More

    ಶನಿವಾರಸಂತೆಯಲ್ಲಿ ಟ್ರಾಫಿಕ್ ಸಮಸ್ಯೆ

    ಶನಿವಾರಸಂತೆ: ಕೊಡಗು-ಹಾಸನದ ಗಡಿಭಾಗದಲ್ಲಿರುವ ಶನಿವಾರಸಂತೆ ಹೋಬಳಿ ಕೇಂದ್ರವಾಗಿದ್ದು, ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ.

    ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಅರಕಲಗೂಡು ವ್ಯಾಪ್ತಿಯ ಜನರು ನಿತ್ಯ ವಾಹನಗಳಲ್ಲಿ ಇಲ್ಲಿಗೆ ಬರುವುದು ಅನಿವಾರ್ಯ. ಇದರಿಂದಾಗಿ ಪಟ್ಟಣ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಜತೆಗೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.

    ಪಟ್ಟಣದ ಮುಖ್ಯ ರಸ್ತೆ ಬದಿಯಲ್ಲಿ ಅಂಗಡಿ, ಮುಂಗಟ್ಟು, ಹೋಟೆಲ್‌ಗಳು, ಶಾಫಿಂಗ್ ಕಾಂಪ್ಲೆಕ್ಸ್‌ಗಳು, ಕಟ್ಟಡಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಮುಖ್ಯ ರಸ್ತೆ ಅತ್ಯಂತ ಇಕ್ಕಟ್ಟಾಗಿರುವುದರಿಂದ ಸಹಜವಾಗಿ ವಾಹನಗಳ ದಟ್ಟಣೆ ಹೆಚ್ಚಿದೆ. ರಸ್ತೆಯ ಎರಡೂ ಬದಿಗಳಲ್ಲಿ ಕಾರು, ಜೀಪು, ಬೈಕ್, ಬಸ್ ಮುಂತಾದ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಪಟ್ಟಣದಲ್ಲಿನ ಮಧ್ಯಪೇಟೆಯಲ್ಲಿರುವ ಯೂನಿಯನ್ ಬ್ಯಾಂಕ್ ಸಮೀಪ ಮತ್ತು ಕೆಆರ್‌ಸಿ ವೃತ್ತದಲ್ಲಿ ಟ್ರಾಪಿಕ್ ಸಮಸ್ಯೆ ಹೆಚ್ಚಾಗಿದೆ. ಈ ಹಿಂದೆ ಪೊಲೀಸರು ವಾಹನಗಳನ್ನು ತಿಂಗಳಲ್ಲಿ 15 ದಿನ ಎಡ ಬದಿ, 15 ದಿನ ಬಲ ಬದಿಯಲ್ಲಿ ವಾಹನ ನಿಲುಗಡೆ ಮಾಡಲು ವ್ಯವಸ್ಥೆ ಮಾಡಿದ್ದರು. ಇದರಿಂದಾಗಿ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಕೊಂಚ ಕಡಿಮೆಯಾಗಿತ್ತು.

    ಈ ಹಿಂದೆ ಇದ್ದ ನಿಯಮವನ್ನು ವಾಹನ ಸವಾರರು ಗಾಳಿಗೆ ತೂರಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಇದರಿಂದ ದೊಡ್ಡ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ಈ ನಡುವೆ ಪಟ್ಟಣದ ಕೆಆರ್‌ಸಿ ವೃತ್ತದಲ್ಲಂತೂ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ನಿತ್ಯ 40ಕ್ಕಿಂತ ಹೆಚ್ಚು ಕೆಎಸ್‌ಆರ್‌ಟಿ ಬಸ್‌ಗಳು ಬೆಂಗಳೂರು, ಮಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ದಾವಣಗೆರೆ, ತುಮಕೂರು ಸೇರಿದಂತೆ ಮುಂತಾದ ಕಡೆಗಳಿಗೆ ಶನಿವಾರಸಂತೆ ಮೂಲಕ ಸಂಚರಿಸುತ್ತವೆ. ಇದರೊಂದಿಗೆ 20ಕ್ಕೂ ಹೆಚ್ಚು ಖಾಸಗಿ ಬಸ್‌ಗಳ ಓಡಾಟವಿದೆ. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ನಿಲುಗಡೆಗೆ ನಿಲ್ದಾಣ ವ್ಯವಸ್ಥೆ ಇಲ್ಲದೆ ಕಾರಣ ಬಸ್‌ಗಳನ್ನು ಒಂದೇ ಕಡೆ ನಿಲುಗಡೆ ಮಾಡುವಂತಾಗಿದೆ. ಇದರೊಂದಿಗೆ ರಸ್ತೆಯ ಎರಡೂ ಬದಿಯಲ್ಲಿ ಕಾರು, ಜೀಪು, ದ್ವಿಚಕ್ರವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದೆ.

    ಶನಿವಾರಸಂತೆ ದಿನವಾಗಿದ್ದು ವಾಹನಗಳ ದಟ್ಟಣೆಯಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಅಂದು ಒನ್‌ವೇ ಸಂಚಾರ ನಿಯಮವಿದ್ದರೂ ವಾಹನ ಸವಾರರು ನಿಯಮ ಉಲ್ಲಂಘಿಸುವುದು ಸಾಮಾನ್ಯವಾಗಿದೆ. ಕೆಆರ್‌ಸಿ ವೃತ್ತದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ವಾಹನಗಳ ದಟ್ಟಣೆಯನ್ನು ನೋಡದಂತೆ ಸುಮ್ಮನಾಗುತ್ತಾರೆ. ಇದರಿಂದ ವಾಹನ ಸವಾರರು ನಿಯಮ ಗಾಳಿಗೆ ತೂರಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ.

    ಪಟ್ಟಣದಾದ್ಯಂತ ವಾಹನಗಳನ್ನು ಎಲ್ಲೆಂದರಲ್ಲಿ ನಿಲುಗಡೆ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುವುದರೊಂದಿಗೆ ವರ್ತಕರ ವ್ಯಾಪಾರ-ವಹಿವಾಟಿಗೂ ಅಡಚಣೆಯಾಗುತ್ತಿದೆ. ಕಾರು, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಕೆಆರ್‌ಸಿ ವೃತ್ತದಲ್ಲಿ ವಾಹನ ನಿಲ್ಲಿಸಲು ಪೊಲೀಸರು ವ್ಯವಸ್ಥೆ ಮಾಡಬೇಕು. ಆದರೆ ವ್ಯವಸ್ಥೆ ಇಲ್ಲದಿರುವುದರಿಂದ ಅಂಗಡಿ ಮತ್ತು ಹೋಟೆಲ್‌ಗಳ ಮುಂದೆ ನಿಲ್ಲುತ್ತಾರೆ.ಇದರಿಂದ ತೊಂದರೆಯಾಗುತ್ತಿದೆ ಎಂದು ಚಾಲಕ ಹರ್ಷ ವಿಜಯವಾಣಿಗೆ ತಿಳಿಸಿದರು.

    ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಈ ಹಿಂದೆ ತಿಂಗಳಲ್ಲಿ 15ದಿನ ಎಡ ಬದಿ ಮತ್ತು 15 ದಿನ ಬಲ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ಇದರಿಂದ ಸ್ವಲ್ಪಮಟ್ಟಿಗೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಿತ್ತು. ಪೊಲೀಸರು ಹಿಂದಿನ ಕ್ರಮವನ್ನು ಮುಂದುವರಿಸಬೇಕು. ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ದಂಡ ವಿಧಿಸಿದರೆ ಮಾತ್ರ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಬಹುದು.
    ನಟೇಶ್ ವರ್ತಕ, ಶನಿವಾರಸಂತೆ

    ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಬೈಪಾಸ್ ರಸ್ತೆ ಬದಿಯಲ್ಲಿ ಶನಿವಾರಹೊರತುಪಡಿಸಿದಂತೆ ಮಿಕ್ಕ ದಿನಗಳಲ್ಲಿ ಕಾರು, ಜೀಪು, ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ಪೊಲೀಸರು ಟ್ರಾಫಿಕ್ ಸಮಸ್ಯೆಯನ್ನು ಗಂಭೀರವಾಗಿವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕಿದೆ.
    ಸರ್ದಾರ್ ಅಹಮ್ಮದ್ ಅಧ್ಯಕ್ಷ ವರ್ತಕರ ಸಂಘ, ಶನಿವಾರಸಂತೆ

    ಪಟ್ಟಣದಲ್ಲಿ ಆಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಮಾರ್ಗೋಪಾಯ ಕುರಿತು ಶನಿವಾರಸಂತೆ ಗ್ರಾಪಂ ವತಿಯಿಂದ ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಯಾವ ಯಾವ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ ಟ್ರಾಫಿಕ್ ಸಮಸ್ಯೆ ಬಗೆಹರಿಸಬಹುದೆಂಬುದರ ಕುರಿತು ಮಾಹಿತಿ ನೀಡಲಾಗಿದೆ. ಈ ಸಂಬಂಧ ವರ್ಷದ ಹಿಂದೆ ಸಭೆ ನಡೆಸಲಾಗಿತ್ತು.
    ಗೀತಾ ಹರೀಶ್ ಅಧ್ಯಕ್ಷೆ, ಶನಿವಾರಸಂತೆ ಗ್ರಾಮ ಪಂಚಾಯಿತಿ

    ಪಟ್ಟಣದಲ್ಲಿನ ಟ್ರಾಫಿಕ್ ಸಮಸ್ಯೆ ಗಮನಕ್ಕೆ ಬಂದಿದೆ. ವಾಹನಗಳ ಓಡಾಟ ಹೆಚ್ಚಾಗಿದ್ದು, ನಿಲುಗಡೆಗೆ ಸ್ಥಳ ಕಡಿಮೆ ಇದೆ. ಟ್ರಾಫಿಕ್ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಬಹುದು ಎಂದು ಪರಿಶೀಲನೆ ಮಾಡಲಾಗುವುದು. ನಾನು ನೂತನವಾಗಿ ಈ ಠಾಣೆಗೆ ಬಂದಿರುವುದರಿಂದ ಪತ್ರ ವ್ಯವಹಾರ ಎಲ್ಲಿಯವರೆಗೆ ತಲುಪಿದೆ ಹಾಗೂ ಟ್ರಾಫಿಕ್ ಸಮಸ್ಯೆಗೆ ಕಾರಣ ಏನು ಎಂದು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು.
    ರವಿಶಂಕರ್ ಪಿಎಸ್‌ಐ ಶನಿವಾರಸಂತೆ ಠಾಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts