More

    ಸಾಂಸ್ಕೃತಿಕ ನಗರಿಯಲ್ಲಿ ಪ್ರವಾಸಿಗರ ದಂಡು

    *ಪ್ರವಾಸಿ ತಾಣಗಳು ಹೌಸ್‌ಫುಲ್ಸಾಲು ಸಾಲು ರಜೆ ಹಿನ್ನೆಲೆ


    ಮೈಸೂರು:
    ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪ್ರವಾಸಿಗರು ಮುಖ ಮಾಡಿದ್ದು, ನಗರದ ಬಹುತೇಕ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿವೆ.


    ಎರಡು ವರ್ಷಗಳಿಂದ ಕರೊನಾ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳು, ವ್ಯಾಪಾರ, ವಹಿವಾಟುಗಳು ನೆಲ ಕಚ್ಚಿದ್ದವು. ಪ್ರವಾಸೋದ್ಯಮವೂ ಇದಕ್ಕೆ ಹೊರತಾಗಿರಲಿಲ್ಲ. ಇದೀಗ ಮೈಸೂರು ಪ್ರವಾಸೋದ್ಯಮದಲ್ಲಿ ಚೇತರಿಕೆ ಕಾಣುತ್ತಿದೆ. ಶುಕ್ರವಾರ ನಗರದ ಮೃಗಾಲಯ, ಚಾಮುಂಡಿಬೆಟ್ಟ, ಅರಮನೆ, ಕೆ.ಆರ್.ಎಸ್. ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡೇ ನೆರೆದಿತ್ತು.


    ಚಾಮುಂಡಿ ಬೆಟ್ಟದಲ್ಲಿ ಜನಜಾತ್ರೆಯೇ ಕಂಡುಬಂತು. ದೇವಿಯ ದರ್ಶನಕ್ಕಾಗಿ ನಿರೀಕ್ಷೆಗೂ ಮೀರಿ ಭಕ್ತರು ಭೇಟಿ ನೀಡಿದ್ದರು. ಸಾಲಿನಲ್ಲಿ ನಿಂತು ದರ್ಶನ ಪಡೆದರು. ಮೃಗಾಲಯ, ವಿಶ್ವವಿಖ್ಯಾತ ಅರಮನೆಯಲ್ಲೂ ಅಪಾರ ಸಂಖ್ಯೆಯ ಪ್ರವಾಸಿಗರು ಕಂಡು ಬಂದರು.


    ರಜೆಯ ಮಜಾ ಸವಿಯಲು ರಾಜ್ಯದ ವಿವಿಧೆಡೆಯಿಂದ ಹಾಗೂ ಹೊರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸಿದ್ದರು. ಮೈಸೂರು ಪ್ರವಾಸೋದ್ಯಮ ಚೇತರಿಕೆಯತ್ತ ಸಾಗಿದ್ದು, ಹೋಟೆಲ್, ಲಾಡ್ಜ್‌ಗಳಲ್ಲಿ ಕೊಠಡಿಗಳ ಕಾಯ್ದಿರಿಸುವಿಕೆ ಪ್ರಮಾಣ ಸಹ ಹೆಚ್ಚಿದೆ.


    ಅತ್ತ ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರಿಯ ಹುಲಿ ಸಂರಕ್ಷಿತ ಉದ್ಯಾನವನಗಳಲ್ಲೂ ಸಫಾರಿ ಪ್ರಿಯರ ಸಂಖ್ಯೆ ಹೆಚ್ಚಾಗಿ ಕಂಡು ಬಂತು. ನಾಗರಹೊಳೆ ದಮ್ಮನಕಟ್ಟೆ ಸಫಾರಿ ಕೇಂದ್ರದಲ್ಲಿ ಹುಲಿ ಕಾಣಿಸಿಕೊಂಡಿದ್ದರಿಂದ ಎರಡೂ ಹುಲಿ ಸಂರಕ್ಷಿತ ಪ್ರದೇಶಗಳತ್ತ ಪ್ರವಾಸಿಗರು ಮುಗಿ ಬಿದ್ದಿದ್ದಾರೆ. ಹೀಗಾಗಿ ನಾಗರಹೊಳೆಯ ಕಬಿನಿ, ಬಂಡೀಪುರದಲ್ಲಿರುವ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ (ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್)ಯ ರೆಸಾರ್ಟ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವಾರಾಂತ್ಯ ಬುಕಿಂಗ್ ಬಹುತೇಕ ಪೂರ್ಣಗೊಂಡಿರುವುದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts