ಬೆಂಗಳೂರು-ಚೆನ್ನೈ ಮಾರ್ಗದಲ್ಲಿ 1ರಿಂದ 2ಗಂಟೆ ತಡವಾಗಿ ಸಂಚರಿಸಿದ ರೈಲುಗಳು..ಕಾರಣ ಇಲ್ಲಿದೆ ನೋಡಿ..

vande bharath in devanagondhi
Published on

ಬೆಂಗಳೂರು: ರಾಜ್ಯದಲ್ಲೇ ಹೆಚ್ಚು ರೈಲುಗಳು ಸಂಚರಿಸುವ ಬೆಂಗಳೂರು-ಚೆನ್ನೈ ಮಾರ್ಗದ ವೈಟ್ಫೀಲ್ಡ್ ಬಳಿ ರೈಲು ಹಳಿಗಳಲ್ಲಿ ಸಮಸ್ಯೆ ಕಂಡುಬಂದ ಕಾರಣ ಚೆನ್ನೈ, ತಿರುಪತಿ ಸೇರಿದಂತೆ ಕೇರಳ, ತಮಿಳುನಾಡು, ಆಂಧ್ರದ ನಾನಾ ಕಡೆ ಸಂಚರಿಸುವ ರೈಲುಗಳ ವೇಳೆಯಲ್ಲಿ ವ್ಯತ್ಯಾಸವಾಗಿತ್ತು.

ಬೆಳಗ್ಗೆ ೯.೩೦ರಿಂದ ೧೦.೩೦ರವರೆಗೆ ಸಮಸ್ಯೆ ಕಂಡುಬಂದಿದ್ದು, ಬಳಿಕ ಸಿಬ್ಬಂದಿ ಸರಿಪಡಿಸಿದ ನಂತರ ಸಮಸ್ಯೆ ಬಗೆಹರಿಯಿತು. ಅಲ್ಲಿ ತನಕ ಬೆಂಗಳೂರಿನಿಂದ ಬಂಗಾರಪೇಟೆ ತನಕ ಸ್ಥಳೀಯ ರೈಲುಗಳಷ್ಟೇ ಅಲ್ಲದೆ ಎಕ್ಸ್​ಪ್ರೆಸ್​, ಸೂಪರ್​ ಫಾಸ್ಟ್​ ಮತ್ತು ವಂದೇಭಾರತ್​ ರೈಲು ಸಹ ನಿಂತಲ್ಲೇ ನಿಲ್ಲಬೇಕಾಯಿತು.

ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಸಂಚರಿಸುವ ವಂದೇಭಾರತ್​ ರೈಲು ಮಾಲೂರು-ವೈಟ್​ಫೀಲ್ಡ್​ ನಡುವಿನ ದೇವನಗೊಂದಿ ನಿಲ್ದಾಣದಲ್ಲಿ 1ಗಂಟೆಗೂ ಹೆಚ್ಚು ಸಮಯ ನಿಲಗಡೆಯಾಗಿತ್ತು. ಚೆನ್ನೈ ಕಡೆಯಿಂದ ಬಂದ ಈ ರೈಲು ಬೆಂಗಳೂರಿನಿಂದ ಚೆನ್ನೈ ಕಡೆ ತೆರಳುವ ರೈಲುಗಳಿಗೆ ನಿಗದಿಪಡಿಸಿರುವ ಮಾರ್ಗದಲ್ಲಿ ಅನಿವಾರ್ವವಾಗಿ ನಿಂತಿದ್ದು, ಮಾರ್ಗದ ಸಮಸ್ಯೆಯ ತೀವ್ರತೆ ಸೂಚಿಸುತ್ತಿತ್ತು.

ವಂದೇ ಭಾರತ್ ಅಷ್ಟೇ ಅಲ್ಲದೆ, ಬಂಗಾರಪೇಟೆ, ಕುಪ್ಪಂ, ಮಾರಿಕುಪ್ಪಂ(ಕೆಜಿಎಫ್​), ಕೋಲಾರ, ಜಾಲಾರಪೇಟೆ ಮತ್ತು ಬೆಂಗಳೂರು ಕಡೆ ನಿತ್ಯ ಸಂಚರಿಸುವ ಸಹಸ್ರಾರು ಪ್ರಯಾಣಿಕರು, ಉದ್ಯೋಗಿಗಳು ಪರದಾಡುವಂತಾಯಿತು.

ರೈಲುಗಳು ೧ರಿಂದ 2 ಗಂಟೆಗೂ ಹೆಚ್ಚು ಸಮಯ ವಿವಿಧ ನಿಲ್ದಾಣಗಳಲ್ಲಿ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು. ವಂದೇ ಭಾರತ್​ ಸೇರಿದಂತೆ ತಮಿಳುನಾಡು, ಆಂಧ್ರ ಮತ್ತು ಕೇರಳಕ್ಕೆ ಸಂಚರಿಸುವ ಎಕ್ಸ್​ಪ್ರೆಸ್​ ರೈಲುಗಳಿಗೆ ಗ್ರೀನ್​ ಸಿಗ್ನಲ್​ ಕೊಟ್ಟು ಉದ್ಯೋಗಿಳೇ ಹೆಚ್ಚಾಗಿ ಪ್ರಯಾಣಿಸುವ ಮಾರಿಕುಪ್ಪಂ(ಕೆಜಿಎಫ್​)ನಿಂದ ಬೆಂಗಳೂರಿಗೆ 10ಗಂಟೆಗೆ ಬರಬೇಕಾದ ರೈಲನ್ನು ನಿತ್ಯ 10.30ಗಂಟೆ, 11ಗಂಟೆಗೆ ಬರುವಂತೆ ಮಾಡುತ್ತಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೋಲಾರ ಜಿಲ್ಲೆಯ ನಿತ್ಯ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net