More

    ಕಂಬಳಗದ್ದೆಗಿಂತಲೂ ಕಡೆ ತೊಂಡ್ಲೆ ರಸ್ತೆ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮ ತೊಂಡ್ಲೆಯಿಂದ ನಾಲ್ಕಾರು ಊರುಗಳ ಸಂಪರ್ಕಿಸುವ ರಸ್ತೆ ಕಂಬಳಗದ್ದೆಗಿಂತಲೂ ಕಡೆಯಾಗಿ ಹೋಗಿದೆ. ಮಳೆಗಾಲದಲ್ಲಿ ರಸ್ತೆ ಹಳ್ಳದಂತಾಗಿ ದೊಡ್ಡ ದೊಡ್ಡ ಕೊರಕಲು ಬೀಳುತ್ತದೆ. ಪಾದಾಚಾರಿಗಳು ಕೆಸರಿನಲ್ಲಿ ಹೂತುಹೋಗುವ ಕಾಲೆತ್ತಿ ಹೆಜ್ಜೆ ಹಾಕುವುದೇ ಸಾಹಸ. ಶಾಲೆ, ಕಾಲೇಜ್‌ಗೆ ಹೋಗುವ ವಿದ್ಯಾರ್ಥಿಗಳು, ಅಂಗನವಾಡಿ ಪುಟಾಣಿಗಳು, ಕೃಷಿಕರಿಗೆ ಇದೇ ಪ್ರಮುಖ ಸಂಪರ್ಕ ರಸ್ತೆ.

    ಕಾಶಿಕೊಡ್ಲು, ಹುಣ್ಸೆಮಕ್ಕಿ, ಮಳಾಳಿ, ಕೆಳಾಡಿ, ತೊಂಡ್ಲೆ ಪರಿಸರದ ಜೀವನಾಡಿಯಂತಿರುವ ರಸ್ತೆಯಿದು. ರಾಜ್ಯ ಹೆದ್ದಾರಿಯಿಂದ ನಾಲ್ಕು ಕಿ.ಮೀ. ರಸ್ತೆ ಮಳೆಗಾದಲ್ಲಿ ಕೆಸರು ಮಡ್ಡಿಯಾಗುತ್ತದೆ. ಕೃಷಿ ಮತ್ತಿತರ ನಿತ್ಯ ಕಾರ್ಯಗಳಿಗೆ ಹೋಗುವವರು, ಶಾಲಾ ಕಾಲೇಜಿಗೆ ಹೋಗುವ ನೂರಾರು ವಿದ್ಯಾರ್ಥಿಗಳು ಅನಿವಾರ್ಯವಾಗಿ ಈ ರಸ್ತೆಯಲ್ಲೇ ಸಂಚಾರ ಮಾಡಬೇಕು. ಮಳೆಗಾಲದಲ್ಲಿ ನೀರು ರಸ್ತೆಯಲ್ಲೇ ಹರಿದು ಹೋಗುವುದರಿಂದ ಹೊಳೆಯಂತಾಗುತ್ತದೆ.ಚಪ್ಪಲಿ ಕೈಯಲ್ಲಿ ಹಿಡಿದು ನಡೆಯಬೇಕು.

    ಸ್ವಾತಂತ್ರ್ಯ ಸಿಕ್ಕಿ 75 ವರ್ಷದ ಬಳಿಕವೂ ಹಳ್ಳಿಗಳಿಗೆ ಮೂಲಸೌಲಭ್ಯ ಒದಗಿಸಲು ವಿಫಲವಾಗಿರುವುದಕ್ಕೆ ತೊಂಡ್ಲೆಯೇ ಸಾಕ್ಷಿ.ಪ್ರತಿ ಚುನಾವಣೆಯಲ್ಲಿ ರಸ್ತೆ ಮಾಡುವ ಪೊಳ್ಳು ಆಶ್ವಾಸನೆಗೆ ಬೇಸತ್ತ ಜನರು ಮತದಾನ ಬಹಿಷ್ಕಾರದ ನಿರ್ಧಾರಕ್ಕೆ ಬಂದಿದ್ದಾರೆ. ಉಡುಪಿ ಜಿಲ್ಲೆಯಿಂದ ಮೊಟ್ಟಮೊದಲು ಸೈನ್ಯ ಸೇರಿದ ಮಹಿಳೆಯ ಊರು ಇರುವುದು ಇಲ್ಲೇ ಎನ್ನುವುದು ವಿಶೇಷ.

    ಗ್ರಾಮೀಣ ಭಾಗದ ಮೂಲಸೌಲಭ್ಯ ಎಷ್ಟು ಕನಿಷ್ಟ ಮಟ್ಟದಲ್ಲಿದೆ ಎನ್ನುವುದಕ್ಕೆ ತೊಂಡ್ಲೆ ಸಾಕ್ಷಿ.ಸುಮಾರು 70 ಮನೆಗಳಿಗೆ ಇದೊಂದೇ ಸಂಪರ್ಕ ರಸ್ತೆ . ರಸ್ತೆ ಅವ್ಯವಸ್ಥೆಯಿಂದಾಗಿ ಜನ ಹೈನುಗಾರಿಕೆ ಕೈಬಿಟ್ಟಿದ್ದಾರೆ. ತ್ರಿಫೇಸ್ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಪಂಪ್ ಸ್ವಿಚ್ ಹಾಕಿದರೆ ಶಬ್ದ ಬರುತ್ತದೆಯೇ ಹೊರತು ನೀರು ಎತ್ತುವುದಿಲ್ಲ. ವಿದ್ಯುತ್ ದೀಪಕ್ಕಿಂತ ಬುಡ್ಡಿ ದೀಪವೇ ಎಷ್ಟೋ ವಾಸಿ. ಗ್ರಾಮ ಪಂಚಾಯಿತಿ ಮುಲಾಜಿಲ್ಲದೆ ತೆರಿಗೆ ವಸೂಲು ಮಾಡಿದರೂ ಕುಡಿಯುವ ನೀರು ಇನ್ನಿತರ ಸೌಲಭ್ಯ ಕಲ್ಪಿಸಿಲ್ಲ. ಕನಿಷ್ಟ ರಸ್ತೆಯನ್ನಾದರೂ ಸರಿ ಮಾಡಿಲ್ಲ ಎನ್ನುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣ.

    ಗೋಳಿಹೊಳೆ ತೊಂಡ್ಲೆ ಕ್ರಾಸ್‌ನಿಂದ ನಮ್ಮೂರಿಗೆ ಮಳೆಗಾಲದಲ್ಲಿ ಹೋಗುವುದೆಂದರೆ ತಂತಿ ಮೇಲಿನ ಸರ್ಕಸ್. ಬೇಸಿಗೆಯಲ್ಲಿ ಧೂಳಿನ ಸ್ನಾನವಾದರೆ ಮಳೆಗಾಲದಲ್ಲಿ ಕೆಸರಿನ ಅಭಿಷೇಕ. ಶಾಲಾ ಕಾಲೇಜಿಗೆ ಹೋಗುವವರ ಪಾಡು ಶೋಚನೀಯ. ಅಂಗನವಾಡಿ ಮಕ್ಕಳು ನೀರಲ್ಲಿ ಕೊಚ್ಚಿ ಹೋದರೆ ಹೊಣೆ ಯಾರು? ನಾವು ರಸ್ತೆಗಾಗಿ ಮನವಿ,ವಿನಂತಿ ಮಾಡಿ ಸಾಕಾಗಿದೆ. ನಮ್ಮ ಸಮಸ್ಯೆ ಯಾರಿಗೂ ಅರ್ಥ ಆಗುವುದಿಲ್ಲ. ರಸ್ತೆ ಮಾಡಿಕೊಡದಿದ್ದರೆ ಮತದಾನ ಬಹಿಷ್ಕರಿಸಿ, ಮೊದಲು ರಸ್ತೆ ಮಾಡಿ, ಆಮೇಲೆ ಊರಿಗೆ ಮತ ಕೇಳಲು ಬನ್ನಿ ಎಂದು ಬ್ಯಾನರ್ ಕಟ್ಟುತ್ತೇವೆ.
    ವಿಶ್ವನಾಥ ಗೌಡ, ವಿದ್ಯಾರ್ಥಿ, ಪ್ರಥಮದರ್ಜೆ ಕಾಲೇಜ್, ಕೋಟೇಶ್ವರ

    ತೊಂಡ್ಲೆಯಿಂದ ನಾಲ್ಕು ಕಿ.ಮೀ. ಸರ್ವಋತು ರಸ್ತೆ ಮಾಡಲು ಈಗಾಗಲೇ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದು, ಗ್ರಾಮೀಣಾಭಿವೃದ್ಧಿ ಸಚಿವರ ಗಮನಕ್ಕೂ ತರಲಾಗಿದೆ. ತೊಂಡ್ಲೆ ರಸ್ತೆ ಹಂತ ಹಂತವಾಗಿ ಆದ್ಯತೆಯ ಮೇರೆಗೆ ಮಾಡಲಾಗುತ್ತದೆ. ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸೌಲಭ್ಯದ ಬಗ್ಗೆಯೂ ಗಮನ ಕೊಡಲಾಗುತ್ತದೆ.
    ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕ, ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts