More

    ಪಕ್ಷದ್ರೋಹಿ ಲಕ್ಷ್ಮಣ ಸವದಿಗೆ ಬುದ್ಧಿ ಕಲಿಸಿ

    ಅಥಣಿ: ಬಿಜೆಪಿ ತತ್ವ, ಸಿದ್ಧಾಂತಕ್ಕೆ ದ್ರೋಹ ಬಗೆದಿರುವ ಲಕ್ಷ್ಮಣ ಸವದಿಗೆ ಮತದಾರರು ಬುದ್ಧಿ ಕಲಿಸಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರನ್ನು ಗೆಲ್ಲಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಮನವಿ ಮಾಡಿದರು.

    ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದರು.

    ಕರ್ನಾಟಕದ ಚುನಾವಣೆ ಒಂದೆಡೆಯಾದರೆ ಅಥಣಿ ಕ್ಷೇತ್ರ ಅತ್ಯಂತ ವಿಶೇಷ. ಸ್ವಾರ್ಥಕ್ಕಾಗಿ ಪಕ್ಷದ್ರೋಹ ಎಸಗಿರುವ ಸವದಿಗೆ ಜನರು ತಕ್ಕಪಾಠ ಕಲಿಸಬೇಕು. 2018ರಲ್ಲಿ ಸೋತು ಮನೆಯಲ್ಲಿ ಕುಳಿತಿದ್ದ ಸವದಿಗೆ ಡಿಸಿಎಂ, ಸಾರಿಗೆ ಸಚಿವ ಮತ್ತು ಎಂಎಲ್‌ಸಿ ಮಾಡಲಾಗಿತ್ತು. ಎಲ್ಲವನ್ನೂ ಧಿಕ್ಕರಿಸಿ ಹಿಂದುತ್ವ ವಿರೋಧಿ ಗುಂಪಿನಲ್ಲಿ ಸೇರಿರುವುದು ಎಷ್ಟು ಸರಿ ಎಂದು ಲೇವಡಿ ಮಾಡಿದರು.

    ಲಿಂಗಾಯತರಿಗೆ, ದಲಿತರಿಗೆ, ಮುಸ್ಲಿಮರಿಗೆ ಅನ್ಯಾಯ ಮಾಡುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಸವದಿ ಹಗಲುಗನಸು ಕಾಣುತ್ತಿದ್ದಾರೆ. ನನ್ನ ಹತ್ತಿರ ಅನೇಕ ಸಲ ಬಂದು ಕೃಷ್ಣ, ಕಾವೇರಿ, ಮಹದಾಯಿ, ಕಳಸಾ-ಬಂಡೂರಿ ನೀರಾವರಿ ಯೋಜನೆಗಳ ಕುರಿತು ಚರ್ಚಿಸುತ್ತಿದ್ದ ಸವದಿ ಇನ್ನು ಯಾರ ಮುಂದೆ ಚರ್ಚಿಸುತ್ತಾರೆ ಎಂಬುದನ್ನು ನಾನೂ ನೋಡುತ್ತೇನೆ ಎಂದರು. ನಮ್ಮ ಜತೆಗೆ ಮಹೇಶ ಕುಮಠಳ್ಳಿ, ರಮೇಶ ಜಾರಕಿಹೊಳಿ ಇದ್ದಾರೆ. ಅಥಣಿ, ಕಾಗವಾಡ, ಗೋಕಾಕ ಸೇರಿ ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ಅಥಣಿ ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಅವ್ಯವಹಾರವನ್ನು ಸಿಬಿಐ ತನಿಖೆ ಮಾಡಿಸಬೇಕು. ಬಿಡಿಸಿಸಿ ಬ್ಯಾಂಕ್ ಸೂಪರ್‌ಸೀಡ್ ಮಾಡಿ ಹೊಸ ಆಡಳಿತ ಮಂಡಳಿ ರಚಿಸಿ ಸವದಿಯನ್ನು ಹೊರಹಾಕಲಾಗುವುದು. ಅನ್ಯಾಯ ಆಗಿದ್ದು ನಮಗೆ ಹೊರತು ಆತನಿಗಲ್ಲ. ಜನರ ಮುಂದೆ ತನಗೆ ಅನ್ಯಾಯವಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅಥಣಿಯನ್ನು ಗೋಕಾಕ ಮಾಡಲು ನಾನು ಬಂದಿಲ್ಲ. ಖಿಳೇಗಾವಿ ಬಸವೇಶ್ವರ ಮತ್ತು ಕೊಟ್ಟಲಗಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವುದು ನನ್ನ ಗುರಿ. ಅದಕ್ಕಾಗಿ ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ ಅವರನ್ನು ಜನರು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

    ಶಾಸಕರಾದ ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ ಮಾತನಾಡಿ, ಮೋದಿ ಅವರನ್ನು ಹಾಡಿ ಹೊಗಳುತ್ತಿದ್ದ ವ್ಯಕ್ತಿ ಇಂದು ಟಿಕೆಟ್ ಸಿಗದೆ ಕಾರಣ ಪಕ್ಷ ತೊರೆದಿರುವುದು ಅವರ ತಪ್ಪು ನಿರ್ಧಾರ. ಬಿಜೆಪಿ ಎಂದರೆ ತಾಯಿ ಸಮಾನ ಎನ್ನುತ್ತಿದ್ದ ಸವದಿ ತಾಯಿಗೆ ದ್ರೋಹ ಮಾಡಿ ಹೋಗಿದ್ದಾರೆ. ಜನರ ಪರವಾಗಿರುವ ನಮಗೆ ಮತ ನೀಡಬೇಕು ಎಂದು ಕೋರಿದರು. ಅಮಿತ ಷಾ ಅವರಿಗೆ ಹನುಮಾನ ಮೂರ್ತಿ ನೀಡಿ ಸತ್ಕರಿಸಲಾಯಿತು. ಮುಖಂಡರಾದ ಉಮೇಶರಾವ ಬಂಟೋಡ್ಕರ, ವಿಜಯಕುಮಾರ ಕುಡಿಗನೂರ, ಗಿರೀಶ ಬುಟಾಳೆ, ಸಿದ್ದಪ್ಪ ಮುದಕಣ್ಣವರ, ಧರೆಪ್ಪ ಠಕ್ಕಣ್ಣವರ, ಸತ್ಯಪ್ಪ ಬಾಗೆನ್ನವರ, ಅಪ್ಪಾಸಾಬ ಅವತಾಡೆ, ಚಂದ್ರಶೇಖರ ಕವಟಗಿ, ರವಿ ಸಂಕ, ಪ್ರಭಾಕರ ಚವ್ಹಾಣ, ಮುರುಘೇಶ ಕುಮಠಳ್ಳಿ ಮತ್ತಿತರರು ಇದ್ದರು.

    ರಾಹುಲ ಬಾಬಾ ಜನರು ನಿಮ್ಮ ಗ್ಯಾರಂಟಿ ಕಾರ್ಡ್ ನಂಬುವುದಿಲ್ಲ. ನಿಮ್ಮ ಪಕ್ಷ ಎಲ್ಲೆಡೆ ನೆಲಕಚ್ಚಿದೆ. ಕರ್ನಾಟಕದಲ್ಲಿ ಗ್ಯಾರಂಟಿ ಕಾರ್ಡ್ ನಡೆಯುವುದಿಲ್ಲ. ಈ ನೆಲದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗ್ಯಾರಂಟಿಯನ್ನು ಜನರು ನಂಬುತ್ತಾರೆ.
    | ಅಮಿತ್ ಷಾ ಕೇಂದ್ರ ಗೃಹ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts