More

    ನಂದಿಗಿರಿಗೆ ಪ್ರವೇಶ ನಿರ್ಬಂಧ ; ಸ್ಕಂದಗಿರಿ, ಆವುಲಬೆಟ್ಟದಲ್ಲಿ ಚಾರಣಿಗರ ದಂಡು

    ಚಿಕ್ಕಬಳ್ಳಾಪುರ: ಧಾರಾಕಾರ ಮಳೆಯಿಂದ ಗುಡ್ಡ ಕುಸಿದು ನಂದಿ ಗಿರಿಧಾಮ ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರು ಜಿಲ್ಲೆಯ ಇತರ ತಾಣಗಳತ್ತ ಮುಖಮಾಡಿದ್ದು ವಾರಾಂತ್ಯ ಮುದ ಅನುಭವಿಸುತ್ತಿದ್ದಾರೆ.

    ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ನಂದಿಬೆಟ್ಟ ಹೆಚ್ಚಿನ ವೀಕ್ಷಣೆಗೆ ಬಯಸುವ ಅಚ್ಚುಮೆಚ್ಚಿನ ಪ್ರವಾಸಿ ತಾಣ. ಆದರೆ, ಬೆಟ್ಟಕ್ಕೆ ಹೊಂದಿಕೊಂಡಿರುವ ಬ್ರಹ್ಮಗಿರಿ ಮಾರ್ಗದ ರಸ್ತೆಯು ಕಳೆದ ಆ.24ರಂದು ಸುರಿದ ಮಳೆಗೆ ಕುಸಿತವಾಗಿ ಕೊಚ್ಚಿ ಹೋಗಿದೆ. ಈ ಹಿನ್ನೆಲೆಯಲ್ಲಿ ನಂದಿ ಪ್ರವೇಶಕ್ಕೆ ಪ್ರವಾಸಿಗರಿಗೆ ಬ್ರೇಕ್ ಹಾಕಲಾಗಿದೆ.

    ನಂದಿ ಗಿರಿಧಾಮಕ್ಕೆ ಸಮೀಪದಲ್ಲಿರುವ ರಮಣೀಯ ತಾಣ ಸ್ಕಂದಗಿರಿ, ಆವಲಬೆಟ್ಟ, ಕೇತೇನಹಳ್ಳಿ ಫಾಲ್ಸ್, ಮಂಚೇನಹಳ್ಳಿ ದಂಡಿಗಾನಹಳ್ಳಿ ಕೆರೆ, ಶ್ರೀನಿವಾಸ ಸಾಗರ ಜಲಾಶಯ ವೀಕ್ಷಿಸಲು ಪ್ರವಾಸಿಗಳು ಮುಗಿಬೀಳುತ್ತಿದ್ದು ವಾರದ ಒತ್ತಡ ನಿವಾರಿಸಿಕೊಳ್ಳುತ್ತಿದ್ದಾರೆ.

    ಸ್ಕಂದಗಿರಿಯಲ್ಲಿ ತೇಲಾಟ: ಹಚ್ಚ ಹಸಿರು ಹೊದ್ದು, ಎತ್ತರ ಪ್ರದೇಶದಲ್ಲಿ ಮೋಡಗಳ ನಡುವೆ ತೇಲಾಡುತ್ತಿರುವ ಭಾವನೆ ಮೂಡಿಸುವ, ಚಾರಣಕ್ಕೆ ಹೇಳಿಮಾಡಿಸಿದಂತಿರುವ ಸ್ಕಂದಗಿರಿಯು ನಂದಿಬೆಟ್ಟದ ಬಳಿಕ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣ. ಪ್ರತಿ ಶನಿವಾರ, ಭಾನುವಾರ, ಹಬ್ಬ ಮತ್ತು ರಜೆ ದಿನಗಳಂದು ಐಟಿ ಬಿಟಿ ನೌಕರರು, ವಿದ್ಯಾರ್ಥಿಗಳು, ಪ್ರೇಮಿಗಳು ಸ್ಕಂದಗಿರಿ ಏರಲಿದ್ದು ಸಾಮಾನ್ಯವಾಗಿ ಶನಿವಾರ ನಡುರಾತ್ರಿ ಚಾರಣ ಹೊರಟು, ಬೆಳಗ್ಗೆ ಸೂರ್ಯೋದಯ, ಚಲಿಸುವ ಮೋಡಗಳ ಸ್ಪರ್ಶದ ಅನುಭವ, ಸೂರ್ಯಾಸ್ತ ದೃಶ್ಯ ಕಣ್ತುಂಬಿಕೊಂಡು ಹೋಗುತ್ತಿದ್ದಾರೆ. ಇದರ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಬಹುತೇಕರು ಇತ್ತ ದೌಡಾಯಿಸುತ್ತಿದ್ದಾರೆ.

    ಸೆಲ್ಫಿ ಬಂಡೆಯಲ್ಲಿ ಖುಷಿ: ಚಿಕ್ಕಬಳ್ಳಾಪುರ ತಾಲೂಕಿನ ಆವಲಬೆಟ್ಟ ಸೆಲ್ಫಿ ಬೆಟ್ಟ, ಸೆಲ್ಫಿ ಬಂಡೆಯೆಂದೇ ಪ್ರಖ್ಯಾತಿ. ಇಲ್ಲಿ ನರಸಿಂಹಸ್ವಾಮಿ ದೇವಾಲಯವಿದೆ. ಬೆಟ್ಟದ ಸುತ್ತಲು ಮೀಸಲು ಅರಣ್ಯ ಪ್ರದೇಶ. ಮತ್ತೊಂದೆಡೆ ಅಪಾಯ ಎನಿಸಿದರೂ ಬೆಟ್ಟದ ಮೇಲಿನ ಬಂಡೆಯಲ್ಲಿ ಫೋಟೋಗಳನ್ನು ತೆಗೆದುಕೊಂಡು ಖುಷಿ ಅನುಭವಿಸಲು ಬರುವವರೇ ಹೆಚ್ಚು. ಬೆಟ್ಟದ ಕೊನೆ ಭಾಗದಲ್ಲಿ ಸ್ವಾಭಾವಿಕವಾಗಿ ಇರುವ ಕೊಕ್ಕರೆಯಾಕಾರದ ಬಂಡೆಯ ಮೇಲೆ ನಿಂತು ಕೆಳಗೆ ಬಗ್ಗಿ ನೋಡಲು ಸಾಧ್ಯವಿಲ್ಲ, ಕೊಕ್ಕರೆ ಕುತ್ತಿಗೆ ಭಾಗದಂತಿರುವ ಬಂಡೆಯ ಮೇಲೆ ನಿಂತಾಗ ಭಯಮಿಶ್ರಿತ ರೋಮಾಂಚನದ ಅನುಭವವಾಗುತ್ತದೆ. ತಣ್ಣನೆ ಗಾಳಿಯ ಮಧ್ಯೆ ಎತ್ತರದ ಸ್ಥಳದಲ್ಲಿ ನಿಂತುಕೊಳ್ಳುವುದೇ ಒಂದು ರೀತಿಯ ಥ್ರೀಲ್. ಹಾಗೆಯೇ ಬಂಡೆಯ ಮೇಲೆ ಫೋಟೋ, ಸೆಲ್ಫಿ ತೆಗೆದುಕೊಳ್ಳುವುದನ್ನು ನೋಡಲು ಸುಂದರವಾಗಿರುತ್ತದೆ. ಇದೇ ಕಾರಣದಿಂದ ಈ ಬಂಡೆಗೆ ಸೆಲ್ಫಿ ಸ್ಟಾರ್ಟ್ ಎಂಬ ಹೆಸರು ಬಂದಿದೆ. ಆದರೆ, ಇಲ್ಲಿ ಫೋಟೋ ತೆಗೆಸಿಕೊಳ್ಳುವಾಗ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ, ಇದೇ ಕಾರಣದಲ್ಲಿ ಸೆಲ್ಫಿ ಬಂಡೆಗೆ ಪ್ರವೇಶ ನಿಷೇಧಿಸಲಾಗಿದೆ.

    ಭೂ ಕುಸಿತ ಮತ್ತು ರಸ್ತೆ ಕೊಚ್ಚಿಕೊಂಡು ಹೋಗಿರುವುದರಿಂದ ನಂದಿ ಗಿರಿಧಾಮಕ್ಕೆ ಬಿಡುತ್ತಿಲ್ಲ. ಇದೇ ವೇಳೆ ಗೆಳೆಯರು ಬಂದ ಹಿನ್ನೆಲೆಯಲ್ಲಿ ಸ್ಕಂದಗಿರಿಗೆ ಬಂದು ಖುಷಿ ಅನುಭವಿಸಲಾಗುತ್ತಿದೆ. ಇದೊಂದು ವಿಭಿನ್ನ ಥ್ರಿಲ್ ಎನಿಸುತ್ತಿದೆ.
    ರಾಗಿಣಿ, ಪ್ರವಾಸಿ

    ಇತ್ತೀಚೆಗೆ ಸ್ಕಂದಗಿರಿ ಮತ್ತು ಆವಲಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ನಂದಿ ಬೆಟ್ಟ ಪ್ರವೇಶ ನಿರ್ಬಂಧ ಕಾರಣ.
    ಸುರೇಶ್, ಗೈಡ್

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts