More

    ತೊಪ್ಲು ಕಿಂಡಿ ಅಣೆಕಟ್ಟು ನಿರ್ಲಕ್ಷ್ಯ

    ಕುಂದಾಪುರ: ದಶಕದ ಹಿಂದೆ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟು ವಂಡ್ಸೆ ಹೋಬಳಿಯ ಕೃಷಿ ಭೂಮಿಗೆ ನೀರುಣಿಸುತ್ತಿಲ್ಲ. ಬಾವಿಯಲ್ಲಿ ನೀರಿನ ಮಟ್ಟ ಏರಿದರೂ ನೀರೆಲ್ಲ ಸವಳು. ಕಾಲಕಾಲಕ್ಕೆ ಸರಿಯಾಗಿ ಕಿಂಡಿ ಅಣೆಕಟ್ಟು ಹಲಗೆ ಜೋಡಣೆ ವೈಪರೀತ್ಯಕ್ಕೆ ಕೃಷಿಕರು, ಸಾರ್ವಜನಿಕರು ಕಂಗಾಲಾಗಿದ್ದಾರೆ.

    ತೊಪ್ಲು ಕಿಂಡಿ ಅಣೆಕಟ್ಟು ನೀರು ಹಿಡಿದಿಡಲು ವಿಫಲ ಹಾಗೂ ಸಂದುಗಳ ಹಲಗೆ ತೆಗೆದು ಮೀನು ಹಿಡಿಯುವ ಕುರಿತು ಜ.2ರಂದು ಸಂಕಷ್ಟ ತಂದಿಟ್ಟ ಕಿಂಡಿ ಅಣೆಕಟ್ಟು ಎಂಬ ಶೀರ್ಷಿಕೆಯಲ್ಲಿ ವಿಜಯವಾಣಿ ವರದಿ ಪ್ರಕಟಿಸಿದ್ದು, ಸ್ಥಳಕ್ಕೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕಳುಹಿಸಿ ಸಮಸ್ಯೆ ಪರಿಹರಿಸುವ ಬಗ್ಗೆ ಬೈಂದೂರು ಶಾಸಕರು ಭರವಸೆ ನೀಡಿದ್ದರೂ ಈವರೆಗೂ ಸಣ್ಣ ನೀರಾವರಿ ಇಲಾಖೆ ಯಾವೊಬ್ಬ ಬಾರದಿರುವುದು ಕೃಷಿಕರನ್ನು ಕೆರಳಿಸಿದೆ. ತೊಪ್ಲು ಕಿಂಡಿ ಅಣೆಕಟ್ಟು ನೀರು ಸೋರಿ ಹೋಗಿ, ಅಣೆಕಟ್ಟಿನೊಳಗೆ ಉಪ್ಪು ನೀರು ನುಗ್ಗುತ್ತದೆ. ಪ್ರತಿ ವರ್ಷ ಹಲಗೆ ಜೋಡಣೆ ಸಮರ್ಪಕವಾಗಿ ಮಾಡದೆ ಸಿಹಿ ನೀರು ಮರೀಚಿಕೆಯಾಗುತ್ತದೆ. ವಂಡ್ಸೆ ನಂದ್ರೋಳಿಯಲ್ಲಿ ಭತ್ತದ ಕೃಷಿಗೆ ಕಿಂಡಿ ಅಣೆಕಟ್ಟು ಉಪ್ಪು ನೀರು ನುಗ್ಗಿ ಭತ್ತದ ಕೃಷಿ ಹಾಳಾಗಿ ಹೋಗಿದೆ. ಈ ವರ್ಷ ಕೂಡ ಕಿಂಡಿ ಅಣೆಕಟ್ಟು ಸೋರುತ್ತಿದ್ದು, ಸಿಹಿನೀರು ಗಗನ ಕುಸುಮವಾಗಿದೆ.

    ಇಷ್ಟೆಲ್ಲ ಸಮಸ್ಯೆ ಇದ್ದರೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಕ್ರಮ ತೆಗೆದುಕೊಂಡಿಲ್ಲ. ಕಿಂಡಿ ಅಣೆಕಟ್ಟು ಹಲಗೆ ಜೋಡಣೆ ರೈತರಿಗೆ ಪ್ರಯೋಜನಕ್ಕಾಗಿದೆಯೋ ಅಥವಾ ಗುತ್ತಿಗೆದಾರರ ಲಾಭಕ್ಕಾಗಿಯೋ ಎಂದು ಕೃಷಿಕರು ಪ್ರಶ್ನಿಸಿದ್ದಾರೆ. ಕಿಂಡಿ ಅಣೆಕಟ್ಟು ಒಳಗೆ ಉಪ್ಪು ನೀರು ನುಗ್ಗುವ ಮುನ್ನ ಹಲಗೆ ಹಾಕಬೇಕೆಂದಿದ್ದರೂ ಉಪ್ಪುನೀರು ಮೇಲಕ್ಕೆ ಹೋದ ನಂತರ ಹಲಗೆ ಹಾಕಲಾಗುತ್ತದೆ. ಹಲಗೆ ಹಾಕಿ ಎರಡೂ ಸಂಧಿನಲ್ಲಿ ಮಣ್ಣು ತುಂಬಿ ನೀರು ಮೇಲಕ್ಕೆ ಹೋಗದಂತೆ ತಡೆಯಬೇಕಿದ್ದರೂ ಹಲಗೆ ಹಾಕಿದ ಕಿಂಡಿಗಳಿಂದ ಸರಾಗ ನೀರು ಮೇಲಕ್ಕೆ ಹೋಗುತ್ತದೆ. ಇದರಿಂದ ಸಿಹಿ ನೀರು ಸಂಗ್ರಹ ಹೊಳೆ ನೀರೆಲ್ಲ ಉಪ್ಪು. ಹೊಳೆ ನೀರು ಉಪ್ಪಾಗುವುದರಿಂದ ಪರಿಸರದ ಬಾವಿಗಳ ನೀರು ಉಪ್ಪಾಗಿ ಕುಡಿಯುವ ನೀರಿಗೂ ತತ್ವಾರ ಬರುತ್ತಿದೆ.

    ಸಣ್ಣ ನೀರಾವರಿ ಇಲಾಖೆಗೆ ರೈತರ ಹಿತಾಸಕ್ತಿಗಿಂತ ಗುತ್ತಿಗೆದಾರರ ಹಿತಾಸಕ್ತಿಯೇ ಮುಖ್ಯವಾದಂತಿದೆ. ಕಿಂಡಿ ಅಣೆಕಟ್ಟು ನಿರ್ವಹಣೆ ಬಗ್ಗೆ, ನೀರಿನ ಸಂಗ್ರಹ, ಬಳಕೆ ಯಾವುದರ ಬಗ್ಗೆಯೂ ತಲೆ ಕಡಿಸಿಕೊಳ್ಳುತ್ತಿಲ್ಲ್ಲ. ಕಿಂಡಿ ಅಣೆಕಟ್ಟು ಹಲಗೆ ಹಾಳಾಗಿದ್ದು, ಕಳೆದ ಬಾರಿ 50 ಸಾವಿರ ರೂ. ವೆಚ್ಚದಲ್ಲಿ ಹೊಸ ಹಲಗೆ ಅಳವಡಿಸಲಾಗಿತ್ತು. ಸಣ್ಣ ನೀರಾವರಿ ಇಲಾಖೆ ತಕ್ಷಣ ಕಿಂಡಿ ಅಣೆಕಟ್ಟು ವೈಪರೀತ್ಯ ಸರಿಪಡಿಸಬೇಕು.
    -ಸುರೇಂದ್ರ ಪೂಜಾರಿ, ಆರ್‌ಟಿಐ ಕಾರ್ಯಕರ್ತ, ತೊಪ್ಲು

    ತೊಪ್ಲು ಕಿಂಡಿ ಅಣೆಕಟ್ಟು ಸಮಸ್ಯೆ ಬಗ್ಗೆ ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆ ಗಮನಕ್ಕೆ ತಂದರೂ ಇದೂವರಗೆ ಏನಾಗಿದೆ ಎಂದು ನೋಡಲು ಯಾರೊಬ್ಬರೂ ಬಂದಿಲ್ಲ. ಸಣ್ಣ ನೀರಾವರಿ ಇಲಾಖೆ ಬೇಜವಾಬ್ದಾರಿಗೆ ಬೇಸತ್ತು ಹೆಮ್ಮಾಡಿ, ಕಟ್‌ಬೇಲ್ತೂರು ಹಾಗೂ ಹಕ್ಲಾಡಿ ಗ್ರಾಪಂ ಎಲ್ಲ ಸದಸ್ಯರು ಕಿಂಡಿ ಅಣೆಕಟ್ಟು ಸಮಸ್ಯೆಯಿಂದ ಮುಕ್ತಿ ಕೊಡಿ ಎಂದು ಬೇಡಿಕೆ ಇಟ್ಟುಕೊಂಡು ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಕೂರುತ್ತೇವೆ.
    -ಶರತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ, ಕಟ್‌ಬೇಲ್ತೂರು ಗ್ರಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts