More

    ಸಾರಿಗೆ ನಿಯಮಗಳನ್ನು ಪಾಲಿಸುವುದು ಅಗತ್ಯ

    ಹುಬ್ಬಳ್ಳಿ : ಮಾನವನ ಜೀವ ಅತ್ಯಮೂಲ್ಯವಾದುದ್ದು. ಸಣ್ಣ ಪುಟ್ಟ ತಪ್ಪುಗಳಿಂದ ಅಪಘಾತಗಳು ಸಂಭವಿಸಬಹುದು. ನಮ್ಮವರಿಗಾಗಿ ನಾವು ಅತಿ ಸುರಕ್ಷತೆಯಿಂದ ವಾಹನ ಚಲಾಯಿಸಬೇಕು. ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವುದು ಅಗತ್ಯ ಎಂದು ಡಿಸಿಪಿ ರವೀಶ ಸಿ.ಆರ್ ಹೇಳಿದರು.

    ಇಲ್ಲಿನ ಕಿಮ್ಸ್ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಹುಬ್ಬಳ್ಳಿಯ ಭಾರತೀಯ ವೖದ್ಯಕೀಯ ಸಂಘಗಳ ಸಹಯೋಗದೊಂದಿಗೆ ‘ರಸ್ತೆ ಸುರಕ್ಷತೆ ನಮ್ಮ ಮೊದಲ ಆದ್ಯತೆ’ ಎಂಬ ಧ್ಯೇಯ ವಾಕ್ಯದಡಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಉದ್ಘಾಟನಾ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

    ಹುಬ್ಬಳ್ಳಿ- ಧಾರವಾಡ ವ್ಯಾಪ್ತಿಯಲ್ಲಿ ಕಳೆದ ವರ್ಷದಲ್ಲಿ 109 ಜನರು ಅಪಘಾತಗಳಲ್ಲಿ ಮರಣ ಹೊಂದಿದ್ದಾರೆ. ನಮ್ಮ ಜವಾಬ್ದಾರಿ ಅರಿತುಕೊಂಡು ಜೀವನ ನಡೆಸಬೇಕು. ನಮ್ಮನ್ನು ನಂಬಿದವರಿಗೆ ದುಃಖ ತರುವ ಕೆಲಸ ಕಾರ್ಯಗಳಿಗೆ ಮುಂದಾಗಬಾರದು. ಹೆತ್ತ ತಂದೆ , ತಾಯಿ, ಗುರುಗಳಿಗೆ ಗೌರವ ತರುವ ಕೆಲಸ ಮಾಡಲು ಅಣಿಯಾಗಬೇಕು ಎಂದು ಸಲಹೆ ನೀಡಿದರು.

    ಕಿಮ್ಸ್ ಪ್ರಾಚಾರ್ಯ ಡಾ.ಈಶ್ವರ ಹೊಸಮನಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಅಗತ್ಯ ಕ್ರಮ ಅನುಸರಿಸಬೇಕು. ಮಾನವನ ಜೀವ ಅತ್ಯಮೂಲ್ಯವಾಗಿರುವುದರಿಂದ ಅದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

    ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ಮಾತನಾಡಿ, ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಾಹನ ಚಾಲನೆ ಸಂದರ್ಭದಲ್ಲಿ ನಿಮ್ಮ ಬಗ್ಗೆ ನಿಮಗೆ ಅರಿವು ಇರಬೇಕು, ಬೇರೆ ವಾಹನಗಳ ಬಗ್ಗೆ ಸಹ ಅರಿತುಕೊಳ್ಳಬೇಕು ಹಾಗೂ ನಿಮ್ಮ ವಾಹನದ ಸ್ಥಿತಿಗತಿ ಬಗ್ಗೆ ಮಾಹಿತಿ ಹೊಂದಬೇಕು ಎಂದು ತಿಳಿಸಿದರು.

    ಜಂಟಿ ಸಾರಿಗೆ ಆಯುಕ್ತ ಓಂಕಾರೇಶ್ವರಿ ಎಂ.ಪಿ. ಮಾತನಾಡಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

    ರಸ್ತೆ ಸುರಕ್ಷತಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ರಸ್ತೆ ಸುರಕ್ಷತೆಯ ಕರಪತ್ರ ಹಾಗೂ ಸ್ಟಿಕರ್​ಗಳನ್ನು ಬಿಡುಗಡೆ ಮಾಡಲಾಯಿತು. ಕಿಮ್ಸ್ ನ ಮುಖ್ಯ ಆಡಳಿತಾಧಿಕಾರಿ ಶಿವಾನಂದ ಭಜಂತ್ರಿ, ಐಎಂಎ ಅಧ್ಯಕ್ಷ ಡಾ.ವೆಂಕಟೇಶ ಮೂಲಿಮನಿ, ಐಎಂ.ಎ ಮಹಿಳಾ ವೈದ್ಯರ ಶಾಖೆಯ ಅಧ್ಯಕ್ಷೆ ಡಾ.ಭಾರತಿ ಭಾವಿಕಟ್ಟಿ, ಕಾರ್ಯದರ್ಶಿಗಳಾದ ಡಾ.ಆನಂದ ವಮಾ, ಡಾ.ಆಶಾ ಪಾಟೀಲ, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಭೀಮನಗೌಡ ಪಾಟೀಲ, ಕೆ. ದಾಮೋದರ ಹಾತಗೂ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts