More

    ಪ್ರವಾಸ ಉಲ್ಲಾಸ; ಮಕ್ಕಳ ಪ್ರವಾಸದ ಅನುಭವ ಕಥನ..

    ಮಕ್ಕಳ ಶೈಕ್ಷಣಿಕ ಪ್ರವಾಸದ ಅನುಭವದ ಬರಹಗಳನ್ನು ಹಂಚಿಕೊಳ್ಳುವಂತೆ ಆಹ್ವಾನಿಸಲಾಗಿತ್ತು. ನೂರಾರು ಮಕ್ಕಳು ಖುಷಿಯಿಂದ ಪ್ರವಾಸದ ಅನುಭವಗಳನ್ನು ವರ್ಣಿಸಿ ಬರಹ ಕಳಿಸಿದ್ದಾರೆ. ಆಯ್ದ ಕೆಲವು ಲೇಖನಗಳನ್ನು ಇಲ್ಲಿ ಪ್ರಕಟಿಸಿದ್ದೇವೆ.

    ಮರೆಯಲಾಗದ ದೋಣಿ ವಿಹಾರ

    ಪ್ರವಾಸ ಉಲ್ಲಾಸ; ಮಕ್ಕಳ ಪ್ರವಾಸದ ಅನುಭವ ಕಥನ..ನಮ್ಮ ಶಿಕ್ಷಕರು ಪ್ರವಾಸ ನಿಗದಿ ಮಾಡಿದ ಕೂಡಲೇ ಮನೆಯಲ್ಲಿ ಅಮ್ಮ ಅಪ್ಪನ ಬಳಿ ಹಠ ಮಾಡಿ ಶಿಕ್ಷಕರಿಗೆ ಮೊದಲು ಹಣ ಕೊಟ್ಟವಳು ನಾನೇ. ಪ್ರವಾಸದ ದಿನ ಎಂದು ಬರುವುದೋ ಎಂಬ ಕಾತುರ ನನಗೆ. ಸ್ನೇಹಿತರು ಮತ್ತು ಶಿಕ್ಷಕರ ಜೊತೆಗೆ ವರಂಗ, ಮಣಿಪಾಲ್, ಉಡುಪಿ, ಆನೆಗುಡ್ಡೆ, ಮುರ್ಡೆಶ್ವರ ಮತ್ತು ಕೊಲ್ಲೂರಿಗೆ ಪ್ರವಾಸ ಹೋಗಿದ್ದೆವು. ವರಂಗದಲ್ಲಿ ಕೆರೆಯ ನಡುವೆ ಇರುವ ಬಸದಿಗೆ ದೋಣಿಯಲ್ಲಿ ಹೋಗಿದ್ದು ಮರೆಯಲಾಗದ ಅನುಭವ. ದೋಣಿ ಏರಿದಾಗ ಬಿದ್ದು ಬಿಡುವೆನೇನೋ ಎಂಬ ಭಯ ಕಾಡಿತ್ತು. ಹಾಗೆಯೇ ದೋಣಿ ಸಾಗುತ್ತಾ ಮುಂದೆ ಹೋದಂತೆ ಭಯ ದೂರವಾಗಿ ದೋಣಿ ಪ್ರಯಾಣ ರೋಮಾಂಚನ ಎನಿಸಿತು.ಅಂಬಿಗನು ಕೊಟ್ಟ ಅಕ್ಕಿಯನ್ನು ಕೆರೆಯ ಮೀನುಗಳಿಗೆ ನಾವೆಲ್ಲರೂ ಹಾಕುತ್ತ ಸಾಗಿದಂತೆ,ಆ ಮೀನುಗಳು ನಮ್ಮ ದೋಣಿಯ ಹತ್ತಿರ ಬರುವುದು ಬಹಳ ಖುಷಿ ನೀಡಿತು. ಬಸದಿಯ ಬಳಿ ಇಳಿದು ಪದ್ಮಾವತಿ ದೇವಿ ಮತ್ತು ತೀರ್ಥಂಕರರ ವಿಗ್ರಹಗಳ ದರ್ಶನ ಪಡೆದು ಮತ್ತೆ ದೋಣಿ ಏರಿ ದಡ ಸೇರಿದೆವು. ಜೀವನದಲ್ಲಿ ಮೊದಲ ಬಾರಿ ದೋಣಿಯಲ್ಲಿ ಸಾಗಿದ ಅನುಭವ ನನ್ನ ನೆನಪಿನ ಅಂಗಳದಲ್ಲಿ ಸದಾ ಹಸಿರಾಗಿರುತ್ತದೆ.ಅಂತೆಯೇ ಪ್ರವಾಸದ ಪ್ರತಿಯೊಂದು ಸ್ಥಳಗಳೂ ನನಗೆ ಇಷ್ಟವಾದವು. ಮುರ್ಡೆಶ್ವರದಲ್ಲಿ ಲಿಫ್ಟ್​ನಲ್ಲಿ ಗೋಪುರದ ತುತ್ತ ತುದಿಗೆ ಹೋಗಿ ಸಮುದ್ರದ ಸೌಂದರ್ಯವನ್ನು ಕಣ್ತುಂಬಿಕೊಂಡದ್ದು, ಕಡಲಿನಲ್ಲಿ ಸ್ನೇಹಿತರ ಜತೆಗೆ ಆಟವಾಡಿದ್ದು,ಮರಳಿನ ಗೂಡು ಕಟ್ಟಿದ್ದು, ತೆರೆಗಳ ನಡುವೆ ಕುಣಿದು ಕುಪ್ಪಳಿಸಿದ್ದು ಎಲ್ಲವೂ ನನ್ನ ಶಾಲಾ ಶೈಕ್ಷಣಿಕ ಪ್ರವಾಸವನ್ನು ಅವಿಸ್ಮರಣೀಯವಾಗಿಸಿವೆ.

    | ಅಕ್ಷರ.ಎಸ್.ಶೆಟ್ಟಿ 2ನೇ ತರಗತಿ, ಸ.ಕಿ.ಪ್ರಾ.ಶಾಲೆ, ಸಣ್ಣಕೆರೆ, ಚಿಕ್ಕಮಗಳೂರು ಜಿಲ್ಲೆ

    ಸಂತಸದ ಪ್ರವಾಸ

    ಪ್ರವಾಸ ಉಲ್ಲಾಸ; ಮಕ್ಕಳ ಪ್ರವಾಸದ ಅನುಭವ ಕಥನ..ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಾವು ಶಾಲಾ ಶೈಕ್ಷಣಿಕ ಪ್ರವಾಸ ಹೋಗಿದ್ದೆವು. ಯಾಣ, ಸಹಸ್ರಲಿಂಗ, ಜೋಗ ಜಲಪಾತದ ಸೊಬಗು ಹಾಗೂ ಹಸಿರು ನೋಡಿ ಸಂತಸಪಟ್ಟೆವು. ಶರಾವತಿ ನದಿಯ ಹಿನ್ನೀರಿನ ಸೊಬಗನ್ನು ವೀಕ್ಷಿಸಿದೆವು. ಮುರುಡೇಶ್ವರ ಬೀಚಿನಲ್ಲಿ ಸ್ನೇಹಿತರೊಂದಿಗೆ ಕುಪ್ಪಳಿಸಿದೆವು. ಅರಬ್ಬಿ ಸಮುದ್ರ, ಪಶ್ಚಿಮ ಘಟ್ಟದ ದಟ್ಟ ಕಾಡು ಕಂಡು ಮೂಕವಿಸ್ಮಿತರಾದೆವು. ಜತೆಗೆ ನಮ್ಮ ಶಿಕ್ಷಕರು ಪ್ರವಾಸಿ ಸ್ಥಳಗಳ ಮಹತ್ವ ತಿಳಿಸಿದರು. ಅಲ್ಲದೆ, ರುಚಿಯಾದ ಊಟ, ವ್ಯವಸ್ಥಿತ ವಸತಿ ಕಲ್ಪಿಸಿದ್ದರು. ನದಿ, ಸಮುದ್ರ, ಜಲಪಾತ, ಅರಣ್ಯ ವೀಕ್ಷಣೆ, ದೇವಸ್ಥಾನ ದರ್ಶನ ನಮ್ಮನ್ನು ಬೇರೆ ಲೋಕಕ್ಕೆ ಕೊಂಡೊಯ್ದಿತ್ತು. ಮನೆಯ ಸಿಹಿ ತಿಂಡಿ ತಿನ್ನುತ್ತಾ, ಸ್ನೇಹಿತರೊಂದಿಗೆ ಹರಟುತ್ತ, ಕುಣಿದು- ಕುಪ್ಪಳಿಸಿ ಎರಡು ದಿನಗಳ ಪ್ರವಾಸವನ್ನು ಸಂತಸದಿಂದ ಮುಗಿಸಿದೆವು.

    | ಕಾವ್ಯಾ ಕೆ. 5ನೇ ತರಗತಿ, ಸ.ಕಿ.ಪ್ರಾ ಶಾಲೆ, ದಾವಣಗೆರೆ

    ನಮ್ಮ ನಡೆ ಹಂಪಿ ಕಡೆ

    ಪ್ರವಾಸ ಉಲ್ಲಾಸ; ಮಕ್ಕಳ ಪ್ರವಾಸದ ಅನುಭವ ಕಥನ..ಕಳೆದ ಎರಡು ವರ್ಷ ಕೊರೊನಾದ ವ್ಯಾಧಿಯಿಂದ ನಮ್ಮ ಶೈಕ್ಷಣಿಕ ಚಟುವಟಿಕೆಗೂ ಗರ ಬಡಿದಿತ್ತು. ಈ ವರ್ಷ ಅದಕ್ಕೆಲ್ಲಾ ಮುಕ್ತಿ ಹಾಡಿ, ಪಾಠ ಪ್ರವಚನದೊಂದಿಗೆ ಸ್ನೇಹಿತರೊಟ್ಟಿಗೆ ಸೇರುತ್ತಿರುವುದರಿಂದ ಮನಸಿಗೆ ಅಹ್ಲಾದ ಉಂಟಾಯಿತು. ನಮ್ಮ ಶಾಲೆಯ ಗುರುಗಳು ಒಂದು ದಿನ ಈ ವರ್ಷ ಹಂಪಿ, ಕಮಲಾಪುರ ಮ್ಯೂಸಿಯಂ ಹಾಗೂ ತುಂಗಭದ್ರಾ ಆಣೆಕಟ್ಟು ನೋಡಲು ಶೈಕ್ಷಣಿಕ ಪ್ರವಾಸ ತೆರಳೋಣ ಎಂದರು. ಮನದಲ್ಲಿ ಹಬ್ಬ ಶುರುವಾಯಿತು, ಯಾವಾಗ ಹೋಗುವ ದಿನ ಬಂದಿತು ಎನ್ನುವ ತವಕದಲ್ಲೇ ಕಾಲ ಕಳೆಯುತ್ತಿದ್ದೆ, ಅದರಲ್ಲೂ ನನ್ನ ಅಕ್ಕಂದಿರು ಪ್ರವಾಸದ ಬಗ್ಗೆ ನನ್ನ ಹತ್ತಿರ ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗಲಂತೂ ಮನವರಳುತ್ತಿತ್ತು. ಪ್ರವಾಸಕ್ಕೆ ಹೋಗುವ ಹಿಂದಿನ ರಾತ್ರಿಯಂತೂ ನಾನು ನಿದ್ದೆ ಮಾಡಲಿಲ್ಲ. ನಮ್ಮ ಕುಟುಂಬದವರಿಗೂ ನಿದ್ದೆ ಮಾಡಲು ಬಿಡಲಿಲ್ಲ. ಯಾವಾಗ ಬೆಳಗಾದೀತು ಎನ್ನುವ ಹಂಬಲದಲ್ಲೇ ಇದ್ದೆ. ಅಪ್ಪಿ ತಪ್ಪಿ ಕಣ್ಣು ಮುಚ್ಚಿದರೆ ಸಾಕು ಶಿಕ್ಷಕರು ಹೇಳಿದ ಕಲ್ಲಿನ ರಥ ಕನಸಲ್ಲಿ ಕಾಡುತ್ತಿತ್ತು. ಬೆಳಗ್ಗೆ ಎದ್ದಾಗ ನಮ್ಮ ಊರಿಗೆ ಬಂದ ಟೂರ್ ಬಸ್ ಕಂಡು ಹಿರಿ ಹಿರಿ ಹಿಗ್ಗಿ, ಅಮ್ಮ ಮಾಡಿಕೊಟ್ಟಿದ್ದ ಕೋಡುಬಳೆ, ಶಂಕ್ರಿಪಿಳ್ಳಿ, ಕರದಂಟು, ಅವಲಕ್ಕಿ ಒಗ್ಗರಣೆ ಕಟ್ಟಿಕೊಂಡು ಎದ್ದೋ ಬಿದ್ದೋ ಎನ್ನುವಂತೆ ಬಸ್ ಏರಿ ಸೀಟು ಹಿಡಿದೆ. ಅಂತೂ ನಮ್ಮ ಬಸ್ ತುಂಗಭದ್ರಾ ನದಿ ತಟವನ್ನು ಕಂಡಿತು. ನಂತರ ಹಂಪಿ ವಿರೂಪಾಕ್ಷ ದೇವರ ದರ್ಶನ ಪಡೆದು ಉಲ್ಟಾ ಕಾಣುವ ಗೋಪುರವನ್ನು ನೆರಳಲ್ಲಿ ನೋಡಿ ಅಚ್ಚರಿಯಾಯಿತು. ಅಲ್ಲಿಂದ ತೆರಳಿ, ನೇರವಾಗಿ ವಿಜಯವಿಠ್ಠಲ ದೇವಸ್ಥಾನಕ್ಕೆ ಬಂದು ನೈಸರ್ಗಿಕ ಇಂಧನದ ವಾಹನ ಮೂಲಕ ಸಾಗುವಾಗಲಂತೂ ಸ್ನೇಹಿತರೆಲ್ಲಾ ಸೇರಿ ಖುಷಿಗೆ ಕೇಕೆಯನ್ನೇ ಹಾಕಿದೆವು. ಕನಸಿನಲ್ಲಿ ಕಾಡುತ್ತಿದ್ದ ಕಲ್ಲಿನ ರಥವನ್ನು ಕಂಡ ನಾನು ಮನದುಂಬಿಕೊಂಡೆ. ಸಾಸಿವೆಕಾಳು ಗಣಪ, ಉಗ್ರನರಸಿಂಹ, ಕಮಲ್ ಮಹಲ್ ಎಲ್ಲವನ್ನೂ ಕಂಡು ನಮ್ಮ ಹಿರಿಯರಲ್ಲಿದ್ದ ಕಲ್ಲಿನ ಕೆತ್ತನೆಯ ನೈಪುಣ್ಯತೆ ನೋಡಿ ಹೆಮ್ಮೆ ಎನಿಸಿತು. ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಕೇಳಿ ಪ್ರವಾಸ ಸಾರ್ಥಕ ಎನಿಸಿತು. ಎಲ್ಲರೂ ಪ್ರವಾಸದ ಬಗ್ಗೆ ರ್ಚಚಿಸುತ್ತಾ ಊಟಕ್ಕೆ ಕುಳಿತೆವು. ಎಲ್ಲರೂ ತಂದಿರುವುದನ್ನು ಹಂಚಿಕೊಂಡು ಸವಿದೆವು. ಕಮಲಾಪುರ ಮ್ಯೂಸಿಯಂ ನೋಡಿ ಹಳೆಯ ಕಾಲದ ನಾಣ್ಯಗಳು, ಶಾಸನಗಳ ಪರಿಚಯವಾಯಿತು. ಹಂಪಿಯಲ್ಲಿ ತುಂಬಾ ತಿರುಗಿ ಸುಸ್ತಾಗಿದ್ದ ನಮಗೆ ಮನಸಿಗೆ ಮುದ ನೀಡುವ ಹಾಗೆ ತುಂಗಭದ್ರಾ ಅಣೆಕಟ್ಟು ಸಮೀಪದಲ್ಲಿ ನೀರಿನ ಕಾರಂಜಿ ನೋಡುತ್ತಾ ಆ ನೀರಿನಂತೆ ಗೆಳೆಯರೆಲ್ಲರೂ ಸೇರಿ ಕುಣಿದು ಕುಪ್ಪಳಿಸಿದೆವು. ಅಲ್ಲಿಂದ ಊರಿಗೆ ಸಾಗುವ ಹಾದಿಯಲ್ಲಿ ಬಸ್​ನಲ್ಲಿ ‘ಕೇಳಿಸದೇ ಕಲ್ಲು ಕಲ್ಲಿನಲಿ, ಕನ್ನಡ ನುಡಿ ಹಂಪೆಯ ಗುಡಿ..’ಹಾಡನ್ನು ಕೇಳುತ್ತಾ ಮನಸು ಮಾತ್ರ ಅಲ್ಲೇ ಇತ್ತು. ಆದರೆ ನಮ್ಮ ದೈಹಿಕ ಪ್ರಯಾಣ ಮಾತ್ರ ಊರಿನ ಕಡೆ ಸಾಗುತ್ತಿತ್ತು.

    | ಸಂಜನಾ ಕೆಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಟಿ ಬಸಾಪುರ ಚೌಡಾಪುರ ಕ್ಲಸ್ಟರ್, ಕೂಡ್ಲಿಗಿ

    ಪ್ರವಾಸದಿಂದ ಕಲಿತ ಪಾಠಗಳು

    ಪ್ರವಾಸ ಉಲ್ಲಾಸ; ಮಕ್ಕಳ ಪ್ರವಾಸದ ಅನುಭವ ಕಥನ..ಈ ವರ್ಷ ನಮ್ಮ ಶಾಲೆಯ ವತಿಯಿಂದ ಕೇರಳ ಹಾಗೂ ತಮಿಳುನಾಡಿಗೆ ಶೈಕ್ಷಣಿಕ ಪ್ರವಾಸ ಕರೆದುಕೊಂಡು ಹೋಗಿದ್ದರು. ಅರ್ಧ ದಿವಸ ರೈಲಿನಲ್ಲಿ ಪ್ರಯಾಣ ಬೆಳೆಸಿ, ಕೇರಳದ ಕೊವಲಂನಲ್ಲಿಯೇ ತಂಗಿ ಅಲ್ಲಿನ ಸುತ್ತ ಮುತ್ತ ಸ್ಥಳಗಳನ್ನು ನೋಡಿದೆವು. ಮೊದಲ ದಿನ ತಿರುವನಂತಪುರಂನಲ್ಲಿ ನೇಪಿಯರ್ ವಸ್ತುಸಂಗ್ರಹಾಲಯದಲ್ಲಿ ಪ್ರಾಚೀನ ಶಿಲೆಗಳು, ದಂತದ ಶಿಲೆಗಳು, ರಥ, ದೇವಾಲಯದ ಮಾದರಿ, ತರ ತರಹದ ಹಳೆಯ ನಾಣ್ಯಗಳು ಕಂಡೆವು. ಶ್ರೀ ಚಿತ್ರ ಆರ್ಟ್ ಗ್ಯಾಲರಿಯಲ್ಲಿ ರಾಜ ರವಿ ವರ್ಮರವರ ಚಿತ್ರಕಲೆಗಳನ್ನು ವೀಕ್ಷಿಸಿದೆವು. ನಂತರ ಅಲ್ಲಿಯೇ ಹತ್ತಿರ ಇದ್ದ ಮೃಗಾಲಯದಲ್ಲಿ ತರತರಹದ ಕೋತಿಗಳು, ಹಾವುಗಳು, ಪಕ್ಷಿಗಳು, ಕಾಡೆಮ್ಮೆ, ಬಿಳಿ ಹುಲಿ ಮತ್ತು ಅನೇಕ ಪ್ರಾಣಿಗಳನ್ನು ನೋಡಿದೆವು. ಮುಂದಿನ ದಿನ ಬೆಳಗಿನ ಜಾವ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದೆವು.ಅಲ್ಲಿನ ಶಿಲೆಗಳು, ಕೆತ್ತನೆಗಳು ಅತ್ಯಂತ ಮನೋಹರವಾಗಿತ್ತು. ಇದರ ನಂತರ ವೇಲಿ ಹಳ್ಳಿಗೆ ಹೋಗಿದ್ದೆವು. ಅಲ್ಲಿ ವೇಲಿ ನದಿಯು ಅರಬ್ಬಿ ಸಮುದ್ರ ಸೇರುತ್ತದೆ. ಅಂದಿನ ಸಂಜೆ ಕೋವಲಂ ಬೀಚ್​ನಲ್ಲಿ ಆಟವಾಡಿದೆವು. ಇಲ್ಲಿ ಅಲೆಗಳ ಪ್ರಮಾಣ, ಪರಿಮಾಣ ಹೇಗಿರುತ್ತದೆ ಎಂಬುದನ್ನು ಪ್ರತ್ಯಕ್ಷವಾಗಿ ಅನುಭವಿಸಬಹುದು. ಮುಂದಿನ ದಿನ ತಮಿಳುನಾಡಿನಲ್ಲಿ ಸುಚಿಂದ್ರಂ ದೇವಸ್ಥಾನ ನೋಡಿದ ನಂತರ ವಿವೇಕಾನಂದ ಸ್ಮಾರಕ ಶಿಲೆ ಮತ್ತು ಅಲ್ಲಿ ಮೂರು ಸಮುದ್ರ ಸಂಗಮವಾಗಿರುವುದನ್ನು ಕಾಣಬಹುದು. ಸೂರ್ಯಾಸ್ತ ನೋಡಿದ ನಂತರ ಕೇರಳದ ಮುನ್ನಾರ್​ನಲ್ಲಿ ಪಶ್ಚಿಮ ಘಟ್ಟ ಮತ್ತು ಪೆಟ್ಟಿ ಅಣೆಕಟ್ಟು, ಮತ್ತುಪೆಟ್ಟಿ ಕೆರೆ, ಸಣ್ಣ ಜಲಪಾತಗಳು, ಇಕೋ ಪಾಯಿಂಟ್​ಗಳನ್ನು ನೋಡಿದೆವು. ಕೊನೆಯ ದಿನ ಅಲಪ್ಪುಝುದ ಅಲಪ್ಪಿ ಕೆರೆಯಲ್ಲಿ ಒಂದು ಗಂಟೆ ಮೂವತ್ತು ನಿಮಿಷ ಬೋಟಿನಲ್ಲಿ ಸವಾರಿ ಮಾಡಿದೆವು. ನಂತರ ಕರ್ನಾಟಕದ ಕಡೆ ಪ್ರಯಾಣ ಮಾಡಿದೆವು. ಊಟದಲ್ಲಿ ಏನು ಕೊರತೆ ಇರಲಿಲ್ಲ. ಈ ಪ್ರವಾಸದಿಂದಾಗಿ ನಾವು ಜ್ಞಾನ, ಬೆಳಗ್ಗೆ ಬೇಗ ಏಳುವುದು, ಅಲ್ಲಿನ ಜನ ಜೀವನ, ಒಡನಾಟ, ಪ್ರಾಚೀನ ಕಲೆಗಳ ಪ್ರತ್ಯಕ್ಷ ಅರಿಯುವಿಕೆ, ವಿಜ್ಞಾನ, ಪ್ರಕೃತಿಯ ಮಹತ್ವ, ದೀರ್ಘ ಪ್ರಯಾಣ , ಮನರಂಜನೆ, ಅಲ್ಲಿನ ಕಲೆ, ಸಂಸ್ಕೃತಿಯನ್ನು ಕಲಿತೆವು.

    | ವಿನಯ್. ಸಿ 10ನೇ ತರಗತಿ, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ, ಚಿತ್ರದುರ್ಗ

    ನೆನಪಾಯಿತು ಮಹಾಭಾರತ ಧಾರಾವಾಹಿ

    ಪ್ರವಾಸ ಉಲ್ಲಾಸ; ಮಕ್ಕಳ ಪ್ರವಾಸದ ಅನುಭವ ಕಥನ..ಕಳೆದ ತಿಂಗಳು ನಮ್ಮ ಶಾಲೆಯಿಂದ ಬೆಂಗಳೂರಿನ ಕಸ್ತೂರಿಬಾ ರಸ್ತೆಯಲ್ಲಿರುವ ಮ್ಯೂಸಿಯಂಗೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಂಡಿದ್ದರು. ಕಸ್ತೂರಿ ಬಾ ಮ್ಯೂಸಿಯಂನಲ್ಲಿ ಆಟ ಆಡಬಹುದು, ವಾಟರ್ ಗೇಮ್ ಇರುತ್ತೆ, ಸ್ನೋ ಪಾರ್ಕ್ ಇರುತ್ತೆ, ಸ್ನೇಹಿತರ ಜತೆ ಸೇರಿ ಎಲ್ಲ ಚೆನ್ನಾಗಿ ಆಟ ಆಡಬಹುದು ಎಂದು ಅಂದುಕೊಂಡಿದ್ದೆವು. ಸಂಜೆ ಮನೆಗೆ ಹೋದಾಗ ಅಪ್ಪನಿಗೆ ತಿಳಿಸಿದೆ. ಕುತೂಹಲದಿಂದ ‘ಅಲ್ಲಿ ಏನಿರುತ್ತೆ?’ ಎಂದು ಕೇಳಿದೆ. ಅದಕ್ಕೆ ನಮ್ಮ ಅಪ್ಪ, ಅದೊಂದು ವಸ್ತು ಸಂಗ್ರಹಾಲಯ. ಈ ದೇಶದ ವಿವಿಧ ರಾಜಮನೆತನಗಳ ಕಲಾಕೃತಿ, ಅವರು ಬಳಸುತಿದ್ದ ಕತ್ತಿ ಗುರಾಣಿಗಳು, ವಸ್ತ್ರ ಆಭರಣ, ಚಿತ್ರಕಲೆಗಳು, ಶಾಸನಗಳು, ಫಿರಂಗಿ ಸೇರಿದಂತೆ ಹಲವು ಐತಿಹಾಸಿಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಅಲ್ಲಿಗೆ ಹೋಗಿ ಬಂದ ಮೇಲೆ ನೋಡಿದ ಎಲ್ಲ ವಿಷಯಗಳನ್ನು ಬಂದು ಹೇಳಬೇಕು ಎಂದು ತಿಳಿಸಿದರು.

    ಬೆಳಗ್ಗೆ 8.00 ಗಂಟೆಗೆ ಊಟದ ಬ್ಯಾಗಿಗೆ ಸ್ನಾಕ್ಸ್, ಫೂ›ಟ್ ಜತೆಗೆ ಮಧ್ಯಾಹ್ನದ ಊಟವನ್ನು ಅಮ್ಮ ಡಬ್ಬಿಗೆ ಹಾಕಿ ಇಟ್ಟಿದ್ದರು. ಅಪ್ಪ ಶಾಲೆ ಬಳಿ ಬಿಟ್ಟಾಗ ನಾವು ಹೊರಡುವ ಬಸ್ ಆಗಲೇ ರೆಡಿಯಾಗಿ ನಿಂತಿತ್ತು. ನಮ್ಮ ಶಾಲೆಯ ಮುಖ್ಯ ಶಿಕ್ಷಕರಾದ ಶೈಲಜಾ ತುಳಸಿ ಮೇಡಂ ಎಲ್ಲರನ್ನು ಬಸ್ಸಿಗೆ ಹತ್ತಿಸಿ ಬೀಳ್ಕೊಟ್ಟರು. ಬಸ್ ಬೆಂಗಳೂರಿನ ವಿವಿಧ ರಸ್ತೆಗಳಲ್ಲಿ ಚಲಿಸುತ್ತಿತ್ತು. ಕಿಟಕಿ ಪಕ್ಕದಲ್ಲಿ ಕುಳಿತಿದ್ದ ನನಗೆ ರೋಡ್​ನ ಅಕ್ಕಪಕ್ಕದಲ್ಲಿ ನೋಡುತ್ತಾ ನೋಡುತ್ತಾ ಸ್ಥಳ ಬಂದಿದ್ದೆ ಗೊತ್ತಾಗಲಿಲ್ಲ. ಕೆಳಗೆ ಇಳಿದಾಗ ನಮ್ಮ ಗಣಿತ ಶಿಕ್ಷಕರಾದ ಅಶ್ವಿನಿ ಮೇಡಂ ಎಲ್ಲರನ್ನೂ ಸಾಲಾಗಿ ನಿಲ್ಲಿಸಿದರು. ‘ಎಲ್ಲರೂ ಸಾಲಾಗಿ ಹೋಗಬೇಕು, ನಿಶ್ಯಬ್ದವಾಗಿರಬೇಕು.. ವಸ್ತುಗಳನ್ನು ಮುಟ್ಟಬಾರದು’ ಎಂದೆಲ್ಲಾ ತಿಳಿಸಿದರು. ಹೋಗುವ ಮೊದಲು ಎಲ್ಲರೂ ಮರದಡಿಯಲ್ಲಿ ಕುಳಿತು ತಂದಿದ್ದ ತಿಂಡಿ ತಿಂದೆವು. ನಮ್ಮ ಕೂಗಾಟದ ಮಧ್ಯೆ ಅಕ್ಕಪಕ್ಕದ ಮರಗಳಲ್ಲಿದ್ದ ಹಕ್ಕಿಗಳು ದನಿಗೂಡಿಸುತಿದ್ದವು..

    ಒಳಗೆ ಹೋಗುತ್ತಾ ಅಲ್ಲಿಯೇ ಇದ್ದ ಫಿರಂಗಿ, ಕಲ್ಲಿನ ಆಕೃತಿ ನೋಡುತ್ತಾ ನಮ್ಮ ಟೀಚರ್ ಅಲ್ಲಿರುವ ಮಾಹಿತಿ ಓದಿ ತಿಳಿಸುತ್ತಾ ಒಳಗೆ ಕರೆದುಕೊಂಡು ಹೋದರು. ಸಂಗ್ರಹಾಲಯದಲ್ಲಿ ಒಂದು ಸುತ್ತು ಹಾಕಿದರೆ ದೇಶದ ವಿವಿಧ ರಾಜರು, ಸೈನಿಕರು ಬಳಸುತಿದ್ದ ಕತ್ತಿ, ಈಟಿ, ಬರ್ಚಿ, ಕೊಡಲಿ, ವಿವಿಧ ರೀತಿಯ ಕಠಾರಿ, ಸೇರಿದಂತೆ ರಾಜರು, ಸೈನಿಕರು ಧರಿಸುತಿದ್ದ ಬಟ್ಟೆಗಳು, ತಲೆಯ ರಕ್ಷಣೆಗೆ ತೊಡುತಿದ್ದ ರಕ್ಷಾ ಕವಚಗಳು, ಸಂಗೀತಾ ವಾದ್ಯಗಳು, ತಮಟೆಗಳು, ವೀಣೆ, ತಂಬೂರಿ, ತಬಲಾ, ಮೃದಂಗ, ಓಲಗ ಸೇರಿದಂತೆ ವಿವಿಧ ರೂಪಕಗಳು ನನ್ನನ್ನು ಆಕರ್ಷಿಸಿತು. ಶಾಸನಗಳು, ವಿವಿಧ ದೇವರ ಕಲ್ಲಿನ ಕಲಾಕೃತಿಗಳು, ವಿಗ್ರಹಗಳು, ಚಿತ್ರಪಟಗಳು, ಕಲಾಕೃತಿಗಳು ಸೇರಿದಂತೆ ನೂರಾರು ಚಿತ್ರಕಲೆಗಳನ್ನು ನೋಡಿ ಸಂತೋಷವಾಯಿತು. ಅಲ್ಲಿಂದ ನೋಡಿಕೊಂಡು ಹೊರಗೆ ಬಂದ ಮೇಲೆ ನಾನು ನೋಡುತ್ತಿದ್ದ ಮಹಾಭಾರತ ಧಾರಾವಾಹಿ ನೆನಪಾಯಿತು. ಅದರಲ್ಲೂ ಹೀಗೆ ಕತ್ತಿ ಈಟಿಗಳನ್ನು ಬಳಸುತಿದ್ದದ್ದು ನೆನಪಾಯಿತು. ಹೊರಗೆ ಬಂದು ಕ್ಯಾಂಟೀನ್ ಜಾಗದಲ್ಲಿ ಎಲ್ಲರೂ ಕುಳಿತು ಒಟ್ಟಿಗೆ ಊಟ ಮಾಡಿದೆವು.

    ಬಸ್ಸಿನಲ್ಲಿ ವಾಪಸ್ ಬರುವಾಗ ನಾವು ನೋಡಿದ್ದ ವಸ್ತುಗಳನ್ನು ಟೀಚರ್​ಗೆ ತಿಳಿಸಲು ಮುಗಿಬಿದ್ದೆವು. ಮತ್ತೆ ಶಾಲೆಗೆ ಬಂದಾಗ ಸಂಜೆ ನಾಲ್ಕು ಗಂಟೆ ಆಗಿತ್ತು. ಬಸ್ ಇಳಿದ ತಕ್ಷಣ ಅಪ್ಪ ಕಾಯುತ್ತಾ ನಿಂತಿದ್ದರು. ಅವರಿಗೆ ಅಲ್ಲಿ ನೋಡಿದ ಎಲ್ಲಾ ವಿಷಯಗಳನ್ನು ತಿಳಿಸಿದೆ. ‘ಅಲ್ಲಿ ಒಡೆದು ಹೋಗಿರುವ ವಿಗ್ರಹಗಳು, ಹಳೆಯದಾದ ಫಿರಂಗಿಗಳ ಕಥೆಯನ್ನು, ಅಳಿದುಳಿದ ಸಾಮ್ರಾಜ್ಯಗಳ ಕುರುಹುಗಳು, ಮಹಾ ಸಾಮ್ರಾಜ್ಯವಾಗಿ ಬೆಳೆದ ಕನ್ನಡ ನಾಡಿನ ಮನೆತನಗಳನ್ನು, ವಸ್ತು ಸಂಗ್ರಹಾಲಯದಲ್ಲಿ ನೋಡುವಂತಾಗಿದೆ’ ಎಂದು ತಿಳಿಸಿದರು. ನನ್ನ ಪ್ರವಾಸವು ಬಹಳ ಅತ್ಯಮೂಲ್ಯವಾಗಿತ್ತು. ಆದ್ದರಿಂದ ಈ ಪ್ರವಾಸವನ್ನು ಆಯೋಜಿಸಿದ್ದ ನನ್ನ ಶಾಲೆಯ ಎಲ್ಲಾ ಶಿಕ್ಷಕರಿಗೂ ನನ್ನ ವಂದನೆಗಳು.

    | ಡಿ ವರ್ಷಿಕಾ ಗೌಡ ದೊಡ್ಡಗೊಲ್ಲರಹಟ್ಟಿ, ಬೆಂಗಳೂರು

    ಬೇರೆ ಏನನ್ನಾದರೂ ಬರೆದಿರುವ ನೋಟುಗಳನ್ನು ಸ್ವೀಕರಿಸುವಂತಿಲ್ಲವೇ?: ಇಲ್ಲಿದೆ ಸತ್ಯಾಂಶ

    ಪತಿ ಹೃದಯಾಘಾತಕ್ಕೆ ಬಲಿ; ಒಂದೇ ಉರುಳಿಗೆ ಮಗನೊಂದಿಗೆ ಕೊರಳೊಡ್ಡಿ ಪ್ರಾಣ ಬಿಟ್ಟ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts