More

    ತೊನಸನಳ್ಳಿ(ಎಸ್)ಯಲ್ಲಿ ಸೂರ್ಯ ದೇವರ ವಿಗ್ರಹ ಪತ್ತೆ

    ಕೆ.ರಮೇಶ ಭಟ್ಟ ಶಹಾಬಾದ್: ತೊನಸನಳ್ಳಿ (ಎಸ್) ಗ್ರಾಮದ ಮುಖ್ಯ ದ್ವಾರ ಬಳಿಯ ವೀರಭದ್ರೇಶ್ವರ ದೇವಸ್ಥಾನ ಪಕ್ಕದಲ್ಲಿ ಮನೆ ಕಟ್ಟಲು ಪಾಯ(ಬುನಾದಿ) ಅಗೆಯುತ್ತಿದ್ದಾಗ ಅಪರೂಪ ಎನ್ನಲಾಗುವ ಸೂರ್ಯ ದೇವರ ವಿಗ್ರಹ ಪತ್ತೆಯಾಗಿದೆ.

    ನಗರದಿಂದ ಪಶ್ಚಿಮಕ್ಕೆ, ಜೇವರ್ಗಿ ರಸ್ತೆಯಲ್ಲಿ ೭ ಕಿಮೀ ದೂರದಲ್ಲಿರುವ ತೊನಸನಳ್ಳಿ (ಎಸ್)ಯಲ್ಲಿ ಬಸವರಾಜ ಹೂಗಾರ ಎಂಬುವರು ತಿಪ್ಪೆ, ದೊಡ್ಡಿ ಇದ್ದ ಸ್ಥಳದಲ್ಲಿ ಮನೆ ಕಟ್ಟಲು ಪಾಯ, ಪಶ್ಚಿಮ ಭಾಗದ ಬಾಗಿಲು ಕೆಳಗೆ ನೀರಿನ ಟ್ಯಾಂಕ್ ಕಟ್ಟಲು ನೆಲ ಅಗೆಯುತ್ತಿದ್ದಾಗ ಸುಮಾರು ೬ ಅಡಿ ಆಳದಲ್ಲಿ ಬೊರಲು ಬಿದ್ದ ಕರಿ ಕಲ್ಲಿನ ಮೂರ್ತಿಯೊಂದು ಶುಕ್ರವಾರ ಬೆಳಗ್ಗೆ ೧೧ರ ಸುಮಾರಿಗೆ ಸಿಕ್ಕಿದೆ.

    ಕುತೂಹಲದಿಂದ ತೆಗೆದು ತೊಳೆದು ನೋಡಿದ್ದು, ಅದರ ಫೋಟೋ ಕ್ಲಿಕ್ಕಿಸಿ ಖ್ಯಾತ ಸಂಶೋಧಕ ಡಿ.ಎನ್. ಅಕ್ಕಿ ಅವರಿಗೆ ಸಂಬAಧಿಕರೊಬ್ಬರು ಕಳುಹಿಸಿದ್ದಾರೆ. ಅದನ್ನು ಪರಿಶೀಲಿಸಿದ ಅಕ್ಕಿ ಅವರು ಇದು ಸೂರ್ಯನ ಮೂರ್ತಿ ಎಂದು ದೃಢಪಡಿಸಿದ್ದಾರೆ. ಈ ಮೂರ್ತಿ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಖ್ಯಾತ ಸಂಶೋಧಕರಾದ ಬೆಂಗಳೂರಿನ ಡಾ.ರಾಘವೇಂದ್ರ ಕುಲಕರ್ಣಿ, ಡಾ.ಎಂ.ಜಿ. ಮಂಜುನಾಥ ಅವರಿಗೆ ಮಾಹಿತಿ ನೀಡಿದ್ದಾರೆ.
    ಎಲ್ಲ ಸಂಶೋಧಕರು ಮೂರ್ತಿಯ ಭಾವಚಿತ್ರ ಪರಿಶೀಲಿಸಿದ್ದು, ೧೨ನೇ ಶತಮಾನದ ಕಲ್ಯಾಣಿ ಚಾಲುಕ್ಯರ ಕಾಲದ್ದು. ನಿಂತಿರುವ ಭಂಗಿಯ ದ್ವಿಭುಜದ ಸೂರ್ಯ ಮೂರ್ತಿ, ತಲೆಯ ಸುಂದರ ಕೆತ್ತನೆ ಮೇಲೆ ಕಿರೀಟ, ಐದು ಹೆಡೆ ಹಾವು, ಕಿವಿಯಲ್ಲಿ ಕರ್ಣಕುಂಡಲ, ಎರಡು ಕೈಗಳಲ್ಲಿ ಕಮಲದ ಹೂವು ಹಿಡಿಯಲಾಗಿದೆ. ಇದರಲ್ಲಿ ಹಾವಿನ ಮುಖಗಳು, ಎಡಗೈಯಲ್ಲಿರುವ ಕಮಲದ ಹೂವು ಸ್ವಲ್ಪ ಮುಕ್ಕಾಗಿದೆ. ಕೊರಳಲ್ಲಿ ಯಜ್ಞೋಪವಿತ, ಟೊಂಕದಲ್ಲಿ ಉಪವಿತ, ಉದರ ಬಂಧ, ನಡುಪಟ್ಟಿ, ಕಂಠಾಭರಣ, ಸುವರ್ಣ ಹಾರ, ಕಾಲಗಡಗ ಹೊಂದಿದ್ದು, ಮೂರ್ತಿಯು ೨೭ ಇಂಚು ಎತ್ತರ, ೧೫ ಇಂಚು ಅಗಲ, ೩ ಇಂಚು ದಪ್ಪವಾಗಿದೆ. ಮೂರ್ತಿಯ ಎರಡು ಬದಿಯಲ್ಲಿ ಸೂರ್ಯನ ಪತ್ನಿಯರಾದ ಉಷಾ ಮತ್ತು ಪ್ರತ್ಯುಷಾ ಮೂರ್ತಿಗಳಿವೆ.

    ಅಂಗರಚನಾ ಶಾಸ್ತ್ರದಂತೆ ನಿರ್ಮಾಣ: ಸಂಶೋಧಕ ಡಿ.ಎನ್. ಅಕ್ಕಿ ಪ್ರಕಾರ ಸಾಮಾನ್ಯವಾಗಿ ಸೂರ್ಯ ಮೂರ್ತಿ ಕಾಲು ಎತ್ತಿ ಓಡುತ್ತಿರುವ ಕುದುರೆ ಮೇಲೆ ನಿಂತ ಸ್ಥಿತಿಯಲ್ಲಿರುತ್ತದೆ. ಈ ಮೂರ್ತಿ ಅತ್ಯಂತ ಸುಂದರವಾಗಿದ್ದು, ಅಂಗರಚನಾ ಶಾಸ್ತçದ ಪ್ರಕಾರ ನಿರ್ಮಿಸಲಾಗಿದೆ. ಮೂರ್ತಿ ಮುಖ ಚಹರೆ ಅತ್ಯಂತ ಭಾವನಾತ್ಮಕವಾಗಿದೆ. ಇಂತಹ ಮೂರ್ತಿಗಳು ಈ ಭಾಗದಲ್ಲಿ ಸಾಮಾನ್ಯವಾಗಿ ಶಿವ ಪಂಚಾಯತನ ದೇವಸ್ಥಾನದಲ್ಲಿ (ಗಣಪತಿ, ವಿಷ್ಣು, ಶಿವ, ಮಹಾಷಾಷುರ ಮರ್ಧಿನಿ, ಸೂರ್ಯ) ಹಾಗೂ ನೆಲಕ್ಕಿಂತ ಕೆಳಗಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಂಡು ಬರುತ್ತವೆ. ಈ ಮೂರ್ತಿಯೊಂದಿಗೆ ೧೨ ಇಂಚು ಎತ್ತರ, ೭ ಇಂಚು ಅಗಲದ ಒಂದು ಮೂರ್ತಿಯ ಎರಡು ಕೈ ಮಾತ್ರ ಇರುವ ಭಿನ್ನವಾಗಿರುವುದು ಸಿಕ್ಕಿದ್ದು, ಎಡಗೈಯಲ್ಲಿ ಡಮರು ಹಿಡಿದಿದ್ದು, ಕೆಳ ಭಾಗದ ಕೈ ತುಂಡಾಗಿದೆ.

    ಇತಿಹಾಸ ಸಾರುವ ಮೂರ್ತಿಗಳು: ಪ್ರಾಚೀನ ಇತಿಹಾಸ ಸಾರುವ ತೊನಸನಳ್ಳಿ ಗ್ರಾಮದ ಮಹಾದ್ವಾರ ಹತ್ತಿರದ ಪ್ರಾಚೀನ ವೀರಭದ್ರೇಶ್ವರ ದೇವಸ್ಥಾನ ಎದುರಿನ ಕಟ್ಟೆಯಲ್ಲಿ ಮೂರು ವೀರಗಲ್ಲು, ನಾಗರ ಮತ್ತು ಗಣೇಶ ಮೂರ್ತಿಗಳಿವೆ. ವೀರಭದ್ರೇಶ್ವರ ಸಮುದಾಯ ಭವನ ಬಳಿ ಮೂರು ಸಣ್ಣ ವೀರಗಲ್ಲುಗಳನ್ನು ಗ್ರಾಮಸ್ಥರು ಸಂಗ್ರಹಿಸಿ ಇಟ್ಟಿದ್ದಾರೆ. ಈಗ ಸಿಕ್ಕಿರುವ ಮೂರ್ತಿ, ಹಿಂದಿನಿಂದಲೂ ದೇವಸ್ಥಾನದ ಮುಂದಿನ ವೀರಗಲ್ಲುಗಳು ಈ ಗ್ರಾಮ ಒಂದು ರಾಜಕೀಯ, ಧಾರ್ಮಿಕ ಶಕ್ತಿ ಕೇಂದ್ರವಾಗಿತ್ತು ಎಂಬುದನ್ನು ಸಾರಿ ಹೇಳುತ್ತವೆ. ಸುಮಾರು ಆರು ವೀರಗಲ್ಲುಗಳು ತೊನಸನಳ್ಳಿ ವೀರರ ಗ್ರಾಮವಾಗಿತ್ತು ಎಂಬುದನ್ನು ಹೇಳುತ್ತವೆ. ಇದನ್ನು ಪ್ರಾಚ್ಯವಸ್ತು ಇಲಾಖೆ ಸಂಶೋಧನೆ ನಡೆಸಿ ಗ್ರಾಮದ ವೀರ, ಧಾರ್ಮಿಕ ಪರಂಪರೆ ಮೇಲೆ ಬೆಳಕು ಚೆಲ್ಲಬೇಕಾಗಿದೆ.

    ತೊನಸನಳ್ಳಿ(ಎಸ್) ಗ್ರಾಮದಲ್ಲಿ ಸಿಕ್ಕಿರುವುದು ಸೂರ್ಯನಾರಾಯಣ ಮೂರ್ತಿಯಾಗಿದ್ದು, ಪಕ್ಕದ ಎರಡು ಮೂರ್ತಿಗಳು ಸೂರ್ಯನ ಪತ್ನಿ ಉಷಾ, ಪ್ರತ್ಯುಷಾ ಶಿಲ್ಪಗಳಿವೆ. ಇದು ೧೨ನೇ ಶತಮಾನದ ಕೆತ್ತನೆಯ ಮೂರ್ತಿಯಾಗಿದೆ.
    | ಡಾ.ರಾಘವೇಂದ್ರ ಕುಲಕರ್ಣಿ ಖ್ಯಾತ ಸಂಶೋಧಕ, ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts