More

    ದಕ್ಷಿಣ ಆಫ್ರಿಕಾ ಎದುರು ಭಾರತ ಪರಾಭವ: ಮೂರು ಪಂದ್ಯಗಳ ಸರಣಿ ಸಮಬಲ

    ಗೆಬರ್ಹ: ಎಡಗೈ ಆರಂಭಿಕ ಟೋನಿ ಡಿ ಜಾರ್ಜಿ (119*ರನ್, 112 ಎಸೆತ, 9 ಬೌಂಡರಿ, 6 ಸಿಕ್ಸರ್) ಚೊಚ್ಚಲ ಶತಕದ ಎದುರು ಮಂಕಾದ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು 8 ವಿಕೆಟ್‌ಗಳಿಂದ ಪರಾಭವಗೊಂಡಿದೆ. ಇದರೊಂದಿಗೆ ಏಡನ್ ಮಾರ್ಕ್ರಮ್ ಬಳಗ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ನಿರ್ಣಾಯಕ ಪಂದ್ಯ ಗುರುವಾರ ಪಾರ್ಲ್‌ನಲ್ಲಿ ನಡೆಯಲಿದೆ.

    ಸೇಂಟ್ ಜಾರ್ಜ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ, ಯುವ ಬ್ಯಾಟರ್ ಸಾಯಿ ಸುದರ್ಶನ್ (62 ರನ್, 83 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ಕೆಎಲ್ ರಾಹುಲ್ (56 ರನ್, 64 ಎಸೆತ, 7 ಬೌಂಡರಿ) ಅರ್ಧಶತಕ ಹೊರತಾಗಿ ಇತರ ಬ್ಯಾಟರ್‌ಗಳ ವೈಲ್ಯದಿಂದ 46.2 ಓವರ್‌ಗಳಲ್ಲಿ 211 ರನ್‌ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು. ಪ್ರತಿಯಾಗಿ ರೀಜಾ ಹೆಂಡ್ರಿಕ್ಸ್ (52 ರನ್, 81 ಎಸೆತ, 7 ಬೌಂಡರಿ) ಹಾಗೂ ಟೋನಿ ಡಿ ಜಾರ್ಜಿ ಒದಗಿಸಿದ ಉತ್ತಮ ಆರಂಭ ಬಲದಿಂದ ದಕ್ಷಿಣ ಆಫ್ರಿಕಾ 42.3 ಓವರ್‌ಗಳಲ್ಲಿ 2 ವಿಕೆಟ್‌ಗೆ 215 ರನ್‌ಗಳಿಸಿ ಸುಲಭ ಜಯ ಸಾಧಿಸಿತು.

    ಜಾರ್ಜಿ ಗೆಲುವಿನ ಶತಕ: ಭಾರತೀಯ ಬ್ಯಾಟರ್‌ಗಳ ವೈಲ್ಯ ಕಂಡ ಬಳಿಕ ಬೌಲರ್‌ಗಳೂ ನಿರಾಸೆ ಮೂಡಿಸಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಅರ್ಷದೀಪ್-ಆವೇಶ್ ಜೋಡಿ ಎದುರು ರೀಜಾ ಹೆಂಡ್ರಿಕ್ಸ್-ಟೋನಿ ಡಿ ಜಾರ್ಜಿ ಎಚ್ಚರಿಕೆ ಬ್ಯಾಟಿಂಗ್ ನಡೆಸಿ ಮೊದಲ ವಿಕೆಟ್‌ಗೆ 130 ರನ್ ಪೇರಿಸಿ ಹರಿಣಗಳಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟರು.109 ಎಸೆತದಲ್ಲಿ ಚೊಚ್ಚಲ ಏಕದಿನ ಶತಕ ಸಿಡಿಸಿದ ಜಾರ್ಜಿ 2ನೇ ವಿಕೆಟ್‌ಗೆ ರಸ್ಸಿ ವಾನ್ ಡರ್ ಡುಸೆನ್ (36) ಜತೆಗೂಡಿ 76 ರನ್ ಕಸಿದು ಗೆಲುವು ಸುಲಭಗೊಳಿಸಿದರು. 3 ರನ್ ಅಗತ್ಯವಿದ್ದಾಗ ಸಿಕ್ಸರ್ ಸಿಡಿಸಿದ ಜಾರ್ಜಿ ಗೆಲುವಿನ ರೂವಾರಿ ಎನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts