More

    ಕರಾವಳಿ ಪ್ರವಾಸೋದ್ಯಮಕ್ಕೆ ಆದ್ಯತೆ

    ಮಂಗಳೂರು: ರಾಜ್ಯದ ಎಲ್ಲ ಕಡೆಗಳಿಗೆ ನಿರ್ದಿಷ್ಟವಾದ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ರೂಪಿಸುವುದು ಸುಲಭ. ಆದರೆ ನೈಸರ್ಗಿಕ ಸಂಪನ್ಮೂಲ ಹೊಂದಿರುವ ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ಯೋಜನೆ ಹಾಕಿಕೊಳ್ಳಬೇಕಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

    ದ.ಕ ಕಾರ್ಯನಿರತರ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್‌ನಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡ ಪ್ರವಾಸೋದ್ಯಮ ಅಭಿವೃದ್ಧಿ ಸಂವಾದದಲ್ಲಿ ಮಾತನಾಡಿದರು.

    ತ್ವರಿತವಾಗಿ ಜಾರಿಗೊಳಿಸಬೇಕಾದ ಯೋಜನೆಗಳ ಬಗ್ಗೆ ತಜ್ಞರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಆಗ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ. ಕರಾವಳಿಗೆ ಅಗತ್ಯವಾದ ಹೋಂ ಸ್ಟೇ, ಬೋಟ್‌ಹೌಸ್, ಫೆರಿ ಸೇವೆ, ಬಾರ್ಜ್ ವ್ಯವಸ್ಥೆಗೆ ಬೇಕಾದ ನೆರವು ನೀಡಲಾಗುವುದು. ಪ್ರವಾಸಿಗರಿಗೆ ಅನುಕೂಲಕರ ಬೋಟಿಂಗನ್ನು ಇನ್ನಷ್ಟು ಹೆಚ್ಚಿಸಬೇಕು. ಮುಂದಿನ ಜನವರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕೈಟ್ ಫೆಸ್ಟಿವಲ್, ಸರ್ಫಿಂಗ್, ನದಿ ಉತ್ಸವ ಸೇರಿದಂತೆ ನಿಗದಿತ ವೇಳಾಪಟ್ಟಿಯಂತೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸಹಕಾರ ನೀಡಲಾಗುವುದು. ಈ ಮೂಲಕ ಮಂಗಳೂರನ್ನು ಪ್ರವಾಸೋದ್ಯಮದಲ್ಲಿ ಬ್ರಾಂಡ್ ಮಾಡಲು ಉದ್ದೇಶಿಸಲಾಗಿದೆ ಎಂದರು.

    ದ.ಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸಿಗರನ್ನು ಸೆಳೆಯಲು ಉತ್ತೇಜನ ನೀಡಬೇಕು. ಬಂಟ್ವಾಳದ ಕಾರಿಂಜ ಕ್ಷೇತ್ರದಲ್ಲಿ ಮಂಕಿ ಪಾರ್ಕ್ ಸ್ಥಾಪನೆ, ಕೇಬಲ್ ಕಾರ್ ಸೌಲಭ್ಯ ಹಾಗೂ ಮಂಗಳೂರಿನಲ್ಲಿ ಕರಾವಳಿ ಹೂಡಿಕೆದಾರರ ಸಮಾವೇಶ ನಡೆಸುವಂತೆ ವಿನಂತಿಸಿದರು. ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕ ಕುಮಾರ್ ಪುಷ್ಕರ್, ಬೆಂಗಳೂರು ಏರೋ ಹೆಲಿಕಾಂ ಎಂಡಿ ಮಧುಸೂದನ್ ಉಪಸ್ಥಿತರಿದ್ದರು. ಯತೀಶ್ ಬೈಕಂಪಾಡಿ ಕಾರ್ಯಕ್ರಮ ನಿರೂಪಿಸಿದರು.

    ಕಾಯಂ ಹೆಲಿಪ್ಯಾಡ್: ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು, ಹಂಪಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಕಾಯಂ ಹೆಲಿಪ್ಯಾಡ್ ನಿರ್ಮಿಸುವ ಮೂಲಕ ಹೆಲಿ ಸರ್ಕ್ಯೂಟ್‌ಗೆ ಒಳಪಡಿಸಲಾಗುವುದು. ಈ ಮೂಲಕ ಶೈಕ್ಷಣಿಕ, ಧಾರ್ಮಿಕ ಹಾಗೂ ಹೆಲ್ತ್ ಟೂರಿಸಂಗೆ ಉತ್ತೇಜನ ನೀಡಲಾಗುವುದು. ಉಡುಪಿ, ಕೊಲ್ಲೂರು, ಮುರ್ಡೇಶ್ವರ, ಮಂಗಳೂರು, ಗೋಕರ್ಣ ಮುಂತಾದ ಸ್ಥಳಗಳನ್ನು ಸುಲಭದಲ್ಲಿ ತಲುಪಲು ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದರು.

     ಸೀಪ್ಲೇನ್ ಪ್ರಸ್ತಾವನೆಗೆ ಒಪ್ಪಿಗೆ: ಕರಾವಳಿಯಲ್ಲಿ ಸೀಪ್ಲೇನ್ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ಕುರಿತ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಒಪ್ಪಿಗೆ ನೀಡಿದೆ. 320 ಕಿ.ಮೀ. ಉದ್ದದ ಕರ್ನಾಟಕ ಕರಾವಳಿಯಲ್ಲಿ ಮಂಗಳೂರು-ಗೋವಾ ನಡುವೆ ಉಡಾನ್ ಯೋಜನೆಯಲ್ಲಿ ಸೀ ಪ್ಲೇನ್ ಹಾರಾಟಕ್ಕೆ ಅನುಮತಿ ದೊರೆಯಲಿದೆ. ಅಲ್ಲದೆ ಜಲಾಶಯಗಳ ನಡುವೆಯೂ ಸೀ ಪ್ಲೇನ್ ಹಾರಾಟಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.

    ಹೆಲಿಟೂರಿಸಂಗೆ ಜಾಗ ಪರಿಶೀಲನೆ: ಮಂಗಳೂರಿಗೆ ಹೆಲಿಟೂರಿಸಂ ಪರಿಚಯಿಸಲು ನಿರ್ಧರಿಸಿದ್ದು, ಅದರಂತೆ ಸ್ಥಳ ಸಮೀಕ್ಷೆ ನಡೆಯುತ್ತಿದೆ. ಕದ್ರಿ ಸ್ಕೇಟಿಂಗ್ ರಿಂಗ್ ಸಹಿತ ನಗರದ ಕೆಲವೆಡೆ ಸ್ಥಳ ಪರಿಶೀಲನೆ ನಡೆಯುತ್ತಿದೆ ಎಂದು ಸಚಿವ ಯೋಗೇಶ್ವರ್ ಕದ್ರಿ ಉದ್ಯಾನಕ್ಕೆ ಭೇಟಿ ಹೇಳಿದರು.

    ಇಲ್ಲಿ ಹೆಲಿಟೂರಿಸಂಗೆ ಅವಕಾಶ ನೀಡಿದರೆ ಮಂಗಳೂರು ನಗರ ಸಂಪರ್ಕ ಸುಲಭವಾಗುತ್ತದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು. ಆದರೆ ಸ್ಕೇಟಿಂಗ್ ರಿಂಗ್ ಪಕ್ಕದಲ್ಲಿರುವ ಮೊಬೈಲ್ ಟವರ್‌ನಿಂದ ಇದಕ್ಕೆ ಸಮಸ್ಯೆಯಾಗಲಿದ್ದು, ಅದನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವ ಕುರಿತು ಅಧಿಕಾರಿಗಳ ಜತೆ ಸಚಿವರು ಮಾತನಾಡಿದರು.

    4.22 ಎಕರೆ ಇರುವ ಜಾಗ ತೋಟಗಾರಿಕಾ ಇಲಾಖೆಗೆ ಸೇರಿದ ಕಾರಣ, ಈ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡುವ ಕುರಿತು ಮುಂದಿನ ದಿನಗಳಲ್ಲಿ ಕ್ಯಾಬಿನೆಟ್‌ನಲ್ಲಿ ಚರ್ಚೆ ನಡೆಸಿ ಬಳಿಕ ಸೂಕ್ತ ನಿರ್ಧಾರಕ್ಕೆ ಬರಲಾಗುವುದು. ಜತೆಗೆ ನಗರದ ಬೇರೆ ಕಡೆಗಳಲ್ಲಿಯೂ ಸ್ಥಳ ವೀಕ್ಷಣೆ ಮಾಡಲಾಗುವುದು ಎಂದರು.

    ಸಚಿವರು ಮೇರಿಹಿಲ್‌ನಲ್ಲಿರುವ ಹೆಲಿಪ್ಯಾಡ್ ವೀಕ್ಷಣೆ ಮಾಡುವುದರ ಜತೆಗೆ ಇದೇ ಮಾದರಿಯಲ್ಲಿ ಮಂಗಳೂರಿನ ಬೇರೆ ಕಡೆಯಲ್ಲಿ ವ್ಯವಸ್ಥೆ ಮಾಡುವ ಕುರಿತು ಅಧಿಕಾರಿಗಳಲ್ಲಿ ಮಾಹಿತಿ ಹಂಚಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts