More

    ಹಿಂದುಳಿದ ವರ್ಗಗಳ ದೇಗುಲಗಳ ಅರ್ಚಕರಿಗೆ ತರಬೇತಿ; ಸೆ.17ಕ್ಕೆ ಕವಲಗುಡ್ಡ ಮಠದಲ್ಲಿ ಆರಂಭ: ಶ್ರೀ ಅಮರೇಶ್ವರ ಸ್ವಾಮೀಜಿ

    ಶಿವಮೊಗ್ಗ: ಹಿಂದುಳಿದ ವರ್ಗಗಳ ದೇವಸ್ಥಾನಗಳ ಅರ್ಚಕರ ಜ್ಞಾನ ವೃದ್ಧಿಗೆ ಬದಲಾವಣೆ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಅರ್ಚಕರಿಗೆ ತರಬೇತಿ ನೀಡಲು ಶಾಲೆ ತೆರೆಯಲಾಗುವುದು ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಕವಲುಗುಡ್ಡ ಮಠದ ಶ್ರೀ ಅಮರೇಶ್ವರ ಸ್ವಾಮೀಜಿ ತಿಳಿಸಿದರು.

    ಗೋಂದಿಚಟ್ನಹಳ್ಳಿಯ ಪೇಸ್ ಕಾಲೇಜಿನಲ್ಲಿ ಭಾನುವಾರ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳ ರಾಜ್ಯ ಮಟ್ಟದ ಧಾರ್ಮಿಕ ಮುಖಂಡರ ಸಮಾವೇಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
    ಹಿಂದುಳಿದ ದೇವಸ್ಥಾನಗಳಲ್ಲೂ ವೇದೋಕ್ತವಾಗಿ ಪೂಜೆ ಪುನಸ್ಕಾರಗಳು ನಡೆಯಬೇಕಿದೆ. ಭಕ್ತರು ದೇವಸ್ಥಾನಗಳಿಗೆ ಬಂದಾಗ ದೈವೀ ಭಾವನೆ ಬರಲು ಆಚಾರ-ವಿಚಾರ ಅಗತ್ಯ. ಹಾಗಾಗಿ ಸೆ.17ರಂದು ಕವಲುಗಡ್ಡ ಮಠದಲ್ಲಿ ಅರ್ಚಕ ತರಬೇತಿ ಶಿಬಿರದ ಶಾಲೆ ತೆರೆಯಲಾಗುವುದು ಎಂದರು.
    ಯಾವುದೇ ಶುಭ ಕಾರ್ಯದಲ್ಲಿ ಅರ್ಚಕರ ಪಾತ್ರ ಮಹತ್ವದ್ದಾಗಿದೆ. ವೇದ, ಉಪನಿಷತ್, ಶ್ಲೋಕ, ಮಂತ್ರಗಳನ್ನು ಹೇಳುವುದರಲ್ಲಿ ಕ್ರಮಬದ್ಧತೆ ಬೇಕು. ಆದರೆ ಈಗಿನ ವ್ಯವಸ್ಥೆ ದಾರಿ ತಪ್ಪುತ್ತಿದ್ದು ದೇವಾಲಯಗಳಲ್ಲಿ ವ್ಯವಸ್ಥಿತ ಪೂಜೆ, ಪುನಸ್ಕಾರ ನಡೆಸುವ ಶಿಸ್ತು ಹಾಗೂ ಪದ್ಧತಿಯನ್ನು ಅರ್ಚಕರಿಗೆ ಶಿಬಿರದಲ್ಲಿ ಕಲಿಸಲಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಹಿಂದುಳಿದ ದೇವಾಲಯದ ಧರ್ಮದರ್ಶಿಗಳು ತಮ್ಮ ದೇವಾಲಯದ ಅರ್ಚಕರನ್ನು ಈ ಶಿಬಿರಕ್ಕೆ ಹಾಜರಿರಲು ಸೂಚಿಸಬೇಕಿದೆ ಎಂದು ಮನವಿ ಮಾಡಿದರು.
    ಒಂದು ಬ್ಯಾಚ್‌ನಲ್ಲಿ 40 ಮಂದಿ: ಒಂದು ಬ್ಯಾಚ್‌ನಲ್ಲಿ 40 ಅರ್ಚಕರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಕ್ರಮ ಕೈಗೊಳ್ಳಲಾಗುತ್ತದೆ. ಹಿಂದುಳಿದ ವರ್ಗಗಳ ದೇವಸ್ಥಾನಗಳಲ್ಲಿ ಹಸ್ತಕ್ಷೇಪ ಮಾಡದಂತೆ ಒತ್ತಾಯಿಸಲಾಗುತ್ತದೆ. ಹಿಂದುಳಿದ ಮತ್ತು ಎಸ್ಸಿ, ಎಸ್ಟಿ ಸಮುದಾಯದ ಮಠಗಳಲ್ಲಿ ವೇದೋಕ್ತವಾಗಿ ಪೂಜೆ-ಪುನಸ್ಕಾರ ನಡೆಸಲು ಈ ಶಿಬಿರ ಬಹಳ ಮುಖ್ಯವಾಗಿದೆ ಎಂದು ಶ್ರೀ ಅಮರೇಶ್ವರ ಸ್ವಾಮೀಜಿ ಹೇಳಿದರು.
    ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಎಸ್.ರಾಮಪ್ಪ, ಶಿವಗಂಗೆಯ ಮಹಾಲಕ್ಷ್ಮೀ ತಿಗಳರ ಮಹಾಸಂಸ್ಥಾನ ಪೀಠದ ಶ್ರೀ ಜ್ಞಾನಾನಂದಪುರಿ ಸ್ವಾಮೀಜಿ, ರಾಯಭಾಗದ ಪ್ರಭು ರಾಮಸೇವಾ ಆಶ್ರಮದ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಹುಣಸೂರಿನ ಚೋಳನಹಳ್ಳಿ ಗುರುಕುಲ ಆಶ್ರಮದ ಶ್ರೀ ನಿಜಗುಣ ಒಡೆಯರ್, ಮೈಸೂರು ಮುಕ್ಕಣ್ಣೇಶ್ವರ ಸ್ವಾಮಿ ಮಠದ ಶ್ರೀ, ಕಲಬುರಗಿಯ ಶ್ರೀಶೈಲ ಮಹಾಮಠ, ಹುಣಸೂರಿನ ಶ್ರೀ ಗುರು ಮುಕ್ಕಣೇಶ್ವರ ಗುರುಕುಲ ಆಶ್ರಮದ ಸ್ವಾಮೀಜಿ, ಅಥಣಿಯ ಬನಸಿದ್ದೇಶ್ವರ ಸಿದ್ದಾಶ್ರಮದ ಸ್ವಾಮೀಜಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts