More

    ಲಕ್ಷ್ಮೇಶ್ವರದಲ್ಲಿ ರಾಜಾರೋಷವಾಗಿ ವ್ಯಾಪಾರ

    ಲಕ್ಷ್ಮೇಶ್ವರ: ಕೋವಿಡ್ ತಡೆಗಟ್ಟಲು ಸರ್ಕಾರ ಬುಧವಾರದಿಂದ 14 ದಿನ ಜನತಾ ಕರ್ಫ್ಯೂ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಹುತೇಕ ವ್ಯಾಪಾರ-ವಹಿವಾಟು ಮಂಗಳವಾರ ಜೋರಾಗಿಯೇ ನಡೆಯಿತು.
    ಬುಧವಾರದಿಂದ ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳ ಜನರು ಪಟ್ಟಣಕ್ಕೆ ದೌಡಾಯಿಸಿದ್ದರು. ದಿನಸಿ, ತರಕಾರಿ, ಕೆಲವು ಅಗತ್ಯ ವಸ್ತುಗಳ ಹೊರತಾಗಿ ಬಟ್ಟೆ ಇನ್ನಿತರ ವಸ್ತುಗಳ ವ್ಯಾಪಾರ ರಾಜಾರೋಷವಾಗಿ ನಡೆಯಿತು. ಇದರಿಂದ ಜಾತ್ರೆ ವಾತಾವರಣ ಉಂಟಾಗಿತ್ತು.
    ನಿರ್ಬಂಧದ ನಡುವೆಯೂ ವ್ಯಾಪಾರಸ್ಥರು ಅಂಗಡಿ ಬಾಗಿಲು ಅರ್ಧದಷ್ಟು ತೆಗೆದು ವ್ಯಾಪಾರ ಮಾಡಿದರು. ಅನೇಕ ವ್ಯಾಪಾರಸ್ಥರು ತಮ್ಮ ಮನೆಗಳಲ್ಲೇ ವ್ಯಾಪಾರ ನಡೆಸಿದರು. ಈ ವೇಳೆ ಮಾಸ್ಕ್ ಧರಿಸಿರಲಿಲ್ಲ. ಪರಸ್ಪರ ಅಂತರವೂ ಕಂಡು ಬರಲಿಲ್ಲ.

    ಎಪಿಎಂಸಿ ಬಂದ್​ಗೆ ವ್ಯಾಪಾರಸ್ಥರ ನಿರ್ಧಾರ: ಲಕ್ಷ್ಮೇಶ್ವರ ಕೋವಿಡ್ ಹಿನ್ನೆಲೆಯಲ್ಲಿ ಪಟ್ಟಣದ ಎಪಿಎಂಸಿ ವರ್ತಕರು ಸ್ವಯಂಪ್ರೇರಣೆಯಿಂದ ಮಾರ್ಕೆಟ್ ಬಂದ್ ಮಾಡಲು ನಿರ್ಧರಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಎಪಿಎಂಸಿ ವರ್ತಕರ ಸಂಘದ ಕಾರ್ಯದರ್ಶಿ ಎಸ್.ಕೆ. ಕಾಳಪ್ಪನವರ, ಬೆಳಗ್ಗೆ 6ರಿಂದ 10ವರೆಗೆ ಮಾತ್ರ ಎಪಿಎಂಸಿಯಲ್ಲಿ ವ್ಯಾಪಾರ-ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕಡಿಮೆ ಅವಧಿಯಲ್ಲಿ ತಾಲೂಕಷ್ಟೇ ಅಲ್ಲದೆ, ನೆರೆ ಜಿಲ್ಲೆಗಳ ರೈತರು ತಮ್ಮ ಉತ್ಪನ್ನ ತರಲು ಆಗುವುದಿಲ್ಲ. ರೈತರ ಉತ್ಪನ್ನ ದಾಸ್ತಾನು, ಟೆಂಡರ್ ಪ್ರಕ್ರಿಯೆ, ಖರೀದಿ, ವಹಿವಾಟು ಎಲ್ಲವೂ ಸೇರಿ ಎಪಿಎಂಸಿ ವ್ಯಾಪಾರ ದೀರ್ಘ ಅವಧಿಯದ್ದಾಗಿದೆ. ಆದ್ದರಿಂದ ವ್ಯಾಪಾರ ಕಷ್ಟಸಾಧ್ಯ. ಕರೊನಾ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ. ಹೀಗಾಗಿ, ಏ. 28ರಿಂದ ಅನಿರ್ದಿಷ್ಟಾವಧಿವರೆಗೆ ಸಂಪೂರ್ಣ ವ್ಯಾಪಾರ ಬಂದ್ ಮಾಡಲು ಒಮ್ಮತದ ತೀರ್ಮಾನ ಕೈಗೊಂಡಿದ್ದೇವೆ. ರೈತರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.

    ಏ. 28ರಿಂದ ಮೇ 12ರವರೆಗೆ ಬೆಳಗ್ಗೆ 6ರಿಂದ 10 ಗಂಟೆವರೆಗೆ ಸರ್ಕಾರದ ಮಾರ್ಗಸೂಚಿಯನ್ವಯ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಜನಸಂದಣಿ ತಡೆಯಲು ಜಿಲ್ಲಾಧಿಕಾರಿ ನಿರ್ದೇಶನದಂತೆ ತರಕಾರಿ, ಹಣ್ಣು, ಇತರ ಅಗತ್ಯ ವಸ್ತುಗಳ ಮಾರಾಟಕ್ಕೆ ಪಟ್ಟಣದ ಹೊರವಲಯದ ಉಮಾ ವಿದ್ಯಾಲಯ ಮೈದಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಎಲ್ಲರೂ ಕೋವಿಡ್ ಮಾರ್ಗಸೂಚಿ ಪಾಲಿಸಲೇಬೇಕು. ನಿಯಮ ಮೀರಿ ವರ್ತಿಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
    | ಭ್ರಮರಾಂಬ ಗುಬ್ಬಿಶೆಟ್ಟಿ, ಲಕ್ಷ್ಮೇಶ್ವರ ತಹಸೀಲ್ದಾರ್

    ಲಸಿಕೆಗಾಗಿ ಅಂತರ ಮರೆತರು!: ಮುಂಡರಗಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಕರೊನಾ ಲಸಿಕೆ ಕೇಂದ್ರದ ಮುಂದೆ ವ್ಯಾಕ್ಸಿನ್ ಪಡೆದುಕೊಳ್ಳುವುದಕ್ಕೆ ಜನರು ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಮುಗಿಬಿದ್ದಿದ್ದರು. ಕರೊನಾ ಭಯದಿಂದಾಗಿ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಜನರು ಮುಂದಾಗಿದ್ದಾರೆ.
    ಕರೊನಾ ಲಸಿಕೆ ಕೇಂದ್ರದ ಮುಂದೆ ಸೇರಿದ್ದ ಜನರಲ್ಲಿ ಪರಸ್ಪರ ಅಂತರ ಮಾಯವಾಗಿತ್ತು. ಕರೊನಾ ನಿಯಮಗಳನ್ನು ಮರೆತು ಗುಂಪು-ಗುಂಪಾಗಿ ಸೇರಿ ಲಸಿಕೆ ಪಡೆದುಕೊಂಡರು. ಇಲ್ಲಿ ಮೊದಲ ಮತ್ತು ಎರಡನೇ ಹಂತದ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆಯುವಂಥವರಿಗೆ ಮಾಸ್ಕ್, ಸ್ಯಾನಿಟೈಸರ್ ನೀಡುವುದು, ಪರಸ್ಪರ ಅಂತರ ಕಾಪಾಡಿಕೊಳ್ಳುವ ಕುರಿತು ಸಿಬ್ಬಂದಿ ಹೆಚ್ಚು ಕಾಳಜಿ ವಹಿಸಬೇಕಿದೆ. ಈ ಕುರಿತು ಪ್ರತಿಕ್ರಿಯಿಸಿದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಕೀರ್ತಿಹಾಸ್ ಅವರು, ಲಸಿಕೆ ಪಡೆಯುವುದಕ್ಕೆ ಆಗಮಿಸುವರಿಗೆ ಹೊರಗಡೆ ಕುಳಿತುಕೊಳ್ಳಲು ಕುರ್ಚಿಗಳನ್ನು ಹಾಕಿಸಲಾಗುವುದು. ಗುಂಪು ಸೇರದೆ ಪರಸ್ಪರ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts