More

    ದಸರಾಕ್ಕೆ ಪಾರಂಪರಿಕ ನಡಿಗೆ ಮೆರುಗು

    29ರಿಂದ ಮೂರು ದಿನ ಆಯೋಜನೆ

    ಸಾರ್ವಜನಿಕರು, ವಿದ್ಯಾರ್ಥಿಗಳು, ಪ್ರವಾಸಿಗರಿಗೆ ಮಾಹಿತಿ

    ಮೊದಲು ನೋಂದಣಿ ಮಾಡಿಸಿಕೊಂಡವರಿಗೆ ಅವಕಾಶ

    ಅವಿನಾಶ್ ಜೈನಹಳ್ಳಿ ಮೈಸೂರು
    ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಈ ಬಾರಿ ‘ಪಾರಂಪರಿಕ ನಡಿಗೆ’ ಮತ್ತಷ್ಟು ಮೆರುಗು ನೀಡಲಿದೆ.
    ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೂರು ದಿನಗಳ ಕಾಲ ‘ಪಾರಂಪರಿಕ ನಡಿಗೆ’ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿದೆ. ಈ ಮೂಲಕ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಲ್ಲಿ ಪಾರಂಪರಿಕ ಕಟ್ಟಡಗಳ ಅರಿವು, ಮಹತ್ವವನ್ನು ಸಾರಲಿದೆ. ಮುಖ್ಯವಾಗಿ ಮೈಸೂರಿನ ನೂರಾರು ವರ್ಷಗಳ ಹಳೆಯ ಕಟ್ಟಡಗಳು, ಅರಮನೆಗಳು, ಪಾರಂಪರಿಕ ಸ್ಮಾರಕಗಳ ಬಗ್ಗೆ ವಿದೇಶಿಗರಿಗೆ ತಿಳಿಯಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾರಂಪರಿಕ ನಗರಿ ಮೈಸೂರಿನ ಕೀರ್ತಿ ಇನ್ನಷ್ಟು ಹೆಚ್ಚಾಗಲಿದೆ.


    ಮಹಾಮಾರಿ ಕರೊನಾದಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ದಸರಾ ಮಹೋತ್ಸವಕ್ಕೆ ಈ ಬಾರಿ ಜೀವಕಳೆ ಬಂದಿದೆ. ಅಂತೆಯೆ, ದಸರಾ ಮಹೋತ್ಸವದ ಪ್ರಮುಖ ಕಾರ್ಯಗಳಲ್ಲಿ ಒಂದಾದ ‘ಪಾರಂಪರಿಕ ನಡಿಗೆ’ಯನ್ನು ಈ ಬಾರಿ ಎಂದಿನಂತೆ ಆಯೋಜಿಸಲು ಪುರಾತತ್ವ ಇಲಾಖೆ ಸಿದ್ಧತೆ ನಡೆಸುಸುತ್ತಿದೆ. ಸೆ. 29, 30 ಹಾಗೂ ಅ.1 ರಂದು ಕಾರ್ಯಕ್ರಮ ನಡೆಯಲಿದೆ.
    ಈ ಸಂಬಂಧ ಈಗಾಗಲೇ ಪುರಾತತ್ವ ಇಲಾಖೆಯ ಅಧಿಕಾರಿಗಳು ಮೈಸೂರಿನ ಇತಿಹಾಸ ತಜ್ಞರು, ನಿವೃತ್ತ ಪ್ರಾಧ್ಯಾಪಕರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಾರಂಪರಿಕ ನಡಿಗೆಯ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ. ಯಾವ ಯಾವ ಕಟ್ಟಡಗಳಿಗೆ ಭೇಟಿ ನೀಡಬೇಕು, ಯಾವ ಮಾರ್ಗದಲ್ಲಿ ತೆರಳಬೇಕು ಎಂಬುದು ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಿದ್ದಾರೆ.

    ಸೈಕಲ್, ಟಾಂಗಾ ಸವಾರಿ:
    ಮೊದಲ ದಿನವಾದ ಸೆ. 29ರಂದು ಟ್ರಿನ್ ಟ್ರಿನ್ ಮೂಲಕ ‘ಪಾರಂಪರಿಕ ಸೈಕಲ್ ಸವಾರಿ’ ನಡೆಯಲಿದೆ. 15ರಿಂದ 60 ವರ್ಷದೊಳಗಿನ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಮೊದಲು ನೋಂದಣಿ ಮಾಡಿಕೊಂಡ 100 ಜನ ಆಸಕ್ತರಿಗೆ ಟ್ರಿನ್ ಟ್ರಿನ್ ಸೈಕಲ್ ನೀಡಲಾಗುತ್ತದೆ.
    ಎರಡನೇ ದಿನವಾದ ಸೆ. 30ರಂದು ‘ಪಾರಂಪರಿಕ ಟಾಂಗಾ ಸವಾರಿ’ ನಡೆಯಲಿದೆ. ಅಂದು ಪಾರಂಪರಿಕ ಉಡುಗೆಯಲ್ಲಿ ದಂಪತಿಗಳು ಪಾರಂಪರಿಕ ಟಾಂಗಾ ಸವಾರಿ ಮಾಡಬಹುದಾಗಿದೆ. ಮೊದಲು ನೋಂದಣಿ ಮಾಡಿಕೊಂಡ 55 ಜೋಡಿಗಳಿಗೆ ಮಾತ್ರ ಅವಕಾಶ.


    ಮೂರನೇ ದಿನವಾದ ಅ. 1ರಂದು ‘ಪಾರಂಪರಿಕ ನಡಿಗೆ’ ನಡೆಯಲಿದೆ. 18ರಿಂದ 60 ವರ್ಷದೊಳಗಿನ ಎಲ್ಲರೂ ಭಾಗವಹಿಸಬಹುದು. ಮೊದಲು ನೋಂದಣಿ ಮಾಡಿಕೊಂಡ 100 ಜನರಿಗೆ ಅವಕಾಶ ಸಿಗಲಿದೆ.
    ಈ ಎಲ್ಲ ಕಾರ್ಯಕ್ರಮಗಳು ಪ್ರತಿದಿನ ಬೆಳಗ್ಗೆ 7ಕ್ಕೆ ಪುರಭವನದಿಂದ ಆರಂಭವಾಗಲಿವೆ. ಭಾಗಿಯಾಗುವ ಎಲ್ಲರಿಗೂ ಮೈಸೂರಿನ ಇತಿಹಾಸ ತಜ್ಞರು ಪ್ರತಿಯೊಂದು ಪಾರಂಪರಿಕ ಕಟ್ಟಡಗಳ ಹಿನ್ನೆಲೆ, ಪ್ರಾಮುಖ್ಯತೆ ಹಾಗೂ ವಾಸ್ತುಶಿಲ್ಪ ಶೈಲಿಯ ಮಹತ್ವ ತಿಳಿಸಿಕೊಡಲಿದ್ದಾರೆ. ಆಸಕ್ತರು ಮೈಸೂರಿನ ವಸ್ತುಪ್ರದರ್ಶನ ಆವರಣದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದು ಎಂದು ಉಪ ನಿರ್ದೇಶಕಿ ಡಾ.ಸಿ.ಎನ್.ಮಂಜುಳಾ ತಿಳಿಸಿದ್ದಾರೆ.

    ಕಟ್ಟಡಗಳ ಭೇಟಿ, ಮಾಹಿತಿ:
    ಪುರಭವನ, ಸಯ್ಯಜಿರಾವ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ, ದೊಡ್ಡಗಡಿಯಾರ, ಕೆ.ಆರ್.ಮಾರುಕಟ್ಟೆ, ಕೆ.ಆರ್.ಆಸ್ಪತ್ರೆ, ಮಹಾರಾಜ ಕಾಲೇಜು, ಜಿಲ್ಲಾಧಿಕಾರಿ ಕಚೇರಿ, ರೈಲ್ವೆ ನಿಲ್ದಾಣ, ಕ್ರಾಫರ್ಡ್ ಹಾಲ್, ಪರಕಾಲಮಠ, ಪದ್ಮಾಲಯ, ಮುಡಾ ವೃತ್ತ, ಕಾವಾ ಕಾಲೇಜಿನ ಹಳೇ ಕಟ್ಟಡ, ಫ್ರಿಮೇಷನ್ ಕ್ಲಬ್, ಚಾಮರಾಜೇಂದ್ರ ಒಡೆಯರ್ ವೃತ್ತ, ಅಂಬಾವಿಲಾಸ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಚಿಕ್ಕಗಡಿಯಾರ, ದೇವರಾಜ ಮಾರುಕಟ್ಟೆ, ಮೈಸೂರು ಮೆಡಿಕಲ್ ಕಾಲೇಜು, ಸರ್ಕಾರಿ ಆಯುರ್ವೇದ ಕಾಲೇಜು ಸೇರಿದಂತೆ ವಿವಿಧ ಕಟ್ಟಡಗಳಿಗೆ ಭೇಟಿ ನೀಡುವ ಮೂಲಕ ಅವುಗಳ ಸಂಕ್ಷಿಪ್ತ ಇತಿಹಾಸ ಮೆಲುಕು ಹಾಕಬಹುದಾಗಿದೆ.

    ಮಹತ್ವ ಉಳಿಸುವ ಯತ್ನ
    ನಗರದಲ್ಲಿ 600ಕ್ಕೂ ಹೆಚ್ಚು ಕಟ್ಟಡಗಳನ್ನು ಪಾರಂಪರಿಕ ಕಟ್ಟಡಗಳೆಂದು ಗುರುತಿಸಲಾಗಿತ್ತು. ಈ ಪೈಕಿ ಕೆಲ ಕಟ್ಟಡಗಳು ಈಗಾಗಲೇ ಹಾಳಾಗಿವೆ. ನೂರು ವರ್ಷ ತುಂಬಿರುವ 100 ಕಟ್ಟಡಗಳು ಮೈಸೂರಿನಲ್ಲಿ ಇವೆ. ಹತ್ತಾರು ಅರಮನೆಗಳಿವೆ. ನೂರು ವರ್ಷ ತುಂಬಿರುವ ಅನೇಕ ಮನೆಗಳೂ ಇವೆ. ಉಳಿದ ಕಟ್ಟಡಗಳ ರಕ್ಷಣೆಗೆ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪುರಾತತ್ವ ಇಲಾಖೆ, ನಗರಪಾಲಿಕೆ, ಸರ್ಕಾರ ಹಾಗೂ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮ ವಹಿಸುತ್ತಿವೆ. ಸಾರ್ವಜನಿಕರೂ ಪಾರಂಪರಿಕ ಕಟ್ಟಡಗಳ ಐತಿಹ್ಯ ಅರಿತು, ಅವುಗಳನ್ನು ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪಾರಂಪರಿಕ ಕಟ್ಟಡಗಳ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡಬೇಕಾಗಿದೆ. ಈ ಮೂಲಕ ಪಾರಂಪರಿಕ ನಗರಿ ಮೈಸೂರಿನ ಹೆಸರನ್ನು ಮುಂದಿನ ತಲೆಮಾರಿನವರೆಗೂ ಉಳಿಸಬೇಕಾಗಿದೆ.

    ದಸರಾ ಮಹೋತ್ಸವದ ಅಂಗವಾಗಿ ಪಾರಂಪರಿಕ ಸೈಕಲ್ ಸವಾರಿ, ಟಾಂಗಾ ಸವಾರಿ ಮತ್ತು ನಡಿಗೆ ಕಾರ್ಯಕ್ರಮಗಳನ್ನು ಸೆ. 29ರಿಂದ ಅ. 1ರವರೆಗೆ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಪಾರಂಪರಿಕ ಕಟ್ಟಡಗಳ ಹಿನ್ನ್ನೆಲೆ, ಪ್ರಾಮುಖ್ಯತೆ ಹಾಗೂ ವಾಸ್ತುಶಿಲ್ಪ ಶೈಲಿಯ ಮಹತ್ವ ತಿಳಿಸಿಕೊಡಲಾಗುತ್ತದೆ.
    ಎ.ದೇವರಾಜು
    ಆಯುಕ್ತರು, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts