದ್ಧಕ್ಕೆ ಪ್ರಚೋದಿಸಲೂ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದರು. ಆದರೆ, ಯದ್ಧದ ಸಾವು-ನೋವಿನ ಅರಿವಿದ್ದ ತಳ ಸಮುದಾಯದ ಬಡವರ್ಗದ ತಾಯಂದಿರ ಆಕ್ರಂದನ ಮಾತ್ರ ಯಾರಿಗೂ ತಿಳಿಯುತ್ತಿರಲಿಲ್ಲ ಎಂದು ತಿಳಿಸಿದರು.
    ಪುರುಷ ಪ್ರಧಾನ ವ್ಯವಸ್ಥೆ ಮತ್ತು ಸನಾತನ ಧರ್ಮ ಮೂರು ವರ್ಗದ ಮಹಿಳೆಯರನ್ನು ಸೃಷ್ಟಿಸಿದೆ. ಮಹಿಳೆಗೆ ದೇವತೆಯ ರೂಪಕೊಟ್ಟು ಭಾವಚಿತ್ರವನ್ನು ಗೋಡೆಗೆ ಮೊಳೆ ಹೊಡೆದು ನೇತುಹಾಕಿದ್ದಾರೆ. ಬಹುತೇಕ ಮಹಿಳೆಯರನ್ನು ಪತಿಭಕ್ತೆಯಾಗಿ ಪರಿವರ್ತಿಸಿದ್ದಾರೆ. ಪ್ರಶ್ನೆ ಮಾಡುವ ಮಹಿಳೆಯರನ್ನು ರಾಕ್ಷಸಿ ಪಟ್ಟಕಟ್ಟಿ ಅಪಮಾನಿಸಲಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
    ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಕೃಪಾ ಫಡ್ಕೆ, ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ (ಅಧಿಕ ಪ್ರಭಾರ) ರೇಖಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts