More

    ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಂ

    ಬೆಳ್ತಂಗಡಿ: ಮಂಗಳೂರು -ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟಿಯಲ್ಲಿ ಶುಕ್ರವಾರ ಬೆಳಗ್ಗೆ ವಾಹನ ದಟ್ಟಣೆಯಿಂದ ಪ್ರಯಾಣಿಕರು ಪರದಾಡಿದರು.

    ಚಾರ್ಮಾಡಿ ಘಾಟಿಯ 7ನೇ ತಿರುವಿನ ಸಮೀಪ, ಅಗಲ ಕಿರಿದಾದ ರಸ್ತೆ ಬದಿ ಲಾರಿ ಕೆಸರಲ್ಲಿ ಸಿಲುಕಿಕೊಂಡಿದ್ದುದು ಟ್ರಾಫಿಕ್ ಜಾಂಗೆ ಕಾರಣ. ಇದೇ ವೇಳೆ ವಾಹನಗಳು ಅಡ್ಡಾದಿಡ್ಡಿ ಚಲಿಸಿ 3 ತಾಸಿಗೂ ಅಧಿಕ ಕಾಲ ಟ್ರಾಫಿಕ್ ಜಾಂ ಏರ್ಪಟ್ಟಿತು. ಘಾಟಿ ರಸ್ತೆಯ ಎರಡು ಕಡೆ ಸುಮಾರು ನಾಲ್ಕರಿಂದ ಐದು ಕಿ.ಮೀ.ವರೆಗೆ ವಾಹನಗಳ ಸರದಿ ಕಂಡುಬಂತು.

    ಬಳಿಕ ಚಾರ್ಮಾಡಿ ಪೊಲೀಸ್ ಗೇಟ್‌ನಲ್ಲಿ ಕೊಟ್ಟಿಗೆಹಾರ ಕಡೆ ತೆರಳುವ ವಾಹನಗಳನ್ನು ತಡೆದು ಸರದಿ ಪ್ರಕಾರ ಬಿಡಲಾಯಿತು. ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಮಾರ್ಗದರ್ಶನದಲ್ಲಿ, ಧರ್ಮಸ್ಥಳ ಪಿಎಸ್‌ಐ ಕೃಷ್ಣಕಾಂತ್ ಅಯ್ಯಪ್ಪ ಪಾಟೀಲ್ ನಿರ್ದೇಶನದಲ್ಲಿ, ಸಮಾಜ ಸೇವಕ ಚಾರ್ಮಾಡಿ ಹಸನಬ್ಬರ ತಂಡ, ಪೊಲೀಸರು ಹಾಗೂ ಸ್ಥಳೀಯರು ಸೇರಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿ ಸಹಕರಿಸಿದರು.

    ಭಾರಿ ವಾಹನಗಳ ಸಂಚಾರ: ಕೊಟ್ಟಿಗೆಹಾರ ಮೂಲಕ ಭಾರಿ ಗಾತ್ರದ ಲಾರಿ, ಹೊರಜಿಲ್ಲೆಗಳಿಂದ ಉಜಿರೆ-ಮಂಗಳೂರು ಕಡೆ ಆಗಮಿಸುವ ಎಸಿ, ಸ್ಲೀಪರ್ ಬಸ್‌ಗಳು ಕೂಡ ಚಾರ್ಮಾಡಿ ಮೂಲಕ ಸಂಚರಿಸುತ್ತಿರುವುದು ಟ್ರಾಫಿಕ್ ಜಾಂ ಸಮಸ್ಯೆ ಬಿಗಡಾಯಿಸಲು ಕಾರಣವಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್, ಚಾರ್ಮಾಡಿ ಗೇಟ್‌ನಲ್ಲಿ ಕೊಟ್ಟಿಗೆಹಾರ ಭಾಗಕ್ಕೆ ಪ್ರಯಾಣಿಸಲು ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿಲ್ಲ. ಕೊಟ್ಟಿಗೆಹಾರ ಕಡೆಯಿಂದ ಕೆಲವು ಘನ ವಾಹನಗಳು ಸಂಚರಿಸಿರುವುದು ತಿಳಿದುಬಂದಿದೆ. ಈ ಬಗ್ಗೆ ಮೂಡಿಗೆರೆ ಠಾಣೆಯ ಅಧಿಕಾರಿಗಳಲ್ಲಿ ಚರ್ಚಿಸಿ ಸುಗಮ ವಾಹನ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts